ಬೆಂಗಳೂರು: ರಾಜಧಾನಿ ಬೆಂಗಳೂರಿನ ಬನಶಂಕರಿ ಪ್ರದೇಶದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಮನೆಯೊಂದರ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸೆರೆಯಾಗಿದೆ.
ಮನೆಯೊಂದರ ಬಳಿ ಓಡಾಡುತ್ತಿದ್ದ ನಾಯಿಯನ್ನು ಹಿಡಿಯಲು ಚಿರತೆ ಬಂದಿರುವುದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ. ರಾತ್ರಿ ವೇಳೆ ಚಿರತೆ ಓಡಾಡಿರುವ ದೃಶ್ಯ ಇದೀಗ ಸ್ಥಳೀಯರಲ್ಲಿ ಭಯ ಮೂಡಿಸಿದೆ.
ಈ ಹಿಂದೆ ಜುಲೈ ತಿಂಗಳಲ್ಲಿ ಬನಶಂಕರಿ 2ನೇ ಹಂತದಲ್ಲೇ ಚಿರತೆ ಕಾಣಿಸಿಕೊಂಡಿತ್ತು. ಇದೀಗ ಮತ್ತೆ ಅದೇ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಚಿರತೆ ಓಡಾಟದ ಹಿನ್ನೆಲೆಯಲ್ಲಿ ಸ್ಥಳೀಯರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಚಲನವಲನದ ಮೇಲೆ ನಿಗಾ ವಹಿಸುವ ನಿರೀಕ್ಷೆಯಿದೆ. ರಾತ್ರಿ ಸಮಯದಲ್ಲಿ ನಿವಾಸಿಗಳು ಹಾಗೂ ಸಾರ್ವಜನಿಕರು ಜಾಗರೂಕತೆಯಿಂದ ಇರುವಂತೆ ಮನವಿ ಮಾಡಲಾಗಿದೆ.
ಬಾಲಕಿಯರ ಹಾಸ್ಟೆಲ್‌ನಲ್ಲಿ 200 ವಿದ್ಯಾರ್ಥಿನಿಯರು ಅಸ್ವಸ್ಥ
ಆನಂದ್: ಗುಜರಾತ್‌ನ ಆನಂದ್ ಜಿಲ್ಲೆಯ ವಲ್ಲಭ ವಿದ್ಯಾನಗರದಲ್ಲಿರುವ ಬಾಲಕಿಯರ ಹಾಸ್ಟೆಲ್‌ನಲ್ಲಿ ಆಹಾರ ಸೇವಿಸಿದ ಬಳಿಕ ಸುಮಾರು 200 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ಗುರುವಾರ ರಾತ್ರಿ ಹಾಸ್ಟೆಲ್‌ನ ಮೆಸ್‌ನಲ್ಲಿ ಊಟ ಮಾಡಿದ ಬಳಿಕ ಹಲವು ವಿದ್ಯಾರ್ಥಿನಿಯರಿಗೆ ವಾಂತಿ, ಅತಿಸಾರ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ತಂಡಗಳು ರಾಣಕ್ ಗರ್ಲ್ಸ್ ಹಾಸ್ಟೆಲ್‌ಗೆ ಧಾವಿಸಿ, ವಿದ್ಯಾರ್ಥಿನಿಯರಿಗೆ ವೈದ್ಯಕೀಯ ನೆರವು ನೀಡಿವೆ. ಗಂಭೀರ ಲಕ್ಷಣಗಳು ಕಂಡುಬಂದ 13 ವಿದ್ಯಾರ್ಥಿನಿಯರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
900 ವಿದ್ಯಾರ್ಥಿನಿಯರಲ್ಲಿ 200 ಮಂದಿಗೆ ಸಮಸ್ಯೆ
ಹಾಸ್ಟೆಲ್‌ನ ವಿಶೇಷ ಕರ್ತವ್ಯಾಧಿಕಾರಿ ಡಾ. ಕೇತ್ಕಿ ಸೇಠ್ ಅವರ ಪ್ರಕಾರ, ಹಾಸ್ಟೆಲ್‌ನಲ್ಲಿ ಸುಮಾರು 900 ವಿದ್ಯಾರ್ಥಿನಿಯರು ವಾಸಿಸುತ್ತಿದ್ದು, ಅವರಲ್ಲಿ ಸುಮಾರು 200 ಮಂದಿಗೆ ಅನಾರೋಗ್ಯ ಕಾಣಿಸಿಕೊಂಡಿದೆ.
ಗುರುವಾರ ರಾತ್ರಿ ಹಾಸ್ಟೆಲ್ ಮೆಸ್‌ನಲ್ಲಿ ಪನೀರ್ ಕರಿ ಮತ್ತು ಫ್ರೂಟ್ ಸಲಾಡ್ ನೀಡಲಾಗಿತ್ತು. ಊಟಕ್ಕೆ ಬಳಸಲಾದ ಪನೀರ್ ಹಾಗೂ ಹಾಲನ್ನು ಹೊರಗಿನಿಂದ ಖರೀದಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪನೀರ್, ಹಾಲಿನ ಮಾದರಿ FSL ಪರೀಕ್ಷೆಗೆ
ಆಹಾರ ವಿಷಬಾಧೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪನೀರ್ ಮತ್ತು ಹಾಲಿನ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ (FSL) ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಬಂದ ಬಳಿಕವೇ ವಿದ್ಯಾರ್ಥಿನಿಯರು ಅಸ್ವಸ್ಥರಾಗಲು ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮತ್ತೊಂದು ಹಾಸ್ಟೆಲ್‌ನಿಂದ ಆಹಾರ ವ್ಯವಸ್ಥೆ
ಘಟನೆಯ ಬಳಿಕ ಹಾಸ್ಟೆಲ್ ಆಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಪ್ರಸ್ತುತ ಹಾಸ್ಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮೆಸ್ ಅಡುಗೆ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ.
ತನಿಖೆ ಪೂರ್ಣಗೊಳ್ಳುವವರೆಗೆ ವಿದ್ಯಾರ್ಥಿನಿಯರಿಗೆ ಮತ್ತೊಂದು ಹಾಸ್ಟೆಲ್‌ನ ಮೆಸ್‌ನಿಂದ ಆಹಾರ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಆಹಾರ ಪೂರೈಕೆ ವೇಳೆ ಕಟ್ಟುನಿಟ್ಟಿನ ಸುರಕ್ಷತೆ ಹಾಗೂ ಸ್ವಚ್ಛತಾ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ಆಡಳಿತ ತಿಳಿಸಿದೆ.
ನೀರು ಮತ್ತು ಅಡುಗೆಮನೆಯ ಸ್ವಚ್ಛತೆಯೂ ಪರಿಶೀಲನೆ
ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ಹಾಸ್ಟೆಲ್‌ನ ನೀರಿನ ಪೂರೈಕೆ ಮತ್ತು ಅಡುಗೆಮನೆಯ ಸ್ವಚ್ಛತೆಯನ್ನೂ ಪರಿಶೀಲಿಸುತ್ತಿದ್ದಾರೆ.ಆಹಾರ ಅಥವಾ ನೀರು ಕಲುಷಿತವಾಗಿರುವುದರಿಂದ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆಯೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಪರೀಕ್ಷಾ ವರದಿ ಮತ್ತು ತನಿಖೆ ಪೂರ್ಣಗೊಂಡ ಬಳಿಕವೇ ಆಹಾರ ವಿಷಬಾಧೆಯ ಅಂತಿಮ ಕಾರಣ ಸ್ಪಷ್ಟವಾಗಲಿದೆ.

