ಮಾಜಿ ಸಚಿವ ಮತ್ತು ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ವೈ. ಮೇಟಿ ನಿಧನದ ಕಾರಣ ಉಪಚುನಾವಣೆ ಎದುರಾಗಿದೆ. ನವೆಂಬರ್ 4ರಂದು 81 ವರ್ಷದ ಮೇಟಿ ವಿಧಿವಶರಾಗಿದ್ದರು. ಬಾಗಲಕೋಟೆ ಉಪಚುನಾವಣೆ ಬಗ್ಗೆ ಈಗ ಚರ್ಚೆಗಳು ಆರಂಭವಾಗಿದೆ.
ಎಚ್.ವೈ. ಮೇಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ನಾಯಕರಲ್ಲಿ ಒಬ್ಬರು. ಆದ್ದರಿಂದ ಬಾಗಲಕೋಟೆ ಉಪಚುನಾವಣೆ ಸಿದ್ದರಾಮಯ್ಯ ಪಾಲಿಗೆ ಪ್ರತಿಷ್ಠೆಯಾಗಿದೆ. ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಇನ್ನೂ ಉಪಚುನಾವಣೆಗೆ ಅಭ್ಯರ್ಥಿ ಘೋಷಣೆ ಮಾಡಿಲ್ಲ.
ಅನುಕಂಪದ ಆಧಾರದ ಮೇಲೆ ಎಚ್.ವೈ.ಮೇಟಿ ಕುಟುಂಬ ಸದಸ್ಯರಿಗೆ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇದೆ. ಅಲ್ಲದೇ ಇತರ ಕಾರ್ಯಕರ್ತರನ್ನು ಪರಿಗಣಿಸಿ ಎಂದು ಬೇಡಿಕೆ ಇಡಲಾಗಿದೆ. ಆದರೆ ಬಿಜೆಪಿ ಆಡಳಿತ ವಿರೋಧಿ ಅಲೆ ಇದ್ದು, ಉಪಚುನಾವಣೆ ಗೆಲುವು ನಮ್ಮದು ಎಂಬ ಉತ್ಸಾಹದಲ್ಲಿದೆ.
ಕಾಂಗ್ರೆಸ್ ಟಿಕೆಟ್ ಯಾರಿಗೆ?: ಎಚ್.ವೈ.ಮೇಟಿ ಕುಟುಂಬದಲ್ಲಿ ಮೇಟಿ ಪುತ್ರಿ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಮೇಟಿ ಪುತ್ರರಾದ ಮಲ್ಲಿಕಾರ್ಜುನ ಮೇಟಿ, ಉಮೇಶ್ ಮೇಟಿ ಹೆಸರುಗಳು ಕೇಳಿ ಬರುತ್ತಿವೆ. ಮೇಟಿ ಕುಟುಂಬಕ್ಕೆ ಟಿಕೆಟ್ ಎಂದಾದರೆ ಅಭ್ಯರ್ಥಿ ಯಾರು? ಎಂಬುದು ಕುತೂಹಲ
ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ಸಿದ್ದರಾಮಯ್ಯ ಸೂಚಿಸಿದ ಅಭ್ಯರ್ಥಿಗೆ ಟಿಕೆಟ್ ಸಿಗಲಿದೆ. ಎಚ್.ವೈ.ಮೇಟಿ ಮತ್ತು ಸಿದ್ದರಾಮಯ್ಯ ಆಪ್ತರು, ಒಂದೇ ಸಮುದಾಯಕ್ಕೆ ಸೇರಿದವರು. ಆದ್ದರಿಂದ ಸಿದ್ದರಾಮಯ್ಯ ಮಾತು ಅಂತಿಮ.
ಕೆಲವು ದಿನಗಳ ಹಿಂದೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬಾಗಲಕೋಟೆಗೆ ಬಂದಿದ್ದರು. ಅವರು ಉಪಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಕಾರ್ಯಕರ್ತರಿಗೆ, ಮುಖಂಡರಿಗೆ ಸೂಚನೆ ನೀಡಿದ್ದಾರೆ. ಆದರೆ ಅಭ್ಯರ್ಥಿ ಯಾರು? ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.
ಬಾಗಲಕೋಟೆ ಕ್ಷೇತ್ರದ 2023ರ ಫಲಿತಾಂಶ
- ಎಚ್.ವೈ.ಮೇಟಿ (ಕಾಂಗ್ರೆಸ್) 79,336 ಮತಗಳನ್ನು ಪಡೆದು ಗೆಲುವು
- ವೀರಣ್ಣ ಚಿರಂತಿಮಠ (ಬಿಜೆಪಿ) 73,458 ಮತಗಳನ್ನು ಪಡೆದು ಸೋಲು
- ಚಿರಂತಿಮಠ ಮಲ್ಲಿಕಾರ್ಜುನ ಚಂದ್ರಶೇಖರಯ್ಯ (ಪಕ್ಷೇತರ ) 10,116 ಮತ ಸೋಲು
ಬಿಜೆಪಿಯ ತಂತ್ರವೇನು?: ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಕುರಿತು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಬೆಂಗಳೂರಿನಲ್ಲಿ ಸಭೆಯನ್ನು ನಡೆಸಿದ್ದಾರೆ. ಪಕ್ಷದಲ್ಲಿ ಒಳಜಗಳ ಬಿಟ್ಟು ಉಪಚುನಾವಣೆಗೆ ಕೆಲಸ ಮಾಡಬೇಕು ಎಂದು ಮುಖಂಡರು, ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಾಗಲಕೋಟೆ ಬಿಜೆಪಿಗೆ ಸಿಗಲಿದೆ. ಕಳೆದ ಚುನಾವಣೆಯಲ್ಲಿ ಜೆಡಿಸ್ ಅಭ್ಯರ್ಥಿ 10,000ಕ್ಕೂ ಕಡಿಮೆ ಮತಗಳನ್ನು ಪಡೆದಿದ್ದು, ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವವನ್ನು ಹೊಂದಿಲ್ಲ.
ಬಿಜೆಪಿ ಮಾಜಿ ಸಿಎಂ ಯಡಿಯೂರಪ್ಪ ಆಪ್ತರಾದ ವೀರಣ್ಣ ಚಿರಂತಿಮಠ ಅವರಿಗೆ ಟಿಕೆಟ್ ಕೊಡುವ ನಿರೀಕ್ಷೆ ಇದೆ. ಅವರ ಸಹೋದರ ಚಿರಂತಿಮಠ ಮಲ್ಲಿಕಾರ್ಜುನ ಚಂದ್ರಶೇಖರಯ್ಯ ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಕ್ಕಿಲ್ಲ ಎಂದು ಪಕ್ಷೇತರ ಅಭ್ಯರ್ಥಿಯಾಗಿದ್ದರು.
ಆದ್ದರಿಂದ ಉಪಚುನಾವಣೆಯಲ್ಲಿ ಈ ಅಸಮಾಧಾನ ಪಕ್ಷದ ಗೆಲುವಿಗೆ ಅಡ್ಡಿಯಾಗಬಾರದು ಎಂದು ಪಕ್ಷದ ನಾಯಕರು ತಂತ್ರ ರೂಪಿಸುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮತ್ತು ವೀರಣ್ಣ ಚಿರಂತಿಮಠ ನಡುವೆ ಅಸಮಾಧಾನವಿದೆ.
ಸ್ಥಳೀಯ ಬಿಜೆಪಿ ಮುಖಂಡರ ಅಭಿಪ್ರಾಯದಂತೆ ಇಬ್ಬರು ನಾಯಕರ ನಡುವಿನ ಜಟಾಪಟಿ ಅಂತ್ಯಗೊಳಿಸಬೇಕು. ಇಲ್ಲವಾದಲ್ಲಿ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ. ಈ ಬಾರಿ ಜೆಡಿಎಸ್ ಮತಗಳು ಸಹ ಬಿಜೆಪಿಗೆ ಬರುವ ಕಾರಣ ಗೆಲುವು ಸುಲಭ ಎಂಬುದು ಲೆಕ್ಕಾಚಾರವಾಗಿದೆ.
ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಕೇಂದ್ರ ಚುನಾವಣಾ ಸಮಿತಿಗೆ ಕಳಿಸಿಕೊಡಲಾಗುತ್ತದೆ. ಹೈಕಮಾಂಡ್ ನಾಯಕರು ಅಭ್ಯರ್ಥಿ ಹೆಸರು ಅಂತಿಮಗೊಳಿಸಲಿದ್ದಾರೆ. ಯಾರು ಅಭ್ಯರ್ಥಿ? ಎಂಬುದು ಇನ್ನೂ ಅಂತಿಮವಾಗಿಲ್ಲ.

