ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಳೆಯ ಜೊತೆಗೆ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಕೆಲವೆಡೆ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಮಳೆಯ ಹಿನ್ನೆಲೆಯಲ್ಲಿ ಕೊಯ್ಲು ಮಾಡಿರುವ ಬೆಳೆಗಳ ಬಗ್ಗೆ ರೈತರು ಹೆಚ್ಚಿನ ಗಮನಹರಿಸಬೇಕಿದೆ. ತೆರೆದ ಜಾಗದಲ್ಲಿ ಬೆಳೆಗಳನ್ನು ಇಡದೆ, ಸಾಧ್ಯವಾದಷ್ಟು ಬೇಗ ಸುರಕ್ಷಿತ ಮತ್ತು ಒಣ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ.
ಗುಡುಗು-ಮಿಂಚು ಸಹಿತ ಮಳೆಯಾಗುವ ಸಂದರ್ಭದಲ್ಲಿ ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸುವುದು ಸೂಕ್ತ. ಮರಗಳ ಕೆಳಗೆ ನಿಲ್ಲದಂತೆ ಹಾಗೂ ಕೆರೆ, ನದಿ, ಹಳ್ಳ-ಕೊಳ್ಳ ಸೇರಿದಂತೆ ಜಲಮೂಲಗಳ ಸಮೀಪ ತೆರಳದಂತೆ ಎಚ್ಚರಿಸಲಾಗಿದೆ.
ಮುಂದಿನ 24-48 ಗಂಟೆಗಳಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆ
ಮುಂಗಾರು ಹಾಗೂ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಕರಾವಳಿ, ಮಲೆನಾಡು ಮತ್ತು ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಮುಂದಿನ 24ರಿಂದ 48 ಗಂಟೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣದಿಂದ ಭಾರೀ ಮಳೆಯಾಗಬಹುದು ಎಂದು ಮುನ್ಸೂಚನೆ ತಿಳಿಸಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ತುಮಕೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಇನ್ನು ಬೆಳಗಾವಿ, ಧಾರವಾಡ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆಯಿದೆ.
ಕೆಲವು ಪ್ರದೇಶಗಳಲ್ಲಿ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ವಾಹನ ಸವಾರರು, ಸಾರ್ವಜನಿಕರು ಹಾಗೂ ರೈತರು ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಒಳಿತು.

