ನವದೆಹಲಿ : ದೇಶಾದ್ಯಂತ ಜನರನ್ನು ಬೆದರಿಸಿ ಲಕ್ಷಾಂತರ ರೂಪಾಯಿ ವಂಚಿಸುತ್ತಿರುವ ಡಿಜಿಟಲ್ ಅರೆಸ್ಟ್ ಸೈಬರ್ ಅಪರಾಧಗಳ ವಿರುದ್ಧ ಸುಪ್ರೀಂಕೋರ್ಟ್ ಕಠಿಣ ನಿಲುವು ತಾಳಿದೆ. ಇಂತಹ ಪ್ರಕರಣಗಳ ಆರೋಪಿಗಳಿಗೆ ಅತ್ಯಂತ ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿ ಜಾಮೀನು ನೀಡಬಾರದು ಎಂದು ದೇಶದ ಎಲ್ಲ ವಿಚಾರಣಾ ನ್ಯಾಯಾಲಯಗಳು ಮತ್ತು ಹೈಕೋರ್ಟ್ಗಳಿಗೆ ನಿರ್ದೇಶನ ನೀಡಿದ್ದು, ಈ ವಂಚನೆಗಳನ್ನು ಸಂಘಟಿತ ಅಪರಾಧವೆಂದು ಪರಿಗಣಿಸಿ ಕಠಿಣ ಕಾನೂನುಗಳಡಿ ತನಿಖೆ ನಡೆಸುವಂತೆ ಸೂಚಿಸಿದೆ.
ಹೌದು. ದೇಶಾದ್ಯಂತ ಭೀತಿ ಹುಟ್ಟಿಸಿ ಲಕ್ಷಾಂತರ ರೂಪಾಯಿ ವಂಚಿಸುತ್ತಿರುವ ‘ಡಿಜಿಟಲ್ ಅರೆಸ್ಟ್’ ಸೈಬರ್ ಅಪರಾಧಗಳ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದು ಸಾಮಾನ್ಯ ವಂಚನೆಯಲ್ಲ, ಹಗಲು ಹೊತ್ತಿನ ದರೋಡೆಗೆ ಸಮಾನವಾದ ಸಂಘಟಿತ ಅಪರಾಧ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ರೀತಿಯ ಡಿಜಿಟಲ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಅತ್ಯಂತ ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಸಂಬಂಧ ದೇಶದ ಎಲ್ಲಾ ವಿಚಾರಣಾ ನ್ಯಾಯಾಲಯಗಳು ಹಾಗೂ ರಾಜ್ಯಗಳ ಹೈಕೋರ್ಟ್ಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ.
ಸುಪ್ರೀಂಕೋರ್ಟ್ ಮಹತ್ವದ ಆದೇಶ
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ವಂಚನೆಗಳನ್ನು ತಡೆಯಲು ಈಗಿನ ಸಾಮಾನ್ಯ ಕಾನೂನುಗಳು ಸಾಕಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ, ಇನ್ನು ಮುಂದೆ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳನ್ನು ಹಳೆಯ ಐಟಿ ಕಾಯ್ದೆಯಡಿ ಅಲ್ಲ, ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ದಾಖಲಿಸಿ ತನಿಖೆ ನಡೆಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದೆ.
ಈ ಮಹತ್ವದ ಅಭಿಪ್ರಾಯವು ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಆರೋಪಿಯ ಅರ್ಜಿ ವಿಚಾರಣೆ ವೇಳೆ ವ್ಯಕ್ತವಾಯಿತು. ಆತ, ಪ್ರಮುಖ ಸೈಬರ್ ವಂಚಕನಿಗಾಗಿ ಕೇವಲ ಬ್ಯಾಂಕ್ ಖಾತೆ ತೆರೆಯಲು ಸಹಕರಿಸಿದ್ದೇನೆ, ಸಂಚಿನಲ್ಲಿ ನನ್ನ ನೇರ ಪಾತ್ರವಿಲ್ಲ ಎಂದು ವಾದಿಸಿದ್ದ.
ಆದರೆ, ಈ ವಾದವನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಸೈಬರ್ ವಂಚಕರಿಗೆ ಬ್ಯಾಂಕ್ ಖಾತೆ ಒದಗಿಸುವುದು ಹಾಗೂ ಹಣ ವರ್ಗಾವಣೆಗೆ ನೆರವು ನೀಡುವುದೂ ದರೋಡೆಯಲ್ಲಿ ಭಾಗಿಯಾಗುವುದಕ್ಕೆ ಸಮಾನ ಎಂದು ಸ್ಪಷ್ಟಪಡಿಸಿತು. ಇದೇ ಕಾರಣಕ್ಕೆ ಆರೋಪಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಡಿಜಿಟಲ್ ಅರೆಸ್ಟ್ ಹೇಗೆ ನಡೆಯುತ್ತದೆ?
ಸೈಬರ್ ವಂಚಕರು ಮೊದಲು ಜನರಿಗೆ ಫೋನ್ ಕರೆ, ವಿಡಿಯೋ ಕಾಲ್ ಅಥವಾ ಮೆಸೇಜ್ ಮೂಲಕ ಸಂಪರ್ಕಿಸುತ್ತಾರೆ. ತಾವು ಪೊಲೀಸ್ ಅಧಿಕಾರಿ, ಸಿಬಿಐ, ಇಡಿ, ಕಸ್ಟಮ್ಸ್ ಅಥವಾ ನ್ಯಾಯಾಲಯದ ಅಧಿಕಾರಿಗಳು ಎಂದು ಪರಿಚಯಿಸಿಕೊಳ್ಳುತ್ತಾರೆ. ನಂತರ, ನಿಮ್ಮ ಹೆಸರಿನಲ್ಲಿ ಅಕ್ರಮ ಚಟುವಟಿಕೆ ನಡೆದಿದೆ, ನಿಮ್ಮ ಬ್ಯಾಂಕ್ ಖಾತೆ ಅಥವಾ ಮೊಬೈಲ್ ಸಂಖ್ಯೆಯನ್ನು ಅಪರಾಧಕ್ಕೆ ಬಳಸಲಾಗಿದೆ ಎಂದು ಭಯ ಹುಟ್ಟಿಸುತ್ತಾರೆ.ಕೆಲವೊಮ್ಮೆ ನಕಲಿ ಸಮವಸ್ತ್ರ, ನಕಲಿ ಗುರುತಿನ ಚೀಟಿ ಹಾಗೂ ವಿಡಿಯೋ ಕಾಲ್ ಮೂಲಕ ಪೊಲೀಸ್ ಠಾಣೆಯ ವಾತಾವರಣ ಸೃಷ್ಟಿಸಿ ನಂಬಿಕೆ ಮೂಡಿಸುತ್ತಾರೆ.
ಹಣಕ್ಕಾಗಿ ಹೇಗೆ ಒತ್ತಡ ಹೇರುತ್ತಾರೆ?
ವಂಚಕರು,
• “ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ”
• “ನಿಮ್ಮನ್ನು ಬಂಧಿಸಲಾಗುತ್ತದೆ”
• “ಜಾಮೀನು ಪಡೆಯಲು ಹಣ ಪಾವತಿಸಿ”
• “ತನಿಖೆ ಮುಗಿಯುವವರೆಗೆ ಹಣವನ್ನು ಸುರಕ್ಷಿತ ಖಾತೆಗೆ ವರ್ಗಾಯಿಸಿ” ಎಂದು ಹೇಳಿ ಆತಂಕ ಸೃಷ್ಟಿಸುತ್ತಾರೆ.
ಭಯಗೊಂಡ ಜನರು ಕೆಲವೊಮ್ಮೆ ಲಕ್ಷಾಂತರ ರೂಪಾಯಿಗಳನ್ನು ವಂಚಕರ ಖಾತೆಗೆ ವರ್ಗಾಯಿಸುತ್ತಾರೆ.
ಡಿಜಿಟಲ್ ಅರೆಸ್ಟ್ ನಿಜವೇ?
ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ‘ಡಿಜಿಟಲ್ ಅರೆಸ್ಟ್’ ಎಂಬ ಯಾವುದೇ ಕಾನೂನು ವ್ಯವಸ್ಥೆ ಭಾರತದಲ್ಲಿ ಇಲ್ಲ. ಪೊಲೀಸರು ಅಥವಾ ಯಾವುದೇ ತನಿಖಾ ಸಂಸ್ಥೆಗಳು ವಿಡಿಯೋ ಕಾಲ್ ಮೂಲಕ ಯಾರನ್ನೂ ಬಂಧಿಸುವುದಿಲ್ಲ ಅಥವಾ ಹಣವನ್ನು ಸುರಕ್ಷಿತ ಖಾತೆಗೆ ವರ್ಗಾಯಿಸುವಂತೆ ಸೂಚಿಸುವುದಿಲ್ಲ.
ಡಿಜಿಟಲ್ ಅರೆಸ್ಟ್’ನಿಂದ ತಪ್ಪಿಸಿಕೊಳ್ಳುವುದು ಹೇಗೆ ?
✅ ಯಾವುದೇ ಪೊಲೀಸ್ ಅಥವಾ ಸರ್ಕಾರಿ ಅಧಿಕಾರಿ ವಿಡಿಯೋ ಕಾಲ್ ಮೂಲಕ ಬಂಧನದ ಬೆದರಿಕೆ ಹಾಕಿದರೆ ನಂಬಬೇಡಿ.
✅ ಭಯಪಟ್ಟು ಯಾವುದೇ ಹಣ ವರ್ಗಾವಣೆ ಮಾಡಬೇಡಿ.
✅ ನಿಮ್ಮ ಬ್ಯಾಂಕ್ ವಿವರ, OTP, ಪಾಸ್ವರ್ಡ್ ಯಾರಿಗೂ ನೀಡಬೇಡಿ.
✅ ಅನುಮಾನಾಸ್ಪದ ಕರೆ ಬಂದರೆ ತಕ್ಷಣ ಸಂಪರ್ಕ ಕಡಿತಗೊಳಿಸಿ.
✅ ಸೈಬರ್ ವಂಚನೆಗೆ ಒಳಗಾದರೆ 1930 ಸೈಬರ್ ಸಹಾಯವಾಣಿ ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಮೂಲಕ ದೂರು ನೀಡಿ.
ಜನರು ಎಚ್ಚರಿಕೆಯಿಂದ ಇರಬೇಕು
ತಂತ್ರಜ್ಞಾನ ಹೆಚ್ಚಾದಂತೆ ಸೈಬರ್ ಅಪರಾಧಿಗಳ ವಿಧಾನಗಳೂ ಬದಲಾಗುತ್ತಿವೆ. ಭಯ ಮತ್ತು ಆತಂಕವನ್ನು ಬಳಸಿಕೊಂಡು ಹಣ ದೋಚುವ ಡಿಜಿಟಲ್ ಅರೆಸ್ಟ್ ವಂಚನೆಯಿಂದ ತಪ್ಪಿಸಿಕೊಳ್ಳಲು ಜಾಗೃತಿ ಮತ್ತು ಎಚ್ಚರಿಕೆಯೇ ಪ್ರಮುಖ ರಕ್ಷಣೆ.

