ಬೆಂಗಳೂರು: ಕೆಲವೊಮ್ಮೆ ಬ್ಯಾಂಕ್‌ಗಳು ವಿವಿಧ ಶುಲ್ಕಗಳ ಹೆಸರಿನಲ್ಲಿ ಗ್ರಾಹಕರ ಖಾತೆಯಿಂದ ತಪ್ಪಾಗಿ ಹಣ ಕಡಿತ ಮಾಡಬಹುದು. ಹೀಗೆ ಹಣ ಕಡಿತವಾದಾಗ ಏಕೆ ಹಣ ತೆಗೆದುಕೊಳ್ಳಲಾಗಿದೆ ಎಂಬುದು ತಿಳಿಯದೆ ಗ್ರಾಹಕರು ಆತಂಕಕ್ಕೆ ಒಳಗಾಗುತ್ತಾರೆ. ಸಾಮಾನ್ಯವಾಗಿ ಬ್ಯಾಂಕ್ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಮಾಹಿತಿ ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ಕೇವಲ ಕಸ್ಟಮರ್ ಸರ್ವಿಸ್ ಸಂಪರ್ಕಿಸಿದ ಮಾತ್ರಕ್ಕೆ ಹಣ ತಕ್ಷಣವೇ ವಾಪಸ್ ಬರುವುದಿಲ್ಲ.
ತಪ್ಪಾಗಿ ಹಣ ಕಡಿತವಾದರೆ ಏನು ಮಾಡಬೇಕು?
ನಿಮ್ಮ ಬ್ಯಾಂಕ್ ಖಾತೆಯಿಂದ ತಪ್ಪಾಗಿ ಹಣ ಡೆಬಿಟ್ ಆಗಿದ್ದರೆ ದೂರು ನೀಡಲು ಹಲವು ಮಾರ್ಗಗಳಿವೆ. ಹಣ ಕಡಿತವಾದ ಕೂಡಲೇ ಮೊದಲು ಬ್ಯಾಂಕ್ ಸಿಬ್ಬಂದಿಯನ್ನು ಸಂಪರ್ಕಿಸಬೇಕು. ಮೂರು ಕೆಲಸದ ದಿನಗಳೊಳಗೆ ದೂರು ನೀಡಿದರೆ ಗ್ರಾಹಕರ ಹೊಣೆಗಾರಿಕೆ ಇರುವುದಿಲ್ಲ. ಇದರಿಂದ ಹಣವನ್ನು ಶೀಘ್ರವಾಗಿ ವಾಪಸ್ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಆದರೆ ದೂರು ನೀಡಲು ವಿಳಂಬ ಮಾಡಿದರೆ ಮತ್ತಷ್ಟು ನಷ್ಟವಾಗುವ ಸಾಧ್ಯತೆ ಇದ್ದು, ಹಣ ವಾಪಸ್ ಪಡೆಯುವುದಕ್ಕೂ ವಿಳಂಬವಾಗಬಹುದು.
ಆನ್‌ಲೈನ್ ಮೂಲಕವೂ ದೂರು ನೀಡಬಹುದು
ಕಸ್ಟಮರ್ ಕೇರ್‌ಗೆ ಕರೆ ಮಾಡುವುದರ ಜೊತೆಗೆ ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಹಾಗೂ ಇ-ಮೇಲ್ ಮೂಲಕವೂ ದೂರು ಸಲ್ಲಿಸಬಹುದು. ಅಲ್ಲದೆ ಬ್ಯಾಂಕ್ ಶಾಖೆಗೆ ತೆರಳಿ ಲಿಖಿತ ರೂಪದಲ್ಲಿಯೂ ದೂರು ನೀಡಬಹುದು.
ಆರ್‌ಬಿಐ ನಿಯಮಗಳ ಪ್ರಕಾರ, ಬ್ಯಾಂಕ್‌ನಿಂದ ತಪ್ಪಾಗಿ ಹಣ ಕಡಿತವಾದ ಸಂದರ್ಭದಲ್ಲಿ ನಿಗದಿತ ಅವಧಿಯೊಳಗೆ ಹಣವನ್ನು ಗ್ರಾಹಕರ ಖಾತೆಗೆ ಮರುಜಮಾ ಮಾಡಬೇಕಾಗುತ್ತದೆ. ವಿಳಂಬವಾದರೆ ಬ್ಯಾಂಕ್ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗಬಹುದು.
ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ
ಕೆಲವೊಮ್ಮೆ ಬ್ಯಾಂಕ್‌ಗಳು ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಮೊತ್ತವನ್ನು ಕಡಿತ ಮಾಡಬಹುದು. ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ ಸ್ಟೇಟ್‌ಮೆಂಟ್, ಶುಲ್ಕಗಳ ವಿವರ ಹಾಗೂ ಬ್ಯಾಂಕ್‌ನೊಂದಿಗೆ ನಡೆಸಿದ ಸಂವಹನದ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.
ಈ ದಾಖಲೆಗಳು ನಿಮ್ಮ ದೂರಿಗೆ ಬಲ ನೀಡುತ್ತವೆ ಮತ್ತು ಹಣವನ್ನು ವಾಪಸ್ ಪಡೆಯುವ ಪ್ರಕ್ರಿಯೆಗೆ ಸಹಾಯ ಮಾಡಬಹುದು. ಬ್ಯಾಂಕ್‌ನಲ್ಲಿ ದೂರು ನೀಡಿದರೂ ಸಮಸ್ಯೆ ಬಗೆಹರಿಯದಿದ್ದರೆ ಆರ್‌ಬಿಐ ಅಂಬುಡ್ಸ್‌ಮನ್‌ಗೆ ದೂರು ಸಲ್ಲಿಸಬಹುದು.
ಆರ್‌ಬಿಐ ಅಂಬುಡ್ಸ್‌ಮನ್‌ಗೆ ದೂರು ನೀಡುವುದು ಹೇಗೆ?
2026ರ ಜುಲೈ 1ರಿಂದ ಆರ್‌ಬಿಐ ಇಂಟಿಗ್ರೇಟೆಡ್ ಅಂಬುಡ್ಸ್‌ಮನ್ ಸ್ಕೀಮ್ ಜಾರಿಯಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರ ಮೂಲಕ ಬ್ಯಾಂಕ್ ಗ್ರಾಹಕರು ಉಚಿತವಾಗಿ ದೂರು ಸಲ್ಲಿಸಬಹುದು.
ಮೊದಲು ಸಂಬಂಧಪಟ್ಟ ಬ್ಯಾಂಕ್‌ಗೆ ದೂರು ನೀಡಬೇಕು. ದೂರು ಸಲ್ಲಿಸಿದ 30 ದಿನಗಳೊಳಗೆ ಬ್ಯಾಂಕ್ ಯಾವುದೇ ಉತ್ತರ ನೀಡದಿದ್ದರೆ, ಅಥವಾ ನೀಡಿದ ಉತ್ತರದಿಂದ ಗ್ರಾಹಕರು ತೃಪ್ತರಾಗದಿದ್ದರೆ, ಅಂಬುಡ್ಸ್‌ಮನ್‌ರನ್ನು ಸಂಪರ್ಕಿಸಬಹುದು. ಅಲ್ಲದೆ, ಆರ್‌ಬಿಐ ಸಹಾಯವಾಣಿ 14448ಕ್ಕೆ ಕರೆ ಮಾಡುವ ಮೂಲಕವೂ ನೆರವು ಪಡೆಯಬಹುದು.

