ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯ ಚರ್ಚೆಗಳು ಭಾರಿ ಗರಿಗೆದರಿರುವ ಬೆನ್ನಲ್ಲೇ, ರಾಜ್ಯದ ಅತಿ ದೊಡ್ಡ ಜಿಲ್ಲೆಯಾದ ಬೆಳಗಾವಿಯ ಕೈ ನಾಯಕರ ಲಾಬಿ ಮತ್ತು ರಾಜಕೀಯ ಲೆಕ್ಕಾಚಾರಗಳು ದೆಹಲಿ ಮಟ್ಟದವರೆಗೆ ತಲುಪಿವೆ. ಈಗಾಗಲೇ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಲಭಿಸಿದೆ. ಆದರೆ ಜಿಲ್ಲೆಯ ಗಾತ್ರ ಮತ್ತು ರಾಜಕೀಯ ಪ್ರಾಮುಖ್ಯತೆ ದೃಷ್ಟಿಯಿಂದ ಬೆಳಗಾವಿಗೆ ಇನ್ನೂ ಕನಿಷ್ಠ ಎರಡು ಸಚಿವ ಸ್ಥಾನಗಳು ಸಿಗಲೇಬೇಕು ಎಂಬ ಕಡಕ್ ಒತ್ತಾಯ ಕಾಂಗ್ರೆಸ್ ಪಾಳಯದಲ್ಲಿ ಕೇಳಿಬರುತ್ತಿದೆ.
ಸದ್ಯ ಸಚಿವ ಸ್ಥಾನಕ್ಕಾಗಿ ಜಿಲ್ಲೆಯ ಅರ್ಧ ಡಜನ್ ಶಾಸಕರು ಭಾರಿ ಕಸರತ್ತು ನಡೆಸುತ್ತಿದ್ದು, ಯಾರಿಗೆ ಅದೃಷ್ಟ ಒಲಿಯಲಿದೆ ಎಂಬ ಕುತೂಹಲ ತಾರಕಕ್ಕೇರಿದೆ. ಸಚಿವ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಪ್ರಮುಖ ನಾಯಕರ ಲೆಕ್ಕಾಚಾರಗಳು ಹೀಗಿವೆ:
ವಚನ ಪಾಲನೆಯ ನಿರೀಕ್ಷೆಯಲ್ಲಿ ಲಕ್ಷ್ಮಣ ಸವದಿ
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವಾಗ ಹಾಗೂ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ತಮಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು ಎಂದು ಹಿರಿಯ ನಾಯಕ ಲಕ್ಷ್ಮಣ ಸವದಿ ಹೇಳುತ್ತಿದ್ದಾರೆ. ಉತ್ತರ ಕರ್ನಾಟಕ ಮತ್ತು ಗಡಿ ಭಾಗದಲ್ಲಿ ಕಾಂಗ್ರೆಸ್ ಸಂಘಟನೆಗೆ ತಾವು ನೀಡಿದ ಕೊಡುಗೆಯನ್ನೇ ಪ್ರಮುಖ ಅರ್ಹತೆಯಾಗಿ ಬಿಂಬಿಸುತ್ತಿರುವ ಸವದಿ, ಹೈಕಮಾಂಡ್ ಮೇಲೆ ಸೌಮ್ಯ ಒತ್ತಡ ಹೇರುತ್ತಿದ್ದಾರೆ.
ಲಕ್ಷ್ಮೀ ಹೆಬ್ಬಾಳಕರ್
ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಆಡಳಿತಾತ್ಮಕ ಅನುಭವ ಮತ್ತು ಮಹಿಳಾ ಮತದಾರರ ಮೇಲಿರುವ ಪ್ರಭಾವ ದೊಡ್ಡ ಪ್ಲಸ್ ಪಾಯಿಂಟ್. ಈ ಹಿಂದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆಯಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ಇದೇ ಕಾರಣಕ್ಕೆ ಅವರು ನಿಭಾಯಿಸಿದ್ದ ಖಾತೆಯನ್ನು ಹೈಕಮಾಂಡ್ ಇದುವರೆಗೆ ಯಾರಿಗೂ ಹಂಚಿಕೆ ಮಾಡದೆ ಬಾಕಿ ಉಳಿಸಿಕೊಂಡಿದೆ ಎಂಬ ವಾದ ಬೆಂಬಲಿಗರದ್ದಾಗಿದೆ.
ಗಣೇಶ ಹುಕ್ಕೇರಿ
ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಅವರ ಹೆಸರೂ ಆಕಾಂಕ್ಷಿಗಳ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿದೆ. ಪ್ರಭಾವಿ ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿರುವ ಇವರು, ಚಿಕ್ಕೋಡಿ ಭಾಗಕ್ಕೂ ಸಚಿವ ಸ್ಥಾನ ದೊರೆಯಬೇಕೆಂಬ ಪ್ರಾದೇಶಿಕ ಸಮತೋಲನದ ವಾದದೊಂದಿಗೆ ಮಂತ್ರಿಗಿರಿಗೆ ಬೇಡಿಕೆ ಇಟ್ಟಿದ್ದಾರೆ.
ಅಶೋಕ ಪಟ್ಟಣ ಹಾಗೂ ರಾಜು ಕಾಗೆ
ಹಿರಿಯ ಶಾಸಕರಾದ ಬೈಲಹೊಂಗಲದ ಮಹಾಂತೇಶ ಕೌಜಲಗಿ ಹಾಗೂ ರಾಮದುರ್ಗದ ಅಶೋಕ ಪಟ್ಟಣ ಕೂಡ ತಮ್ಮದೇ ರಾಜಕೀಯ ನೆಲೆ ಮತ್ತು ಕಾರ್ಯಕ್ಷಮತೆ ಆಧಾರದ ಮೇಲೆ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ. ಬಿಡಿಸಿಸಿ ಬ್ಯಾಂಕ್ ಪ್ರವೇಶದ ಅವಕಾಶ ಕೈಚೆಲ್ಲಿದ್ದ ಅಶೋಕ ಪಟ್ಟಣ ಹಾಗೂ ಮತ್ತೊಬ್ಬ ಹಿರಿಯ ನಾಯಕ ರಾಜು ಕಾಗೆ ಅವರು ಹಿರಿತನದ ಆಧಾರದ ಮೇಲೆ ತಮಗೆ ನ್ಯಾಯ ಸಿಗಬೇಕೆಂದು ಕಾಯುತ್ತಿದ್ದಾರೆ.
ಸತೀಶ್ ಜಾರಕಿಹೊಳಿ ಬೆಂಬಲ ಕೋರಿದ ಆಸೀಫ್ ಸೇಠ್
ಬಹಿರಂಗವಾಗಿ ಹೆಚ್ಚು ಸದ್ದು ಮಾಡದಿದ್ದರೂ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಸಚಿವರಾಗುವ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂಬ ಕಾರ್ಡ್ ಬಳಸಿ, ತಮ್ಮ ಆಪ್ತರಾದ ಸತೀಶ್ ಜಾರಕಿಹೊಳಿ ಅವರು ಹೈಕಮಾಂಡ್ ಮಟ್ಟದಲ್ಲಿ ತಮಗಾಗಿ ಬ್ಯಾಟಿಂಗ್ ಮಾಡಲಿ ಎಂದು ಬೆಂಬಲಿಗರ ಮೂಲಕ ಶತಪ್ರಯತ್ನ ನಡೆಸಿದ್ದಾರೆ.
ಸತೀಶ್ ಜಾರಕಿಹೊಳಿ ನಿರ್ಣಾಯಕ: ಮಂತ್ರಿಗಿರಿ ಸಿಗದಿದ್ರೆ ಪರ್ಯಾಯ ಪ್ಲಾನ್
ಬೆಳಗಾವಿ ರಾಜಕೀಯ ಸಮೀಕರಣಗಳಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ತಪ್ಪಿರುವ ಹಿನ್ನೆಲೆಯಲ್ಲಿ, ಸಂಪುಟ ವಿಸ್ತರಣೆಯ ವೇಳೆ ಅವರ ಅಭಿಪ್ರಾಯ ಹೈಕಮಾಂಡ್‌ಗೆ ನಿರ್ಣಾಯಕವಾಗಲಿದೆ.
ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?:
ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆ ಶೀಘ್ರದಲ್ಲೇ ನಡೆಯಲಿದ್ದು, ಬೆಳಗಾವಿ ಜಿಲ್ಲೆಗೆ ಮತ್ತಷ್ಟು ಸಚಿವ ಸ್ಥಾನಗಳು ದೊರೆಯುವ ವಿಶ್ವಾಸವಿದೆ. ಹಲವು ಸ್ಥಾನಗಳು ಖಾಲಿ ಇದ್ದು, ಅವುಗಳನ್ನು ಹೆಚ್ಚು ದಿನ ಖಾಲಿ ಇಡಲು ಸಾಧ್ಯವಿಲ್ಲ. ಈ ತಿಂಗಳೊಳಗೆ ಸಂಪುಟ ವಿಸ್ತರಣೆ ನಡೆದರೆ ಉತ್ತಮ.

