ಬೆಳಗಾವಿ: ಪ್ರಸಕ್ತ ಸಾಲಿನಲ್ಲಿ ನಡೆಯಲಿರುವ ವಿಧಾನಮಂಡಳ ಚಳಿಗಾಲ ಅಧಿವೇಶನವನ್ನು ಯಶಸ್ವಿಗೊಳಿಸಲು ಎಲ್ಲ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರಜರುಗಿದ ಚಳಿಗಾಲ ಅಧಿವೇಶನ-2026 ರ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಬಾರಿಯ ಚಳಿಗಾಲದ ಅಧಿವೇಶನ ಸಿದ್ಧತೆಗೆ ಸಮಯಾವಕಾಶವಿದ್ದು, ಅಧಿವೇಶನ ಯಶಸ್ವಿಗಾಗಿ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಹೇಳಿದರು.
ಅಧಿವೇಶನದ ಯಶಸ್ವಿಗಾಗಿ ಉಪ ಸಮಿತಿಗಳನ್ನು ರಚಿಸಲಾಗುವುದು. ಎಲ್ಲ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ತಿಳಿಸಿದರು.
ಅಧಿವೇಶನಕ್ಕೆ ಆಗಮಿಸುವ ಸಚಿವರು, ಗಣ್ಯರುಗಳಿಗೆ ಸೂಕ್ತ ವಸತಿ, ಊಟ ಹಾಗೂ ಸಾರಿಗೆ ವ್ಯವಸ್ಥೆಯನ್ನು ಒದಗಿಸಬೇಕು.
ಅಧಿವೇಶನಕ್ಕಾಗಿ ಆಗಮಿಸುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಸಚಿವರುಗಳಿಗೆ ಶಿಷ್ಟಾಚಾರದಲ್ಲಿ ಯಾವುದೇ ಲೋಪವಾಗದಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ನಿಗಾವಹಿಸಬೇಕು.
ಅಧಿವೇಶನಕ್ಕೆ ಆಗಮಿಸುವ ಗಣ್ಯರುಗಳಿಗೆ ಸೂಕ್ತ ವಸತಿ ವ್ಯವಸ್ಥೆ ಒದಗಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ವಸತಿಗಾಗಿ ಗುರುತಿಸಲಾಗುವ ಹೊಟೇಲ್ ಗಳ ಮಾಲಿಕರೊಂದಿಗೆ ಚರ್ಚಿಸಿ ಕೊಠಡಿಗಳನ್ನು ಕಾಯ್ದಿರಿಸಲು ತಿಳಿಸಿದರು.
ಅಧಿವೇಶನದ ಸಂದರ್ಭದಲ್ಲಿ ಸುವರ್ಣ ಸೌಧದಲ್ಲಿ ಅಂತರ್ಜಾಲ ಸಂಪರ್ಕದಲ್ಲಿ ಯಾವುದೇ ಅಡೆತಡೆಗಳು ಆಗಬಾರದು.
ಗಣ್ಯರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಅಧಿವೇಶನಕ್ಕೆ ಆಗಮಿಸುವ ಸಿಬ್ಬಂದಿಗಳ ವಸತಿ ಪ್ರದೇಶಗಳಲ್ಲಿ ತುರ್ತು ವೈದ್ಯಕೀಯ ತಂಡಗಳನ್ನು ನಿಯೋಜಿಸಬೇಕು.
ಒಟ್ಟಾರೆಯಾಗಿ ಪ್ರಸಕ್ತ ಸಾಲಿನ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಯಾವುದೇ ಲೋಪಗಳಿಗೆ ಆಸ್ಪದ ನೀಡಬಾರದು. ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಅಧಿವೇಶನ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೂಚಿಸಿದರು.
ಸಭೆಯಲ್ಲಿ ಪೋಲಿಸ್ ಆಯುಕ್ತರಾದ ಪ್ರಕಾಶ ನಿಕಮ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮರಾಜನ್. ಕೆ, ಪ್ರಶಿಕ್ಷಣಾರ್ಥಿ ಆಯ್.ಎ.ಎಸ್. ಅಧಿಕಾರಿ ರೋಹಿತ್ ಸಿಂಗ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ವಿದ್ಯಾರ್ಥಿವೇತನ, ಪ್ರೋತ್ಸಾಹಧನ ಮತ್ತು ವಿದ್ಯಾರ್ಥಿನಿಲಯ ಪ್ರವೇಶಾತಿಗೆ ಅರ್ಜಿ ಆಹ್ವಾನ
ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆಯು 2026-27ನೇ ಸಾಲಿನಲ್ಲಿ ವಿದ್ಯಾರ್ಥಿವೇತನ, ಪ್ರೋತ್ಸಾಹಧನ, ಮತ್ತು ವಿದ್ಯಾರ್ಥಿನಿಲಯ ಪ್ರವೇಶಕ್ಕಾಗಿ ವಿದ್ಯಾರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ.
ಶಿವಮೊಗ್ಗ ತಾಲ್ಲೂಕಿನ ವಿವಿಧ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನವೀನ ಮತ್ತು ನವೀಕರಣ ವಿದ್ಯಾರ್ಥಿಗಳು “ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹಧನ ಅಭಿಯಾನ ಕಾರ್ಯಕ್ರಮದಡಿ ಆನ್ಲೈನ್ ಮೂಲಕ ಇಲಾಖಾ ವೆಬ್ ಸೈಟ್ ವಿಳಾಸ: www.sw.kar.nic.in ಹಾಗೂ twd.karnataka.gov.in ಅಥವಾ ಎಸ್.ಎಸ್.ಪಿ.ಪೋರ್ಟಲ್ ಹಾಗೂ ಹೆಚ್.ಎಂ.ಐ.ಎಸ್ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ, ಸಹಾಯಕ ನಿರ್ದೇಶಕರು(ಗ್ರೇಡ್-1) ರವರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ವಿದ್ಯಾನಗರ, ಬಿ.ಹೆಚ್.ರಸ್ತೆ, ಶಿವಮೊಗ್ಗ, ದೂ. ಸಂ.: 08182-240512/ 9480843194 ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್-1) ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

