ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ, ಹತ್ಯೆ ಪ್ರಕರಣ ಮುಂದುವರೆದಿದೆ. ಇಂದು ಮತ್ತೋರ್ವ ಹಿಂದೂ ಯುವಕನನ್ನು ಕಾರು ಹತ್ತಿಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಬಾಂಗ್ಲಾದ ರಾಜ್ ಬರಿ ಜಿಲ್ಲೆಯ ಪೆಟ್ರೋಲ್ ಬಂಕ್ ನಲ್ಲಿ ಈ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕಾರು ಹತ್ತಿಸಿ ಹತ್ಯೆ ಮಾಡಲಾಗಿದೆ. ಪೆಟ್ರೋಲ್ ಬಂಕ್ ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದ ದುರುಳರು ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೇ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಕಾರನ್ನು ತಡೆಯಲು ಹಿಂದೂ ವ್ಯಕ್ತಿ ಯತ್ನಿಸಿದ್ದರು. ಆತನ ಮೇಲೆ ಕಾರು ಹತ್ತಿಸಿ ದುರುಳರು ಅಟ್ಟಹಾಸ ಮೆರೆದಿದ್ದಾರೆ.
ಕಾರು ಡಿಕ್ಕಿ ಹೊಡೆದು ಹಿಂದೂ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧರ್ಮದ ರಿಪನ್ ಸಹಾ (30) ಕೊಲೆಯಾದ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಕಾರಿನ ಮಾಲೀಕ ಅಬುಲ್ ಹಶೀಮ್ ಅಲಿಯಾಸ್ ಸುಜನ್ (55) ಹಾಗೂ ಚಾಲಕ ಕಮಲ್ ಹುಸೇನ್ (43) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅಬುಲ್ ಹಶೀಮ್ ವೃತ್ತಿಯಲ್ಲಿ ಗುತ್ತಿಗೆದಾರ ಎಂದು ತಿಳಿದುಬಂದಿದೆ

