ಶಿವಮೊಗ್ಗ: ಕೆಡಿಪಿ ಸಭೆಗೆ ಗೈರು ಮತ್ತು ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲೆ ಸೊರಬ ಉಪ ವಿಭಾಗದ ಉಳವಿ ಶಾಖೆಯ ಮೆಸ್ಕಾಂ ಸಹಾಯಕ ಎಂಜಿನಿಯರ್ ಇಬ್ರಾಹಿಂ ಎನ್. ಅವರನ್ನು ಅಮಾನತುಗೊಳಿಸಲಾಗಿದೆ.
ಮೆಸ್ಕಾಂ ಶಿವಮೊಗ್ಗ ವೃತ್ತದ ಅಧೀಕ್ಷಕ ಎಂಜಿನಿಯರ್ ಜಯದೇವಪ್ಪ ಅವರು ಉಳವಿ ಸಹಾಯಕ ಎಂಜಿನಿಯರ್ ಇಬ್ರಾಹಿಂ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇಬ್ರಾಹಿಂ ಮೇಲಾಧಿಕಾರಿಗಳ ಸೂಚನೆ ನಿರ್ಲಕ್ಷಿಸಿ ಪ್ರಗತಿ ಪರಿಶೀಲನಾ ಸಭೆಗೆ ಗೈರಾಗಿ ಕರ್ತವ್ಯ ಲೋಪ ಎಸಗಿದ್ದಾರೆ. ಕಂಪನಿಯ ಕಂದಾಯ ವಸೂಲಾತಿಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವುದು ಸೇರಿ ವಿವಿಧ ಆರೋಪಗಳು ಇಬ್ರಾಹಿಂ ಅವರ ಮೇಲಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇತ್ತೀಚೆಗೆ ಸೊರಬದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸೂಚನೆ ನೀಡಿದ್ದರು.

