ಬೆಂಗಳೂರು: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2026-27ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಅರ್ಹ ಫಲಾನುಭವಿಗಳಿಗಾಗಿ ಹಲವು ಯೋಜನೆಗಳಡಿ ಆರ್ಥಿಕ ನೆರವು ಹಾಗೂ ಸಾಲ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ ನೀರಾವರಿ, ಶೈಕ್ಷಣಿಕ ಸಾಲ, ವಿದೇಶಿ ಉನ್ನತ ವ್ಯಾಸಂಗ, ಸ್ವಾವಲಂಬಿ ಸಾರಥಿ ಹಾಗೂ ಹೊಲಿಗೆ ಯಂತ್ರ ವಿತರಣೆಯಂತಹ ಯೋಜನೆಗಳ ಪ್ರಯೋಜನ ಪಡೆಯಲು ಸೆಪ್ಟೆಂಬರ್ 30, 2026ರೊಳಗೆ ಸೇವಾ ಸಿಂಧು ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಡಿ. ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ
ಹಿಂದುಳಿದ ವರ್ಗಕ್ಕೆ ಸೇರಿದ ನಿರುದ್ಯೋಗಿ ಫಲಾನುಭವಿಗಳು ಕೃಷಿ ಅವಲಂಬಿತ ಚಟುವಟಿಕೆ, ವ್ಯಾಪಾರ, ಕೈಗಾರಿಕೆ, ಸಾರಿಗೆ ಮತ್ತು ಸೇವಾ ವಲಯದಲ್ಲಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಗರಿಷ್ಠ ರೂ.2.00 ಲಕ್ಷಗಳವರೆಗೆ ಆರ್ಥಿಕ ನೆರವು ನೀಡಲಾಗುವುದು.
ರೂ.1.00 ಲಕ್ಷದವರೆಗಿನ ಸಾಲದಲ್ಲಿ ಶೇ.20ರಷ್ಟು, ಗರಿಷ್ಠ ರೂ.20,000/-ಗಳ ಸಹಾಯಧನ ಹಾಗೂ ರೂ.1.00 ಲಕ್ಷದಿಂದ ರೂ.2.00 ಲಕ್ಷದವರೆಗೆ ಶೇ.15ರಷ್ಟು, ಕನಿಷ್ಠ ರೂ.20,000/-ಗಳಿಂದ ಗರಿಷ್ಠ ರೂ.30,000/-ಗಳವರೆಗೆ ಸಹಾಯಧನ ನೀಡಲಾಗುವುದು. ಉಳಿಕೆ ಮೊತ್ತವನ್ನು ಶೇ.4ರ ಬಡ್ಡಿದರದಲ್ಲಿ ನಿಗಮದಿಂದ ನೇರವಾಗಿ ಸಾಲ ಸೌಲಭ್ಯ ಒದಗಿಸಲಾಗುವುದು.
ಸಾಲ ಸೌಲಭ್ಯ ಪಡೆಯ ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು.
ಕುಟುಂಬದ ವಾರ್ಷಿಕ ವರಮಾನವು ಗ್ರಾಮಾಂತರ ಪ್ರದೇಶದವರಿಗೆ ರೂ.98,000/-, ಪಟ್ಟಣ ಪ್ರದೇಶದವರಿಗೆ ರೂ.1,20,000/- ಒಳಗಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.
2. ಗಂಗಾ ಕಲ್ಯಾಣ ನೀರಾವರಿ ಯೋಜನೆ
ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು.
ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಒಟ್ಟು ಘಟಕ ವೆಚ್ಚವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಿಗೆ ರೂ.4.75 ಲಕ್ಷ ನಿಗದಿಪಡಿಸಲಾಗಿದೆ. ಇದರಲ್ಲಿ ವಿದ್ಯುದೀಕರಣ ವೆಚ್ಚವಾಗಿ ಪ್ರತಿ ಕೊಳವೆ ಬಾವಿಗೆ ರೂ.75,000/-ಗಳನ್ನು ಎಸ್ಕಾಂಗಳಿಗೆ ಪಾವತಿಸಲಾಗುವುದು.
ಇನ್ನುಳಿದ ಜಿಲ್ಲೆಗಳಿಗೆ ರೂ.3.75 ಲಕ್ಷ ಘಟಕ ವೆಚ್ಚ ನಿಗದಿಪಡಿಸಲಾಗಿದ್ದು, ಇದರಲ್ಲಿ ವಿದ್ಯುದೀಕರಣ ವೆಚ್ಚವಾಗಿ ಪ್ರತಿ ಕೊಳವೆ ಬಾವಿಗೆ ರೂ.75,000/-ಗಳನ್ನು ಎಸ್ಕಾಂಗಳಿಗೆ ಪಾವತಿಸಲಾಗುವುದು.
ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ.50,000/-ಗಳ ಸಾಲವನ್ನು ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು.
ಈ ಯೋಜನೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು.
ಉಳಿದ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು.
3. ಅರಿವು-ಶೈಕ್ಷಣಿಕ ಸಾಲ ಯೋಜನೆ
ಈ ಯೋಜನೆಯಡಿ CET ಮತ್ತು NEET ಇತ್ಯಾದಿ ಮೂಲಕ ಆಯ್ಕೆಯಾಗಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ಎಲ್ಲಾ ಪ್ರವರ್ಗಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಾದ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ 28 ಕೋರ್ಸ್‌ಗಳ ವ್ಯಾಸಂಗಕ್ಕೆ ವಾರ್ಷಿಕ ರೂ.1.00 ಲಕ್ಷದಂತೆ, ಕೋರ್ಸ್‌ನ ಅವಧಿಗೆ ಗರಿಷ್ಠ ರೂ.4.00 ಲಕ್ಷದಿಂದ ರೂ.5.00 ಲಕ್ಷದವರೆಗೆ ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.
ಅಭ್ಯರ್ಥಿ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನವು ರೂ.3.50 ಲಕ್ಷಗಳ ಮಿತಿಯಲ್ಲಿರಬೇಕು.
ಈ ಯೋಜನೆಯಡಿಯಲ್ಲಿ ಸಾಲ ಮಂಜೂರಾಗಿ ಹಿಂದಿನ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮುಂದುವರೆಸುವುದಕ್ಕೆ 2ನೇ ಹಾಗೂ ನಂತರದ ಕಂತುಗಳ ಸಾಲ ಪಡೆಯಲು ಹಿಂದಿನ 2 ಸೆಮಿಸ್ಟರ್‌ಗಳ ಅಂಕಪಟ್ಟಿ, ಪ್ರಸಕ್ತ ಸಾಲಿನ ವ್ಯಾಸಂಗ ಪ್ರಮಾಣ ಪತ್ರ, ಜಾಮೀನುದಾರರ/ಪೋಷಕರ ಒಪ್ಪಿಗೆ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು.
4. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಪಿ.ಹೆಚ್.ಡಿ., ಪೋಸ್ಟ್ ಡಾಕ್ಟರಲ್ ಮತ್ತು ಮಾಸ್ಟರ್ ಡಿಗ್ರಿಗಳಾದ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಮ್ಯಾನೇಜ್‌ಮೆಂಟ್ ಮತ್ತು ಕಾಮರ್ಸ್, ಸೈನ್ಸ್ ಮತ್ತು ಟೆಕ್ನಾಲಜಿ, ಅಗ್ರಿಕಲ್ಚರ್ ಮತ್ತು ಅಲೈಡ್ ಸೈನ್ಸಸ್/ಟೆಕ್ನಾಲಜಿ, ಮೆಡಿಸಿನ್, ಹ್ಯುಮಾನಿಟೀಸ್ ಮತ್ತು ಸೋಷಿಯಲ್ ಸೈನ್ಸಸ್‌ಗಳಲ್ಲಿ ವ್ಯಾಸಂಗಕ್ಕೆ ಪ್ರವೇಶ ಪಡೆದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರು ಅರ್ಜಿ ಸಲ್ಲಿಸಬಹುದು.
ಕುಟುಂಬದ ವಾರ್ಷಿಕ ಆದಾಯ ಗರಿಷ್ಠ ರೂ.15.00 ಲಕ್ಷ ಮಿತಿಯಲ್ಲಿರಬೇಕು.
ವಿದ್ಯಾರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಶೇ.60ಕ್ಕಿಂತಲೂ ಹೆಚ್ಚಿನ ಅಂಕ ಪಡೆದಿರಬೇಕು. QS World Ranking 1000ರೊಳಗೆ ಬರುವ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರಬೇಕು.
ವಾರ್ಷಿಕ ಗರಿಷ್ಠ ರೂ.25.00 ಲಕ್ಷ ಹಾಗೂ ಪೂರ್ಣ ಕೋರ್ಸ್‌ನ ಅವಧಿಗೆ ರೂ.50.00 ಲಕ್ಷಗಳ ಸಾಲವನ್ನು ಬಡ್ಡಿರಹಿತವಾಗಿ ಒದಗಿಸಲಾಗುವುದು.
ಸಾಲದ ಭದ್ರತೆಗೆ ನಿಗಮಕ್ಕೆ ಅರ್ಜಿದಾರ/ಜಾಮೀನುದಾರ/ಪೋಷಕರ ಸ್ಥಿರಾಸ್ತಿಯನ್ನು ನಿಗಮಕ್ಕೆ ಆಧಾರ ಮಾಡಬೇಕು.
ಅರ್ಜಿಯ ಜೊತೆಯಲ್ಲಿ ವಿದೇಶಿ ವಿಶ್ವವಿದ್ಯಾಲಯದ ಪ್ರವೇಶ ಪತ್ರ (Offer Letter), ವಿದ್ಯಾರ್ಥಿಯ ವೀಸಾ, ಪಾಸ್‌ಪೋರ್ಟ್ ಮತ್ತು ಏರ್‌ಟಿಕೆಟ್ ಪ್ರತಿ ಒದಗಿಸಬೇಕು.
5. ಸ್ವಾವಲಂಬಿ ಸಾರಥಿ ಯೋಜನೆ
ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರಗಳ ವಾಹನ ಖರೀದಿಗೆ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಶೇ.50ರಷ್ಟು, ಗರಿಷ್ಠ ರೂ.3.00 ಲಕ್ಷಗಳ ಸಹಾಯಧನ ಮಂಜೂರು ಮಾಡಲಾಗುವುದು.
ಸೌಲಭ್ಯ ಪಡೆಯ ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು.
ಕುಟುಂಬದ ವಾರ್ಷಿಕ ವರಮಾನವು ಗ್ರಾಮಾಂತರ ಪ್ರದೇಶದವರಿಗೆ ರೂ.98,000/-, ಪಟ್ಟಣ ಪ್ರದೇಶದವರಿಗೆ ರೂ.1,20,000/- ಒಳಗಿರಬೇಕು.
ಅರ್ಜಿದಾರರ ವಯಸ್ಸು 21 ರಿಂದ 45 ವರ್ಷಗಳ ಮಿತಿಯಲ್ಲಿರಬೇಕು.
ಈ ಯೋಜನೆಯಲ್ಲಿ ಆರ್ಥಿಕ ಸಹಾಯ ಪಡೆಯಲು ಇಚ್ಛಿಸುವ ಅರ್ಜಿದಾರರು ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
6. ಹೊಲಿಗೆ ಯಂತ್ರ ವಿತರಣಾ ಯೋಜನೆ
ಹಿಂದುಳಿದ ವರ್ಗಗಳ ಬಡ ಕುಟುಂಬದವರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಯೋಜನೆಯಲ್ಲಿ ಸೌಲಭ್ಯ ಪಡೆಯ ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು.
ಕುಟುಂಬದ ವಾರ್ಷಿಕ ವರಮಾನವು ಗ್ರಾಮಾಂತರ ಪ್ರದೇಶದವರಿಗೆ ರೂ.98,000/-, ಪಟ್ಟಣ ಪ್ರದೇಶದವರಿಗೆ ರೂ.1,20,000/- ಒಳಗಿರಬೇಕು.
ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.
ಈ ಯೋಜನೆಗಳು ಅನ್ವಯವಾಗುವ ಸಮುದಾಯಗಳು
ಮೇಲ್ಕಂಡ ಎಲ್ಲಾ ಯೋಜನೆಗಳು ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಮರಾಠ, ತಿಗಳ, ಗಾಣಿಗ, ಕುಂಬಾರ, ಹಡಪದ, ಕೊಡವ ಮತ್ತು ಈಡಿಗ ಹಾಗೂ ಇವುಗಳ ಉಪ ಸಮುದಾಯಗಳು ಸೇರಿದಂತೆ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ ಸಮುದಾಯಗಳಿಗೆ ಅನ್ವಯವಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೇಲ್ಕಂಡ ಎಲ್ಲಾ ಯೋಜನೆಗಳಡಿಯಲ್ಲಿ ಸೌಲಭ್ಯ ಒದಗಿಸಲು ಸೇವಾ ಸಿಂಧು ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅರ್ಜಿದಾರರು ಆಧಾರ್‌ಗೆ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು.
ಆಧಾರ್ ಕಾರ್ಡ್‌ನಲ್ಲಿರುವಂತೆ ಅರ್ಜಿದಾರರ ಹೆಸರು, ಶ್ರೀ/ಶ್ರೀಮತಿ/ಕುಮಾರಿ ಮುಂತಾದ ಮಾಹಿತಿಗಳು ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್‌ಬುಕ್ಗಳಲ್ಲಿಯೂ ಹೊಂದಾಣಿಕೆಯಾಗಿರಬೇಕು.
ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
2024-25 ಮತ್ತು 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದೇ ಇರುವ ಫಲಾಪೇಕ್ಷಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಮೇಲ್ಕಂಡ ಸೌಲಭ್ಯಗಳನ್ನು ಪಡೆಯಲು ಇಚ್ಛಿಸುವ ಹಿಂದುಳಿದ ವರ್ಗಗಳ ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ಮುಖಾಂತರ ಹಾಗೂ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ನಿಗಮದ ವೆಬ್‌ಸೈಟ್‌ನಲ್ಲಿ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.
ನಿಗಮದ ಸಹಾಯವಾಣಿ ಸಂಖ್ಯೆ: 080-22374832
8050770004 / 8050770005
ಅಥವಾ ಆಯಾ ಜಿಲ್ಲಾ ಕಚೇರಿಯ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.
ಸೇವಾ ಸಿಂಧು ತಂತ್ರಾಂಶದ ಮುಖಾಂತರ ಅರ್ಜಿ ಸಲ್ಲಿಸಲು 30.09.2026 ಕೊನೆಯ ದಿನಾಂಕವಾಗಿದೆ.

