ನವದೆಹಲಿ: ಅಭಿನಂದನ್ ವರ್ಧಮಾನ್ ಹೆಸರು ಯಾರಿಗೆ ತಾನೆ ನೆನಪಿಲ್ಲ? 2019ರ ಫೆಬ್ರವರಿಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ವೈಮಾನಿಕ ಸಂಘರ್ಷದ ಬಳಿಕ ದೇಶಾದ್ಯಂತ ಚಿರಪರಿಚಿತವಾದ ಹೆಸರು, ಮುಖ. ಪಾಕಿಸ್ತಾನದ ವಿರುದ್ಧದ ಕಾರ್ಯಾಚರಣೆ ವೇಳೆ ಮಿಗ್-21 ಸಮೇತ ಶತ್ರು ರಾಷ್ಟ್ರದ ಗಡಿಯೊಳಗೆ ನುಗ್ಗಿ ಪಾಕಿಸ್ತಾನ ವಾಯುಪಡೆಯ ವಿಮಾನ ಹೊಡೆದುರುಳಿಸಿದ್ದ ಭಾರತೀಯ ವಾಯುಪಡೆಯ ಮಾಜಿ ಗ್ರೂಪ್ ಕ್ಯಾಪ್ಟನ್, ವೀರ ಚಕ್ರ ಪುರಸ್ಕೃತ ಅಭಿನಂದನ್ ವರ್ಧಮಾನ್ ಇದೀಗ FLY91 ವಿಮಾನದ ಪೈಲಟ್ ಆಗಿ ನೇಮಕಗೊಂಡಿದ್ದಾರೆ.
FLY91 ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆ. ಅಭಿನಂದನ್ ವರ್ಧಮಾನ್ ಅವರು ಗೋವಾ ಮತ್ತು ಹೈದರಾಬಾದ್ ಮಾರ್ಗದಲ್ಲಿ ಎಟಿಆರ್ ವಿಮಾನ ಸಂಚರಿಸುವ ಕುರಿತು ತರಬೇತಿಯಲ್ಲಿ ನಿರತರಾಗಿದ್ದು, ತರಬೇತಿ ಪೂರ್ಣಗೊಂಡ ಬಳಿಕ ವಿಮಾನ ಸಂಚಾರ ನಡೆಸಲಿದ್ದಾರೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಅಭಿನಂದನ್ ಅವರು 2026ರ ಆಗಸ್ಟ್‌ನಲ್ಲಿ FLY91 ಸಂಸ್ಥೆಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಗೋವಾ ಮೂಲದ FLY91 ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾಗಿದ್ದು, 2024ರ ಮಾರ್ಚ್‌ನಲ್ಲಿ ತನ್ನ ವಾಣಿಜ್ಯ ವಿಮಾನಯಾನ ಸೇವೆಗಳನ್ನು ಆರಂಭಿಸಿತು.
ಸಂಸ್ಥೆಯು ಪ್ರಸ್ತುತ ಆರು ATR 72-600 ವಿಮಾನಗಳನ್ನು ಹೊಂದಿದ್ದು, ಗೋವಾ ಮತ್ತು ಹೈದರಾಬಾದ್‌ನಲ್ಲಿ ಕಾರ್ಯಾಚರಣಾ ನೆಲೆಗಳನ್ನು ಹೊಂದಿದೆ. ಸಣ್ಣ ನಗರಗಳನ್ನು ಪ್ರಮುಖ ವಿಮಾನಯಾನ ಕೇಂದ್ರಗಳೊಂದಿಗೆ ಸಂಪರ್ಕಿಸುವ ಮೂಲಕ ಪ್ರಾದೇಶಿಕ ವಾಯು ಸಂಪರ್ಕವನ್ನು ಹೆಚ್ಚಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.
ಬಾಲಾಕೋಟ್ ದಾಳಿ ಹೀರೋ ಅಭಿನಂದನ್ ವರ್ಧಮಾನ್:
ಅಭಿನಂದನ್ ವರ್ಧಮಾನ್ ಭಾಗವಹಿಸಿದ್ದ 2019ರ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ವೈಮಾನಿಕ ವೈಮಾನಿಕ ಕಾಳಗವು ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಭಯೋತ್ಪಾದಕ ಗುರಿಗಳ ಮೇಲೆ ವಾಯುದಾಳಿ ನಡೆಸಿದ ಒಂದು ದಿನದ ಬಳಿಕ ನಡೆದಿತ್ತು. 2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಮೃತಪಟ್ಟಿದ್ದರು. ಈ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಬಾಲಾಕೋಟ್‌ನಲ್ಲಿ ವಾಯುದಾಳಿ ನಡೆಸಿತ್ತು.
2019ರ ಫೆಬ್ರವರಿ 27ರಂದು ಪಾಕಿಸ್ತಾನದ ವಿಮಾನಗಳೊಂದಿಗೆ ನಡೆದ ವೈಮಾನಿಕ ಕಾಳಗದಲ್ಲಿ ಅಭಿನಂದನ್ ವರ್ಧಮಾನ್ ಅವರು ಮಿಗ್-21 ಬೈಸನ್ ಯುದ್ಧವಿಮಾನವನ್ನು ಹಾರಿಸುತ್ತಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಒಂದು ಯುದ್ಧವಿಮಾನವನ್ನು ಹೊಡೆದುರುಳಿಸಿದ ಬಳಿಕ ಅವರ ವಿಮಾನಕ್ಕೂ ಕ್ಷಿಪಣಿ ಅಪ್ಪಳಿಸಿತ್ತು. ವಿಮಾನಕ್ಕೆ ಹಾನಿಯಾದ ಹಿನ್ನೆಲೆಯಲ್ಲಿ ಅಭಿನಂದನ್ ಅವರು ಪ್ಯಾರಾಶೂಟ್ ಮೂಲಕ ಹೊರಗೆ ಜಿಗಿಯಬೇಕಾಯಿತು. ಬಳಿಕ ಅವರು ಪಾಕಿಸ್ತಾನದ ಭೂಪ್ರದೇಶದಲ್ಲಿ ಇಳಿದಿದ್ದು, ಅಲ್ಲಿನ ಸೇನೆಯ ವಶಕ್ಕೆ ಸಿಲುಕಿದ್ದರು. ಸುಮಾರು 60 ಗಂಟೆಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದ ಅಭಿನಂದನ್ ಅವರನ್ನು 2019ರ ಮಾರ್ಚ್ 1ರಂದು ಅಟ್ಟಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಯಿತು.
2019ರ ವೈಮಾನಿಕ ಕಾರ್ಯಾಚರಣೆಯಲ್ಲಿ ತೋರಿದ ಶೌರ್ಯ ಮತ್ತು ಕರ್ತವ್ಯಪ್ರಜ್ಞೆಗಾಗಿ ಅಭಿನಂದನ್ ವರ್ಧಮಾನ್ ಅವರಿಗೆ 2021ರಲ್ಲಿ ವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

