ಬೆಂಗಳೂರು- ಚಿನ್ನದ ಸರ ಕಸಿಯುವ ಉದ್ದೇಶದಿಂದ ಅಂಗಡಿಯೊಂದಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಮಹಿಳೆಗೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಆಕೆಯ ಕೈಗಳನ್ನು ಫೆವಿಕ್ವಿಕ್ ಬಳಸಿ ಟೇಬಲ್ಗೆ ಅಂಟಿಸಿದ ಆತಂಕಕಾರಿ ಘಟನೆ ಇಂದಿರಾನಗರದಲ್ಲಿ ನಡೆದಿದೆ. ಮಹಿಳೆಯ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಕ್ಟೋಬರ್ 31ರಂದು ಬೆಳಿಗ್ಗೆ ಸುಮಾರು 11.45ರ ವೇಳೆಗೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಪ್ರಭುರಾಜ್ ಅಲಿಯಾಸ್ ರಾಜ್ ಎಂಬಾತ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.
ಆರಂಭದಲ್ಲಿ ಅಂಗಡಿಗೆ ಬಂದ ಆರೋಪಿ, ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ನಾಟಕವಾಡಿದ್ದಾನೆ. ಬಳಿಕ ಮಹಿಳೆಯ ಬಳಿ ಆಶ್ರಯ ನೀಡುವಂತೆ ಕೇಳಿಕೊಂಡಿದ್ದಾನೆ. ಆದರೆ, ಕೆಲವೇ ಕ್ಷಣಗಳಲ್ಲಿ ತನ್ನ ವರಸೆ ಬದಲಿಸಿದ ಆತ ಮಹಿಳೆಯ ಮೇಲೆ ದಾಳಿ ನಡೆಸಿ ಚಾಕು ತೋರಿಸಿ ಬೆದರಿಸಿದ್ದಾನೆ. ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು 35 ಗ್ರಾಂ ತೂಕದ, ಅಂದಾಜು 4.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ನೀಡುವಂತೆ ಒತ್ತಾಯಿಸಿದ್ದಾನೆ.
ತಪ್ಪಿಸಿಕೊಳ್ಳದಂತೆ ಕೈಗಳಿಗೆ ಫೆವಿಕ್ವಿಕ್!
ಮಹಿಳೆ ಪ್ರತಿರೋಧ ವ್ಯಕ್ತಪಡಿಸದಂತೆ ಹಾಗೂ ಅಲ್ಲಿಂದ ತಪ್ಪಿಸಿಕೊಳ್ಳದಂತೆ ತಡೆಯಲು ಆರೋಪಿ ಆಕೆಯ ಎರಡೂ ಕೈಗಳಿಗೆ ಫೆವಿಕ್ವಿಕ್ ಸುರಿದು ಅಂಗಡಿಯ ಟೇಬಲ್ಗೆ ಅಂಟಿಸಿದ್ದಾನೆ. ಬಳಿಕ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಿ ಸಹಾಯಕ್ಕಾಗಿ ಮೊರೆ ಇಟ್ಟಿದ್ದಾಳೆ.
ಆಕೆಯ ಕೂಗಾಟ ಕೇಳಿದ ಅಕ್ಕಪಕ್ಕದ ಅಂಗಡಿಯವರು ಹಾಗೂ ದಾರಿಹೋಕರು ತಕ್ಷಣ ಅಂಗಡಿಯೊಳಗೆ ಧಾವಿಸಿದ್ದಾರೆ. ಜನರು ತನ್ನನ್ನು ಸುತ್ತುವರಿದಿರುವುದನ್ನು ಗಮನಿಸಿದ ಆರೋಪಿ, ಮಹಿಳೆಯ ಕುತ್ತಿಗೆಗೆ ಚಾಕು ಹಿಡಿದು ಹತ್ತಿರ ಬಂದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಅಷ್ಟೇ ಅಲ್ಲದೆ, ಜನರಿಂದ ತಪ್ಪಿಸಿಕೊಳ್ಳಲು ಮಹಿಳೆಯನ್ನೇ ಗುರಾಣಿಯಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
ಆದರೆ, ಸ್ಥಳೀಯರು ಸಮಯಪ್ರಜ್ಞೆ ಪ್ರದರ್ಶಿಸಿ ಆರೋಪಿಯ ಗಮನ ಬೇರೆಡೆಗೆ ಸೆಳೆದು ಆತನನ್ನು ಹಿಡಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಮಹಿಳೆಯನ್ನು ಆತನ ಹಿಡಿತದಿಂದ ಬಿಡಿಸಿ ಇಂದಿರಾನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ಬಂಧನ, ನ್ಯಾಯಾಂಗ ಬಂಧನಕ್ಕೆ
ಘಟನೆಯಲ್ಲಿ ಮಹಿಳೆಗೆ ಗಂಭೀರ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ರಕ್ಷಣೆಯ ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪ್ರಭುರಾಜ್ನನ್ನು ಬಂಧಿಸಿದ್ದಾರೆ. ಬಳಿಕ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಆತನ ಪೂರ್ವಾಪರ ಹಾಗೂ ಇಂತಹ ಕೃತ್ಯಗಳಲ್ಲಿ ಈ ಹಿಂದೆ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರಿನ ಜನನಿಬಿಡ ಪ್ರದೇಶದಲ್ಲೇ ಹಾಡಹಗಲೇ ನಡೆದ ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಸ್ಥಳೀಯರ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

