ಸಾಲ ವಸೂಲಾತಿ ಏಜೆಂಟ್ಗಳ ಕಿರುಕುಳಕ್ಕೆ ಬ್ರೇಕ್ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ನಿರ್ಧಾರ ಕೈಗೊಂಡಿದೆ. ಸಾಲ ವಸೂಲಾತಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಮರ್ಯಾದಯುತವಾಗಿ ನಡೆಸಲು ಫೆಬ್ರವರಿ 12, 2026 ರಂದು ಪ್ರಮುಖ ತಿದ್ದುಪಡಿ ಆದೇಶಗಳನ್ನು ಬಿಡುಗಡೆ ಮಾಡಿದೆ.
ಪ್ರಮುಖ ಮುಖ್ಯಾಂಶಗಳು:
• ಸಾರ್ವಜನಿಕ ಅಭಿಪ್ರಾಯ: ಈ ಹೊಸ ನಿಯಮಗಳು ಜುಲೈ 1, 2026 ರಿಂದ ದೇಶಾದ್ಯಂತ ಜಾರಿಗೆ ಬರಲಿವೆ. ಈ ಕುರಿತು ಮಾರ್ಚ್ 6ರೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ನೀಡಲಾಗಿದೆ.
• ಕಡ್ಡಾಯ ತರಬೆತಿ ಮತ್ತು ಪ್ರಮಾಣಪತ್ರ: ಇನ್ಮುಂದೆ ಬ್ಯಾಂಕುಗಳು ಯಾರನ್ನು ಬೇಕಾದರೂ ವಸೂಲಾತಿ ಏಜೆಂಟರನ್ನಾಗಿ ನೇಮಿಸುವಂತಿಲ್ಲ. ಏಜೆಂಟ್ಗಳು ಕಡ್ಡಾಯವಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಅಂಡ್ ಫೈನಾನ್ಸ್ (IIBF) ನಡೆಸುವ ‘ಡೆಟ್ ರಿಕವರಿ’ ತರಬೇತಿ ಪೂರ್ಣಗೊಳಿಸಿ ಪ್ರಮಾಣಪತ್ರ ಹೊಂದಿರಲೇಬೇಕು.
• ಹಿನ್ನೆಲೆ ತಪಾಸಣೆ (Due Diligence): ಏಜೆಂಟರನ್ನು ನೇಮಿಸಿಕೊಳ್ಳುವ ಮೊದಲು ಬ್ಯಾಂಕುಗಳು ಅವರ ಹಿನ್ನೆಲೆಯನ್ನು ಕೂಲಂಕಷವಾಗಿ ಪರಿಶೀಲಿಸುವುದು ಕಡ್ಡಾಯವಾಗಿದೆ.
• ಗೌಪ್ಯತೆ ಮತ್ತು ಸಮಯ ಪಾಲನೆ: ಏಜೆಂಟ್ಗಳು ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ಸಾಲಗಾರರನ್ನು ಸಂಪರ್ಕಿಸಬೇಕು. ಅ ಸಮಯದಲ್ಲಿ ಕರೆ ಮಾಡುವುದು, ಅಶ್ಲೀಲ ಪದಬಳಕೆ ಅಥವಾ ಬೆದರಿಕೆ ಹಾಕಿದರೆ ಸಂಬಂಧಪಟ್ಟ ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಸೂಲಾತಿಗೆ ಅಗತ್ಯವಿರುವ ಮಾಹಿತಿಯನ್ನು ಮಾತ್ರ ಏಜೆಂಟರಿಗೆ ನೀಡಬೇಕು, ಸಾಲಗಾರರ ವೈಯಕ್ತಿಕ ಗೌಪ್ಯತೆಗೆ ಧಕ್ಕೆ ತರಬಾರದು ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
• ದೂರು ಇದ್ದರೆ ವಸೂಲಾತಿ ಸ್ಥಗಿತ: ಒಂದು ವೇಳೆ ಸಾಲಗಾರನು ಬ್ಯಾಂಕ್ ಅಥವಾ ಏಜೆಂಟ್ ವರ್ತನೆಯ ಬಗ್ಗೆ ದೂರು ನೀಡಿದರೆ, ಆ ದೂರು ಇತ್ಯರ್ಥವಾಗುವವರೆಗೆ ವಸೂಲಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಆ ಪ್ರಕರಣವನ್ನು ಏಜೆಂಟರಿಗೆ ವಹಿಸಬಾರದು.
• ನಡವಳಿಕೆ ನಿಯಮಾವಳಿ (Code of Conduct): ಬ್ಯಾಂಕುಗಳು ತಮ್ಮ ಉದ್ಯೋಗಿಗಳು ಮತ್ತು ಏಜೆಂಟರಿಗಾಗಿ ಪ್ರತ್ಯೇಕ ‘ನಡವಳಿಕೆ ನಿಯಮಾವಳಿ’ಯನ್ನು ರೂಪಿಸಿಕೊಳ್ಳಬೇಕು.
• TRAI ನಿಯಮಗಳ ಪಾಲನೆ: ಬ್ಯಾಂಕುಗಳು ಆರ್ಬಿಐ ಆದೇಶಗಳ ಜೊತೆಗೆ TRAI (ಟೆಲಿಕಾಂ ನಿಯಂತ್ರಣ ಪ್ರಾಧಿಕಾರ) ಮಾರ್ಗಸೂಚಿಗಳನ್ನು ಪಾಲಿಸಬೇಕು. ವಾಣಿಜ್ಯ ಮಾಹಿತಿ ನೀಡುವಾಗ ‘ಟೆಲಿಕಾಂ ಕಮರ್ಷಿಯಲ್ ಕಮ್ಯುನಿಕೇಷನ್ಸ್ ರೆಗ್ಯುಲೇಷನ್ಸ್ (2018)’ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ.
ಈ ತಿದ್ದುಪಡಿಗಳಿಂದಾಗಿ ಸಾಲ ವಸೂಲಾತಿ ಹೆಸರಿನಲ್ಲಿ ನಡೆಯುವ ಅನಗತ್ಯ ಒತ್ತಡ ಮತ್ತು ಕಿರುಕುಳಗಳು ಕಡಿಮೆಯಾಗಿ, ಸಾಲಗಾರರಿಗೆ ಕಾನೂನುಬದ್ಧ ರಕ್ಷಣೆ ಮತ್ತು ಭರವಸೆ ಸಿಗಲಿದೆ.

