ಬಳ್ಳಾರಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೂರ್ವಾನುಮತಿ ಪಡೆದುಕೊಳ್ಳದೆ ಕಟ್ಟಲಾಗಿದ್ದ ಬಿಜೆಪಿಯ ಬಾವುಟ ಮತ್ತು ಬ್ಯಾನರ್ ಗಳನ್ನು ಪಾಲಿಕೆಯವರು ತೆರೆವುಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಬಿಜೆಪಿಯ 22 ನಾಯಕರು, ಕಾರ್ಯಕರ್ತರ ವಿರುದ್ಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಸೇರಿದಂತೆ 22 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆ ಬಳ್ಳಾರಿ ನಗರಕ್ಕೆ ಬರುವ ಮಾರ್ಗದಲ್ಲಿ ಕೊಳಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಐಟಿಎಂ ಕಾಲೇಜಿನವರೆಗೆ ಮಾತ್ರ ಬಾವುಟ ಕಟ್ಟಲು ಅವಕಾಶ ನೀಡಲಾಗಿತ್ತು.
ಆದರೆ, ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಬಾವುಟ ಮತ್ತು ಬ್ಯಾನರ್ ಗಳನ್ನು ಕಟ್ಟಲಾಗಿದ್ದು, ಮಹಾನಗರ ಪಾಲಿಕೆಯ ಸಿಬ್ಬಂದಿ ಅವುಗಳನ್ನು ತೆರವುಗೊಳಿಸಿದ್ದರು. ಈ ವೇಳೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಅನುಮತಿ ಇಲ್ಲದೆ ರಸ್ತೆಯಲ್ಲಿ ಕುಳಿತು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಪ್ರತಿಭಟನಾನಿರತರಿಗೆ ಪೊಲೀಸರು ತಿಳಿಹೇಳಿದರೂ ಕೇಳದೆ ಹೊಸಪೇಟೆ -ಗುತ್ತಿ ಹೆದ್ದಾರಿ ಬೈಪಾಸ್ ನಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿದ್ದರು. ರಸ್ತೆ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಂ.ಪಿ. ರೇಣುಕಾಚಾರ್ಯ, ಸೋಮಶೇಖರ ರೆಡ್ಡಿ ಸೇರಿ 22 ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ವಿಕಸಿತ ಭಾರತ ಯುವ ನಾಯಕರ ಸಂವಾದ: ರಸಪ್ರಶ್ನೆ ಸ್ಪರ್ಧೆಗೆ ಯುವಜನರಿಗೆ ಆಹ್ವಾನ
ಬಳ್ಳಾರಿ: ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ವತಿಯಿಂದ ‘ವಿಕಸಿತ ಭಾರತ ಯುವ ನಾಯಕರ ಸಂವಾದ 2027 ನಾಲೆಡ್ಜ್ ಟ್ರ್ಯಾಕ್’ ಆಯೋಜಿಸಲಾಗಿದ್ದು, ಇದರಲ್ಲಿ ಭಾಗವಹಿಸಲು ಯುವಜನರಿಗೆ ಆಹ್ವಾನ ನೀಡಲಾಗಿದೆ ಎಂದು ಮೇರಾ ಯುವ ಭಾರತದ ಜಿಲ್ಲಾ ಯುವ ಅಧಿಕಾರಿ ರಮೇಶ್ ಮಡ್ಡೆಪ್ಪ ತೊಳಿನವರ ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಮೊದಲ ಹಂತವಾಗಿ ಮೇರಾ ಭಾರತ್ ಪೋರ್ಟಲ್ ನಲ್ಲಿ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಆಸಕ್ತ ಹಾಗೂ ಅರ್ಹ ಯುವಕ-ಯುವತಿಯರು ಅಧಿಕೃತ ಜಾಲತಾಣವಾದ mybharat.gov.in/quizzes/yuva ಮೂಲಕ ನೋಂದಾಯಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಆನ್‌ಲೈನ್ ರಸಪ್ರಶ್ನೆ ಹಂತದಲ್ಲಿ ಯಶಸ್ವಿಯಾದ ಸ್ಪರ್ಧಿಗಳು ಮುಂದಿನ ಹಂತವಾದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ. ನಂತರ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಂತಗಳಲ್ಲಿ ಸ್ಪರ್ಧಿಸಲು ಅವಕಾಶ ದೊರೆಯಲಿದೆ. ಅಂತಿಮವಾಗಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗುವ ಯುವ ನಾಯಕರು ‘ವಿಕಸಿತ ಭಾರತ’ ನಿರ್ಮಾಣದ ಕುರಿತ ತಮ್ಮ ದೂರದೃಷ್ಟಿ ಮತ್ತು ನವೀನ ಆಲೋಚನೆಗಳನ್ನು ಪ್ರಧಾನ ಮಂತ್ರಿಯವರ ಮುಂದೆ ನೇರವಾಗಿ ಮಂಡಿಸುವ ಮಹತ್ವದ ಅವಕಾಶವನ್ನು ಪಡೆಯಲಿದ್ದಾರೆ.
ಜಿಲ್ಲಾ ಮಟ್ಟದಿಂದ ಆರಂಭವಾಗಿ ರಾಷ್ಟ್ರಮಟ್ಟದ ವೇದಿಕೆಗೆ ತಮ್ಮ ಆಲೋಚನೆಗಳನ್ನು ಕೊಂಡೊಯ್ಯುವ ಈ ವಿಶಿಷ್ಟ ಅವಕಾಶವನ್ನು ಜಿಲ್ಲೆಯ ಅರ್ಹ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

