HomeLive Newsರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಸಂಸದ ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಸಂಸದ ಬಸವರಾಜ ಬೊಮ್ಮಾಯಿ

ಹಾವೇರಿ: ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದರೆ ಬಿಜೆಪಿ ಕಾರ್ಯಕರ್ತರ ಮೇಲೆ ಒತ್ತಡ ಹಾಕಿ. ಕೇಸ್ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಪ್ರಜಾಪಭುತ್ವ ಇಲ್ಲ. ಅಘೋಷಿತ ತುರ್ತುಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ನಮ್ಮ ಕರ್ತವ್ಯ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹಾವೇರಿಯಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ 45ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 1975 ರಲ್ಲಿ ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರಿಂದ ಯಾರಿಗೂ ಸ್ವಾತಂತ್ರ್ಯ ಇರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಂದ ಶುರುವಾದ ಹೋರಾಟ ಸಂಪೂರ್ಣ ಕ್ರಾಂತಿಯಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಅಡ್ವಾಣಿಯವರು ಎಲ್ಲರೂ ನುಗ್ಗಿದರು.
1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ 1952ರ ವರೆಗೂ ರಾಷ್ಟ್ರೀಯ ಸರ್ಕಾರ ಇತ್ತು. ಯಾವುದೇ ಪಕ್ಷದ ಸರ್ಕಾರ ಇರಲಿಲ್ಲ. ಆ ಸರ್ಕಾರದಲ್ಲಿ ಶಾಮ ಪ್ರಸಾದ್ ಮುಖರ್ಜಿ ಅವರೂ ಇದ್ದರೂ, ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದನ್ನು ವಿರೋಧಿಸಿ ಒಂದು ದೇಶದಲ್ಲಿ ಒಬ್ಬರೇ ಪಧಾನಿ ಇರಬೇಕು. ಏಕ್ ನಿಶಾನ್ ಏಕ್ ಪ್ರಧಾನ್ ಎಂದು ಘೋಷಿಸಿ ರಾಜೀನಾಮೆ ನೀಡಿ ಹೊರಬಂದು ಹೋರಾಟ ಮಾಡಿದ ಧೀಮಂತ ನಾಯಕ ಶಾಮ ಪ್ರಸಾದ್ ಮುಖರ್ಜಿ. ಅವರಿಗಿಂತ ಮುಂಚೆ ದೀನ್ ದಯಾಳ್ ಉಪಾಧ್ಯಾಯ ಅವರು ಏಕ್ ಆತ್ಮ ಎಂಬ ಮಹಾನ್ ಉದ್ದೇಶದ ಮೂಲಕ ಈ ಸಂಸ್ಥೆಯನ್ನು ಕಟ್ಟಿದರು. ಅದರ ಮೂಲ ಧೈಯ ಅಂತ್ಯೋದಯ ಆಗಿತ್ತು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯೇ ನಮ್ಮ ಗುರಿ ಅಂತ ತಿಳಿದು ಆರಂಭಿಸಿದರು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದಕ್ಕಿಂತಲೂ ಮೊದಲು 1925 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿತ್ತು. ಡಾ. ಹೆಡಗೆವಾ‌ರ್ ಅವರು ಮೊದಲ ಸರಸಂಘಚಾಲಕರು ನಂತರ ಗುರೂಜಿಯವರು, ಸಾವರ್ಕರ್ ಹಾಗೂ ಬಾಲಗಂಗಾಧರ ತಿಲಕ ಅವರ ವಿಚಾರಧಾರೆಯ ಹಿನ್ನೆಲೆಯಲ್ಲಿ ಸಂಘ ಸ್ಥಾಪನೆಯಾಗಿತ್ತು. ನಾವೆಲ್ಲರೂ ಭಾರತೀಯರು ಎನ್ನುವ ಭಾವನೆ ಬರಬೇಕು. ಭಾರತೀಯ ಆತ್ಮ ಹಿಂದುತ್ತದಲ್ಲಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಲು ಆರಂಭಿಸಿದರು. ನಮ್ಮ ಪಕ್ಷ ಸ್ಥಾಪನೆಯಾಗಿ ಈಗ ನಾವು 45 ವರ್ಷಗಳನ್ನು ಪೂರೈಸಿದ್ದೇವೆ. ನಮಗೆ ನಮ್ಮ ಇತಿಹಾಸ ಗೊತ್ತಿರಬೇಕು. ನಮ್ಮ ಸಂಸ್ಕೃತಿ, ಧೈಯೋದ್ದೇಶ ಗೊತ್ತಿರಬೇಕು. ನಮ್ಮ ನೀತಿಗಳು ಗೊತ್ತಿರಬೇಕು ಎಂದರು.

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅವರು ಹೇಳಿದಷ್ಟೇ ಕಮಿಷನ್ ನಿರ್ಧಾರವಾಗುತ್ತಿದೆ. ಕಳೆದ ವರ್ಷ 40 ಸಾವಿರ ಹೆಚ್ಚಿನ ತೆರಿಗೆ ಹಾಕಿದ್ದರು, ಈ ವರ್ಷ ಬಜೆಟ್ ಇಲ್ಲದೇ 60 ಸಾವಿರ ಕೋಟಿ ಹೆಚ್ಚಿಗೆ ತೆರಿಗೆ ಹಾಕಿದ್ದಾರೆ. ಹಾಲು, ಡಿಸೇಲ್, ಕರೆಂಟ್ ಎಲ್ಲ ದರ ಹೆಚ್ಚಳ ಮಾಡಿದ್ದಾರೆ. ಇವತ್ತು ಅಭಿವೃದ್ಧಿ ಶೂನ್ಯ ಸರ್ಕಾರ ರಾಜ್ಯದಲ್ಲಿದೆ. ಜನ ವಿರೋಧಿ ಸರ್ಕಾರ ಇದೆ. ವಾಜಪೇಯಿ ಅವರು ಹೇಳಿದಂಥ ಧೈನ್ಯತೆ ಇಲ್ಲ. ಪಲಾಯನ ಇಲ್ಲ. ನಮ್ಮ ಕಾರ್ಯಕರ್ತರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಕೇಸ್ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಪ್ರಜಾಪಭುತ್ತ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಯಾರಿಗೆ ಕರ್ತವ್ಯ ಮಾಡುವ ಬದ್ಧತೆ ಇದೆ ಅವರು ಮುಂದೆ ಬರಬೇಕು. ನಮಗೆ ಏನೇ ಕಷ್ಟ ಬರಲಿ ನಾವು ಗಟ್ಟಿಯಾಗಿ ನಿಂತು ಹೋರಾಟ ಮಾಡಬೇಕು. ರಾಜ್ಯದಲ್ಲಿ ಇವತ್ತೇ ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಹಾವೇರಿ ಜಿಲ್ಲೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ, ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವವರೆಗೂ ವಿರಮಿಸುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸೋಣ, ವಿಕಸಿತ ಭಾರತ ಮಾಡಲು ಎಲ್ಲರೂ ಪಯತ್ನ ಪಡೋಣ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular