ಬೆಂಗಳೂರು: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಆಗಸ್ಟ್ 14ರಂದು ರಾಜೀನಾಮೆ ಕೊಡುತ್ತೇನೆ ಎಂದು ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಇಂದು ಸಭಾಪತಿ ಬಸವರಾಜ್ ಹೊರಟ್ಟಿ ನಿವಾಸಕ್ಕೆ ಭೇಟಿ ನೀಡಿ ರಾಜೀನಾಮೆ ನೀಡುವಂತೆ ಮತ್ತೊಮ್ಮೆ ಚರ್ಚಿಸಿದ್ದಾರೆ. ಹರಿಪ್ರಸಾದ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಹೊರಟ್ಟಿ, ಪದೇ ಪದೇ ರಾಜೀನಾಮೆ ನೀಡಿವಂತೆ ಆಡಳಿತ ಪಕ್ಷದವರು ಒತ್ತಡ ಹೇರುತ್ತಿದ್ದಾರೆ. ಆಗಸ್ಟ್ 14ರಂದು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದರು.
ಈಗಾಗಲೇ ಸಿಎಂ ಡಿ.ಕೆ.ಶಿವಕುಮಾರ್ ಕರೆ ಮಾಡಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ ಎಂದಿದ್ದಾರೆ. ಸಭಾಪತಿ ಹುದ್ದೆ ಎಂಬುದು ಯಾವುದೇ ಪಕ್ಷಕ್ಕೆ ಸಂಬಂಧಪಟ್ಟಿದ್ದಲ್ಲ. ಇದು ಸಂವಿಧಾನಿಕ ಹುದ್ದೆ. ಆದರೆ ಇಲ್ಲಿ ಪದೇ ಪದೇ ಆಡಳಿತ ಪಕ್ಷದವರು ಒತ್ತಾಯಿಸುತ್ತಿರುವುದು ಆ ಸ್ಥಾನಕ್ಕೆ ಅಗೌರವ ತೋರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ರಾಜೀನಾಮೆ ನೀಡದಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸುತ್ತಾರಂತೆ. ನನಗೆ ಗೌರವ ಕಳೆದುಕೊಳ್ಳಲು ಇಷ್ಟವಿಲ್ಲ. ಸಭಾಪತಿಯಾಗಿ ನಾನು ಸಾಕಷ್ಟು ಗೌರವ ಸಂಪಾದಿಸಿದ್ದೇನೆ. ಯಾವೊಂದು ಪಕ್ಷದ ಪರ ನಿಲುವು ಹೊಂದದೇ ಕಾರ್ಯನಿರ್ವಹಿಸಿದ್ದೇನೆ. ಈಗ ಪದೇ ಪದೇ ರಾಜೀನಾಮೆ ಕೇಳುತ್ತಿರುವುದು ನೋವುಂಟು ಮಾಡಿದೆ. ಆಗಸ್ಟ್ 14ರಂದು ರಾಜೀನಾಮೆ ಕೊಡುತ್ತಿದ್ದೇನೆ ಎಂದು ಹೇಳಿದರು.

