ಬೆಳಗಾವಿ: ಬೆಳಗಾವಿಯ ಮೂವರು ಯುವಕರು ಕಾಂಬೋಡಿಯಾದಲ್ಲಿ ಸೈಬರ್ ವಂಚಕರ ಕೈಗೆ ಸಿಕ್ಕು, ಒತ್ತೆಯಾಳಾಗಿದ್ದ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಪೊಲೀಸರು ಮೂವರು ಯುವಕರನ್ನು ರಕ್ಷಿಸಿ ತಾಯ್ನಾಡಿಗೆ ಕರೆತಂದಿದ್ದಾರೆ.
ಮೂವರು ಯುವಕರು ಒಂದು ತಿಂಗಳ ಕಾಲ ಕಾಂಬೋಡಿಯಾದಲ್ಲಿ ಸೈಬರ್ ವಂಚಕರ ಒತ್ತೆಯಾಳಾಗಿದ್ದು, ನರಕಯಾತನೆ ಅನುಭವಿಸಿದ್ದರು. ಹಾಂಕಾಂಗ್ ನಲ್ಲಿ ಭಾರತೀಯರಿಗೆ ಉತ್ತಮ ಸಂಬಳದ ಕೆಲಸಗಳಿವೆ. ಡೇಟಾ ಎಂಟ್ರಿ ಆಪರೇಟರ್ ಕೆಲಸಕ್ಕೆ ತಿಂಗಳಿಗೆ 1 ಲಕ್ಷ ಸಂಬಳ ಆರಂಭದಲ್ಲಿಯೇ ಸಿಗುತ್ತದೆ ಎಂದು ಸೈಬರ್ ವಂಚಕರು ಆಮಿಷವೊಡ್ಡಿದ್ದರು. ಒಳ್ಳೆಯ ಸಂಬಳದ ಆಸೆಗೆ ಬೆಳಗಾವಿಯ ಮೂವರು ಯುವಕರು ಏಜೆಂಟ್ ಮೂಲಕ ವಿದೇಶಕ್ಕೆ ಹಾರಿದ್ದಾರೆ. ಮೂವರು ಯುವಕರು ಹಾಂಕಾಂಗ್ ಗೆ ಹೋಗಬೇಕಿತ್ತು. ಆದರೆ ಖದೀಮರು ಇವರನ್ನು ಹಾಂಕಾಂಗ್ ಬದಲಾಗಿ ಕಾಂಬೋಡಿಯಾಗೆ ಕರೆದೊಯ್ದಿದ್ದಾರೆ.
ಹೀಗೆ ಕರೆದೊಯ್ದ ಖದೀಮರು ಮೂವರು ಯುವಕರಿಗೆ ಪ್ರತಿ ದಿನ ಭಾರತದಲ್ಲಿರುವವರಿಗೆ ವಾಟ್ಸಾಪ್, ಇನ್ ಸ್ಟಾ ಗ್ರಾಂ, ಮೊಬೈಲ್ ಮೂಲಕವಾಗಿ ಸೈಬರ್ ವಂಚನೆ ಮಾಡಿಸುತ್ತಿದ್ದರು. ಈ ಕೆಲಸ ಒಪ್ಪುವುದಿಲ್ಲ ನಾವು ಮಾಡುವುದುಲ್ಲ. ನಮ್ಮನ್ನು ಬಿಟ್ಟುಬಿಡಿ ಎಂದು ಯುವಕರು ಕಣ್ಣೀರಿಟ್ಟರೂ ಬಿಟ್ಟಿಲ್ಲ. ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಯುವಕರು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.
ಸದ್ಯ ಬೆಳಗಾವಿ ಮೂಲದ ಆಕಾಶ್ ಕಾಗಣಿಕರ್, ಓಂಕಾರ ಲೊಖಾಂಡೆ, ಸಂಸ್ಕಾರ ಲೊಖಾಂಡೆ ರಕ್ಷಿಸಲ್ಪಟ್ಟ ಯುವಕರು. ಆಕಾಶ್ ಹಾಗೂ ಲೊಖಾಂಡೆ ಸಹೋದರರ ಪೋಷಕರು ಬೆಳಗಾವಿ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಬೆಳಗಾವಿ ಕಮಿಷನರ್ ಗೆ ಮಾಹಿತಿ ನೀದಿದ್ದರು. ಬೆಳಗಾವಿ ಕಮಿಷನರ್ ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದರು.
ಕಾಂಬೋಡಿಯಾ ಪೊಲೀಸರು ಸೈಬರ್ ವಂಚಕರ ಸೆಂಟರ್ ಮೇಲೆ ದಾಳಿ ನಡೆಸಿದ್ದು ಭಾರತ ಸೇರಿದಂತೆ ವಿವಿಧ ದೇಶಗಳ ಒಟ್ಟು 50 ಯುವಕರನ್ನು ರಕ್ಷಿಸಿದ್ದಾರೆ. ಬೆಳಗಾವಿಯ ಮೂವರು ಯುವಕರು ಬೆಳಗಾವಿಯ ಸುರೇಶ್ ಹುಂದ್ರೆ, ಆಸೀಫ್ ಅಲ್ವಾನ್, ಜಾರ್ಖಂಡ್ ಮೂಲದ ಅಮಿತ್ ಮೂಲಕ ತೆರಳಿದ್ದರು. ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬೆಳಗಾವಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

