ಬೆಂಗಳೂರು: ಬಾಂಗ್ಲಾದೇಶ ಸೇರಿದಂತೆ ಬೇರೆ ದೇಶಗಳ ಜನರಿಂದ ಮತಬ್ಯಾಂಕ್ ಸೃಷ್ಟಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡುತ್ತಿದ್ದು, ಇದರ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಬಿಜೆಪಿ ಮುಖಂಡರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಬಾಂಗ್ಲಾ ದೇಶದವರನ್ನು ಶಾಶ್ವತ ನಿವಾಸಿಗಳನ್ನಾಗಿ ಮಾಡುವ ಹುನ್ನಾರ ನಡೆಸಿದೆ. ಇದನ್ನು ತಡೆಯಬೇಕೆಂದು ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಬಾಂಗ್ಲಾ ಪ್ರಜೆಗಳಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡಿ, ಅವರು ಈ ರಾಜ್ಯದ ನಾಗರಿಕರು ಎಂದು ಬಿಂಬಿಸಿ, ರೇಷನ್ ಕಾರ್ಡ್, ಆರೋಗ್ಯ ಕಾರ್ಡ್, ಮನೆ ಯೋಜನೆಗಳನ್ನು ಕಲ್ಪಿಸುವ ಪ್ರಯತ್ನ ನಡೆದಿದೆ. ಈಗಾಗಲೇ ಪಿಎಫ್‌ಐ, ಕೆಎಫ್‌ಡಿ ಮೊದಲಾದ ಸಂಘಟನೆಗಳ ಉಪಟಳ ಜಾಸ್ತಿಯಾಗಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ಹಕ್ಕುಗಳನ್ನು ನೀಡಿದರೆ ಭಯೋತ್ಪಾದನಾ ಚಟುವಟಿಕೆ ಹೆಚ್ಚಲಿದೆ ಎಂದರು.
ರಾಜ್ಯದಲ್ಲಿ ಎಸ್‌ಐಆರ್ ನಡೆಯುತ್ತಿದ್ದು, ಅದರ ಮೂಲಕ ನಿಜವಾದ ಭಾರತೀಯರಿಗೆ ಪೌರತ್ವ ದೊರೆಯುತ್ತದೆ. ಇದಕ್ಕೆ ವಿರುದ್ಧವಾಗಿ ಶಾಶ್ವತ ನಿವಾಸಿ ಪ್ರಮಾಣಪತ್ರ ಹಂಚಲಾಗುತ್ತಿದೆ. ನೈಜೀರಿಯಾ, ಪಾಕಿಸ್ತಾನ, ಬಾಂಗ್ಲಾ ದೇಶದ ನಿವಾಸಿಗಳು ಯಾರು ಎಂದು ತಿಳಿದಿಲ್ಲ. ಅವರನ್ನು ಹೊರಗೆ ಹಾಕುವ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕಿದೆ. ಮುಂದಿನ ಜಿಬಿಎ, ಜಿಲ್ಲಾ ಪಂಚಾಯಿತಿ, ವಿಧಾನಸಭಾ ಚುನಾವಣೆಗಳಲ್ಲಿ ಮತಬ್ಯಾಂಕ್ ಸೃಷ್ಟಿಸಿಕೊಳ್ಳಲು ಕಾಂಗ್ರೆಸ್ ಈ ಕ್ರಮಕ್ಕೆ ಮುಂದಾಗಿದೆ. ಇದರಿಂದ ದೇಶದ ಭದ್ರತೆಗೆ ಧಕ್ಕೆ ಬರಲಿದೆ ಎಂಬ ವಿಚಾರವನ್ನು ರಾಜ್ಯಪಾಲರ ಗಮನಕ್ಕೆ ತರಲಾಗಿದೆ. ಈ ಕುರಿತು ಸರ್ಕಾರಕ್ಕೆ ಎಚ್ಚರಿಕೆ ನೀಡುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಒಕ್ಕೂಟ ವ್ಯವಸ್ಥೆಗೆ ಧಕ್ಕೆ
ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಈ ಪ್ರಸ್ತಾವನೆಯು ಭಾರತದ ಸಂವಿಧಾನದ ಮೂಲ ಆಶಯವನ್ನೇ ಉಲ್ಲಂಘಿಸುತ್ತದೆ. ಪೌರತ್ವ, ವಿದೇಶಿಯರ ಗುರುತಿಸುವಿಕೆ ಹಾಗೂ ವಲಸೆ ಸಂಬಂಧಿತ ವಿಷಯಗಳು ಸಂವಿಧಾನದ ಪ್ರಕಾರ ಸಂಪೂರ್ಣವಾಗಿ ಕೇಂದ್ರ ಸರ್ಕಾರದ (Union List) ವ್ಯಾಪ್ತಿಗೆ ಸೇರಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ‘ಶಾಶ್ವತ ನಿವಾಸ ಪ್ರಮಾಣಪತ್ರ’ ನೀಡುವ ಅಧಿಕಾರವನ್ನು ಸ್ವತಃ ಪಡೆದುಕೊಳ್ಳಲು ಮುಂದಾಗಿರುವುದು ಕಾನೂನುಬಾಹಿರ ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಗೂ ಧಕ್ಕೆ ತರುವಂತಹ ಅಪಾಯಕಾರಿ ನಡೆಯಾಗಿದೆ. ದೇಶಾದ್ಯಂತ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ನಡೆಯುತ್ತಿರುವಾಗ ಇಂತಹ ಸಡಿಲ ನಿಯಮಗಳನ್ನು ಜಾರಿಗೊಳಿಸುವುದು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದಲೂ ಅತ್ಯಂತ ಅಪಾಯಕಾರಿ ಬೆಳವಣಿಗೆ. ಅಕ್ರಮ ವಲಸಿಗರು ನಕಲಿ ದಾಖಲೆಗಳ ಮೂಲಕ ಈ ಪ್ರಮಾಣಪತ್ರ ಪಡೆದು, ಮತದಾನದ ಹಕ್ಕು ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯನ್ನು ಈ ಸರ್ಕಾರವೇ ಸೃಷ್ಟಿಸುತ್ತಿದೆ ಎಂಬ ಆತಂಕವನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಈ ಪ್ರಮಾಣಪತ್ರ ವಿತರಣೆಯ ಅಧಿಕಾರವನ್ನು ಕಂದಾಯ ಇಲಾಖೆಗೆ ನೀಡಿರುವುದು ಭ್ರಷ್ಟಾಚಾರ, ನಕಲಿ ದಾಖಲೆಗಳ ಸೃಷ್ಟಿ ಮತ್ತು ವ್ಯವಸ್ಥೆಯ ದುರುಪಯೋಗಕ್ಕೆ ಬಾಗಿಲು ತೆರೆಯುವಂತಾಗಿದೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ರೂಪಿಸಿರುವ ಈ ಪ್ರಸ್ತಾವನೆಯಿಂದ ಸ್ಥಳೀಯ ಕನ್ನಡಿಗರ ಶಿಕ್ಷಣ, ಉದ್ಯೋಗ ಮತ್ತು ಅವಕಾಶಗಳ ಮೇಲೆಯೇ ಗಂಭೀರ ಪರಿಣಾಮ ಬೀರುವ ಅಪಾಯವಿದೆ ಎಂದು ಆರ್.ಅಶೋಕ ಹೇಳಿದರು.
ಆದ್ದರಿಂದ, ಈ ಅಧಿಸೂಚನೆಯನ್ನು ಹೊರಡಿಸುವ ಮುನ್ನ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲಾಗಿದೆಯೇ, ಭಾರತೀಯ ಪೌರತ್ವ ಪರಿಶೀಲನೆಗೆ ಯಾವ ಕಾನೂನುಬದ್ಧ ಕ್ರಮ ಅನುಸರಿಸಲಾಗಿದೆ ಎಂಬ ಕುರಿತು ಸಮಗ್ರ ವರದಿ ಪಡೆದುಕೊಳ್ಳುವಂತೆ ಹಾಗೂ ಈ ವಿವಾದಾತ್ಮಕ ಪ್ರಸ್ತಾವನೆಯನ್ನು ತಕ್ಷಣವೇ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯಪಾಲರನ್ನು ಮನವಿ ಮಾಡಿದ್ದೇವೆ. ಜೊತೆಗೆ, ಎಸ್‌ಐಆರ್ ಪ್ರಕ್ರಿಯೆ ಆರಂಭವಾದ ಬಳಿಕ ನ್ಯಾಯಾಲಯಗಳು ಹಾಗೂ ಲೋಕ ಅದಾಲತ್‌ಗಳ ಮೂಲಕ ವಿತರಿಸಲಾದ ಜನನ ಪ್ರಮಾಣಪತ್ರಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆಯೂ ಕೋರಿದ್ದೇವೆ. ಕನ್ನಡಿಗರ ಹಕ್ಕುಗಳು, ಸಂವಿಧಾನದ ಗೌರವ ಮತ್ತು ದೇಶದ ಆಂತರಿಕ ಭದ್ರತೆಯ ವಿಚಾರದಲ್ಲಿ ಬಿಜೆಪಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.
ತಪ್ಪಿತಸ್ಥರು ಯಾರು?
ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತಕ್ಕೊಳಗಾದ ಘಟನೆಗೆ ಸರ್ಕಾರವೇ ನೇರ ಕಾರಣ ಎಂದು ವಾದಿಸಿದ್ದೇನೆ. ಆಗ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ವೇದಿಕೆ ಮೇಲೆ ಕುಳಿತು ಕುಟುಂಬಸ ಸಮೇತರಾಗಿ ಕ್ರಿಕೆಟಿಗರ ಜೊತೆ ಸೆಲ್ಫಿ ಪಡೆದವರ ವಿರುದ್ಧ ಕ್ರಮ ವಹಿಸಬೇಕಿದ್ದರೂ, ಅವರ ವಿರುದ್ಧ ಪ್ರಕರಣ ದಾಖಲಿಸಲಿಲ್ಲ. ಪೊಲೀಸ್ ಅಧಿಕಾರಿಗಳ ವಿರುದ್ಧ ಮಾತ್ರ ಕ್ರಮ ವಹಿಸಲಾಗಿತ್ತು. ಈಗ ಎಲ್ಲ ಅಧಿಕಾರಿಗಳಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಅಂದರೆ ತಪ್ಪಿತಸ್ಥರು ಯಾರು ಎಂದು ಸರ್ಕಾರ ಹೇಳಬೇಕಿದೆ. ಮುಂದೆ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಇದನ್ನು ಸಿಬಿಐ ತನಿಖೆ ಮಾಡಿಸುತ್ತೇವೆ. ಸಚಿವರು ಹಾಗೂ ಐಎಎಸ್ ಅಧಿಕಾರಿಗಳ ಕುಟುಂಬದವರು, ಮಕ್ಕಳು, ಮೊಮ್ಮಕ್ಕಳು ಯಾವುದೇ ಶಿಷ್ಟಾಚಾರವಿಲ್ಲದೆ ವೇದಿಕೆಗೆ ಬಂದಿದ್ದರು. ಅವರ ವಿರುದ್ಧ ಕ್ರಮವಿಲ್ಲದೆ, ಕೊನೆಗೆ ಯಾರೂ ತಪ್ಪಿತಸ್ಥರಲ್ಲ ಎಂದು ಸರ್ಕಾರ ಹೇಳುತ್ತಿದೆ. ಇದು ಯುವಜನರಿಗೆ ಮಾಡಿದ ದ್ರೋಹ. ಇದನ್ನು ಜನರು ಕ್ಷಮಿಸಲ್ಲ ಎಂದರು.
ಎಸ್‌ಡಿಆರ್‌ಎಫ್ ಹಣವನ್ನು ಹೇಗೆ ಖರ್ಚು ಮಾಡಲಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಬೇಕು. ಕೇವಲ ದೇವಸ್ಥಾನಗಳಿಗೆ ಹೋಗಿ ದಂಡ ಹಾಕುವುದರಿಂದ ಅಥವಾ ಪತ್ರ ಬರೆಯುವುದರಿಂದ ಪ್ರಯೋಜನವಿಲ್ಲ. ಬರಗಾಲ ಎಂದು ಘೋಷಣೆ ಮಾಡಿ ಅಧ್ಯಯನ ಮಾಡಬೇಕು. ಲೂಟಿ ಹೊಡೆದು ಖಜಾನೆ ಖಾಲಿಯಾಗಿರುವುದರಿಂದ ಅಧ್ಯಯನ ಮಾಡುತ್ತಿಲ್ಲ. ಬರಗಾಲಕ್ಕೆ ಪರಿಹಾರ ನೀಡುವ ಇರುವ ಪ್ರಕ್ರಿಯೆಯನ್ನು ಅನುಸರಿಸಬೇಕು. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಿ, ಬರಗಾಲ ಘೋಷಿಸಿ, ಜಾನುವಾರು ಮೇವಿಗೆ, ಕುಡಿಯುವ ನೀರಿಗೆ, ಕೃಷಿ ನೀರಿಗೆ ಸಹಾಯ ಮಾಡಬೇಕು ಎಂದು ಆಗ್ರಹಿಸಿದರು.

