ಇಸ್ಲಾಮಾಬಾದ್: ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ಉಗ್ರರು ಆತ್ಮಹುತಿ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ 24 ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ನೈಋತ್ಯ ಪ್ರಾಂತ ಬಲೂಚಿಸ್ತಾನದಲ್ಲಿ ನಡೆದಿದೆ.
ಕ್ವೆಟ್ಟಾದಲ್ಲಿ ಈ ದಾಳಿ ನಡೆದಿದ್ದು, ಮೃತರಲ್ಲಿ ಸೇನಾ ಸಿಬ್ಬಂದಿಗಳೂ ಸೇರಿದಂತೆ 24 ಜನರು ಬಲಿಯಾಗಿದ್ದಾರೆ. 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕ್ವೆಟ್ಟಾದ ಚಮನ್ ಪಟ್ಪಾಕ್ ನಲ್ಲಿ ರೈಲು ಸ್ವಿಗ್ನಲ್ ದಾಟುತ್ತಿದ್ದಾಗ ಸ್ಫೋಟಕ ತುಂಬಿದ ಕಾರೊಂದು ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಭಾರಿ ಸ್ಫೋಟ ಸಂಭವಿಸಿದ್ದು 24 ಜನರು ಮೃತಪಟ್ಟಿದ್ದಾರೆ.
ಸ್ಫೋಟದಿಂದಾಗಿ ರೈಲು ಭಾಗಶಃ ಹಾನಿಯಾಗಿದೆ. ಈ ಸ್ಥಳದಲ್ಲಿದ್ದ 10 ಕ್ಕೂ ಹೆಚ್ಚು ವಾಹನಗಳು ಕೂಡ ಹಾನಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

