ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಹುದ್ದೆಗೆ ರಾಜೀನಾಮೆ ಕೊಡುವಂತೆ ಸಿಎಂ ಡಿ.ಕೆ.ಶಿವಕುಮಾರ್ ಬಸಬರಾಜ್ ಹೊರಟ್ಟಿ ಅವರಿಗೆ ಕರೆ ಮಾಡಿ ಸೂಚಿಸಿದ್ದಾರೆ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಸ್ವತಃ ಹೊರಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಸಭಾಪತಿ ಹುದ್ದೆಗೆ ರಾಜೀನಾಮೆ ಕೊಡುವಂತೆ ಸಿಎಂ ನನಗೆ ಕರೆ ಮಾಡಿಲ್ಲ. ಇದು ಗಾಳಿ ಸುದ್ದಿ, ನನಗೆ ಯಾರೂ ನೇರವಾಗಿ ರಾಜೀನಾಮೆ ಕೇಳಿಲ್ಲ. ಕೇಳಿದರೆ ನಾನು ತಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಆಸ್ಪತ್ರೆಯಲ್ಲಿದ್ದೆ. ಹೀಗಾಗಿ ಆರೋಗ್ಯ ವಿಚಾರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಫೋನ್ ಮಾಡಿದ್ದರು. ಆದರೆ ರಾಜೀನಾಮೆ ಬಗ್ಗೆ ಅವರು ಮಾತನಾಡಿಲ್ಲ. ರಾಜೀನಾಮೆ ಕೇಳಿದರೆ ನಾನು ತಕ್ಷಣ ನೀಡುತ್ತೇನೆ. ಯಾವತ್ತೂ ಕುರ್ಚಿಗೆ ಅಂಟಿಕೊಂಡು ಕೂರುವುದಿಲ್ಲ ಎಂದರು.
1956ರಿಂದ ಇಲ್ಲಿಯವರೆಗೆ ಎಲ್ಲರೂ ತಮ್ಮ ಅವಧಿ ಮುಗಿಸಿದ್ದಾರೆ. ಸರ್ಕಾರ ಬದಲಾವಣೆಯಾದಾಗ ಸಭಾಪತಿ ಬದಲಾವಣೆ ಮಾಡಿಲ್ಲ. ಬಹುಮತ ಇದ್ದಾಗಲೂ ಬದಲಾವಣೆ ಆಗಿಲ್ಲ. ಜುಲೈ 2028ರವರೆಗೆ ನನ್ನ ಅವಧಿ ಇದೆ. ಇಲ್ಲಿಯವರೆಗೆ ಸಭಾಪತಿ ವಿರುದ್ಧ ಅವಿಶ್ವಾಸ ಮಂಡಿಸಿದ ಉದಾಹರಣೆ ಇಲ್ಲ. ಈವರೆಗೆ ಸಭಾಪತಿ ಆಗಲು ಎಲ್ಲರೂ ಹಿಂದುಮುಂದು ನೋಡುತ್ತಿದ್ದರು. ಇದೀಗ ಯಾಕೆ ಎಲ್ಲರಿಗೂ ಸಭಾಪತಿ ಹುದ್ದೆಯ ಬಗ್ಗೆ ಪ್ರೀತಿ ಬಂದಿದೆಯೋ ಗೊತ್ತಿಲ್ಲ ಎಂದು ಹೊರಟ್ಟಿ ತಿಳಿಸಿದರು.
ಇಬ್ಬರು ಕಾಂಗ್ರೆಸ್ ಸದಸ್ಯರು ಸಭಾಪತಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಅವರೇ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಅವರು ಸಭಾಪತಿ ಆಗಲ್ಲ. ನಾನು ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ಕೆಲವರು ಸಭಾಪತಿ ಆಗಲು ನನಗೆ ಕಿರಿಕಿರಿ ಮಾಡುತ್ತಿದ್ದಾರೆ ಅಂತಾ ಈ ಹಿಂದೆ ಸಿಎಂ ಹೇಳಿದ್ದರು. ಆನಂತರ ಮಾತಾಡೋಣ ಅಂತ ತಿಳಿಸಿದ್ದರು. ಆದರೆ ಇಲ್ಲಿಯವರೆಗೆ ಮಾತಾಡಿಲ್ಲ. ನೋಟಿಸ್ ಪಡೆದು, ಅವಿಶ್ವಾಸ ಮಂಡನೆ ಮಾಡುವವರೆಗೆ ಕಾಯುವುದಿಲ್ಲ. ಅಷ್ಟು ನಿರ್ಲಜ್ಜಕ್ಕೆ ನಾನು ಹೋಗುವುದಿಲ್ಲ. ಸಭಾಪತಿಯನ್ನು ಇಳಿಸಲು ಸೂಕ್ತ ಕಾರಣ ಇರಬೇಕು ಎಂದು ಹೇಳಿದರು.

