ಬೆಳಗಾವಿ: ವೈದ್ಯರ ನಿರ್ಲಕ್ಷಕ್ಕೆ ತುಂಬು ಗರ್ಭಿಣಿ ಹಾಗೂ ಆಕೆಯ ಹೊಟ್ಟೆಯಲ್ಲಿದ್ದ ಕಂದಮ್ಮ ಇಬ್ಬರೂ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಈರಮ್ಮ ಶಿಗೀಹಳ್ಳಿ (21) ಮೃತ ಗರ್ಭಿಣಿ. ವೈದ್ಯರ ನಿರ್ಲಕ್ಷಕ್ಕೆ ತಾಯಿ ಹಾಗೂ ಹೊಟ್ಟೆಯಲ್ಲಿದ್ದ ಕಂದಮ್ಮ ಬಲಿಯಾಗಿದ್ದಾಗಿ ಕುಟಿಂಬದವರು ಹಾಗೂ ಸಂಬಂಧಿಕರು ಬಿಮ್ಸ್ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಬೆಳಗಾವಿ ತಾಲೂಕಿನ ತುರಮರಿ ಗ್ರಾಮದ ಗರ್ಭಿಣಿ ಈರಮ್ಮ ಈರಪ್ಪ ಶಿಗೀಹಳ್ಳಿ ಅವರನ್ನು ಏಪ್ರಿಲ್ 10ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸರಿಯಾದ ಚಿಕಿತ್ಸೆ ನೀಡದ ಕಾರಣ ಈರಮ್ಮ ಹಾಗೂ ಹೊಟ್ಟೆಯಲ್ಲಿದ್ದ ಶಿಶು ಸಾವನ್ನಪ್ಪಿವೆ.
ಸಾವಿನ ಬಳಿಕ ಮಧ್ಯರಾತ್ರಿ ಸಹಿ ಪಡೆದು ಮೃತದೇಹವನ್ನು ಕಳುಹಿಸಲು ಯತ್ನಿಸಿದ್ದಾಗಿ ತಿಳಿದುಬಂದಿದೆ. ಗರ್ಭಿಣಿ ಸಾವಿಗೆ ಕಾರಣವಾದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಪಿಎಂಸಿ ಠಾಣೆಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

