ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹೆಚ್.ವೈ.ಮೇಟಿ ನಿಧನದ ಕಾರಣ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ಏಪ್ರಿಲ್ 9ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಅಂತಿಮಗೊಂಡಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಷೇತ್ರವನ್ನು ಗೆದ್ದಿತ್ತು.
ಕಾಂಗ್ರೆಸ್ ಪಕ್ಷ ಬಾಗಲಕೋಟೆ ಉಪ ಚುನಾವಣೆಗೆ ಹೆಚ್.ವೈ.ಮೇಟಿ ಪುತ್ರ ಉಮೇಶ್ ಮೇಟಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆಗೆ ಆಗಮಿಸಿ ಅವರು ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, “ಉಮೇಶ್ ಮೇಟಿಯವರು ನಾಮಪತ್ರವನ್ನು ಸಲ್ಲಿಸಿದ್ದು, ಅವರನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಅವರನ್ನು ಆಶೀರ್ವಾದಿಸುವುದು ನಿಮ್ಮ ಜವಾಬ್ದಾರಿ. ಬಿಜೆಪಿ ಒಡ್ಡುವ ಆಸೆ, ಆಮಿಷಗಳಿಗೆ ಒಳಗಾಗಬೇಡಿ. ಉಮೇಶ್ ಮೇಟಿಯವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಡಿ. ಕ್ಷೇತ್ರದಲ್ಲಿ ನಾಲ್ಕೈದು ದಿನ ಇದ್ದು ಹಳ್ಳಿ ಹಳ್ಳಿಗೂ ಭೇಟಿ ನೀಡಿ ಪ್ರಚಾರ ಮಾಡುತ್ತೇನೆ” ಎಂದು ಹೇಳಿದ್ದಾರೆ.
“ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ನಾನು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಕಾರ್ಯದರ್ಶಿಗಳು ಹೈಕಮಾಂಡ್ ಜೊತೆ ಮಾತನಾಡಿ ಮೇಟಿಯವರ ಕುಟುಂಬಕ್ಕೆ ಟಿಕೆಟ್ ಕೊಡಲು ತೀರ್ಮಾನಿಸಲಾಗಿದೆ. ಮರಣ ಹೊಂದಿದ ಅಭ್ಯರ್ಥಿಯ ಮನೆಯವರಿಗೆ ಟಿಕೆಟ್ ಕೊಡುವುದು ನಮ್ಮ ಕಾಂಗ್ರೆಸ್ ಪಕ್ಷದ ಸಂಪ್ರದಾಯ. ಹಾಗಾಗಿ ಮೇಟಿಯವರ ನಾಲ್ಕು ಮಕ್ಕಳ ಪೈಕಿ ಮೇಟಿಯವರ ಪುತ್ರ ಉಮೇಶ್ ಮೇಟಿಯವರಿಗೆ ಟಿಕೆಟ್ ನೀಡಲಾಗಿದೆ” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಹೆಚ್.ವೈ.ಮೇಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತ ನಾಯಕರಾಗಿದ್ದರು. ಆದ್ದರಿಂದ ಮೇಟಿ ಕುಟುಂಬಕ್ಕೆ ಉಪ ಚುನಾವಣೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಕ್ಷೇತ್ರದಲ್ಲಿ ಗೆಲ್ಲುವುದು ಸಹ ಸಿದ್ದರಾಮಯ್ಯ ಪ್ರತಿಷ್ಠೆಯಾಗಿದೆ.
ಉಮೇಶ್ ಮೇಟಿ ಆಸ್ತಿ ವಿವರ: ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿರುವ ಉಮೇಶ್ ಮೇಟಿ ಚುನಾವಣಾ ಆಯೋಗಕ್ಕೆ ಆಸ್ತಿ ವಿವರದ ಕುರಿತು ಅಫಿಡೆವಿಟ್ ಸಲ್ಲಿಕೆ ಮಾಡಿದ್ದಾರೆ. ಉಮೇಶ್ ಮೇಟಿ ಒಟ್ಟು ಆಸ್ತಿ 2.96 ಲಕ್ಷ ರೂ. ಸಾಲವನ್ನು ಅವರು ಹೊಂದಿದ್ದಾರೆ.
- ಉಮೇಶ್ ಮೇಟಿ ವಿದ್ಯಾರ್ಹತೆ: ಪಿಯುಸಿ
- ನಗದು: 21.49 ಲಕ್ಷ
- ಚರ ಆಸ್ತಿ: 85.03 ಲಕ್ಷ
- 200 ಗ್ರಾಂ ಬಂಗಾರ ಇತ್ಯಾದಿ
- ಸ್ಥಿರ ಆಸ್ತಿ: 5.30 ಕೋಟಿ (ಮನೆ, ನಿವೇಶನ, ಭೂಮಿ)
- ಸಾಲ: 2.96 ಲಕ್ಷ
- ವಾಹನ: ಮಾರುತಿ ಗ್ರ್ಯಾಂಡ್ ವಿಟಾರಾ, ಸ್ವಿಫ್ಟ್ ಡಿಸೈರ್, ಮಾರುತಿ ಆಲ್ಟೋ, ಟಿವಿಎಸ್ ಜುಪಿಟರ್.
ಪತ್ನಿ ರುಕ್ಮಿಣಿ ಆಸ್ತಿ ವಿವರ
- ನಗದು: 25 ಸಾವಿರ
- ಚರ ಆಸ್ತಿ: 60.86 ಲಕ್ಷ (400 ಗ್ರಾಂ ಬಂಗಾರ)
- ಸ್ಥಿರ ಆಸ್ತಿ: 3.35 ಕೋಟಿ

