ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರಿಗೆ ಎನ್ ಡಿಎ ರಾಜ್ಯಸಭಾ ಟಿಕೆಟ್ ನಿರಾಕರಿಸಿರುವುದನ್ನೇ ಅಸ್ರವನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ಕೈತಪ್ಪಿಸಿರುವುದು ದೇವೇಗೌಡರು, ಜೆಡಿಎಸ್ ಗೆ ಮಾಡಿದ ಅಪಮಾನವಲ್ಲ, ಇದು ಇಡೀ ಕರ್ನಾಟಕದ ಜನತೆಗೆ ಬಿಜೆಪಿ-ಎನ್ ಡಿಎ ನಾಯಕರು ಮಾಡಿರುವ ಅಪಮಾನ ಎಂದು ಕೆಪಿಸಿಸು ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಸಂಪೂರ್ಣವಾಗಿ ಜೆಡಿಎಸ್ ಹಾಗೂ ದೇವೇಗೌಡರ ಬೆಂಬಲವನ್ನು ಪಡೆದು ಪಾರ್ಲಿಮೆಂಟ್ ನಲ್ಲಿ ಎಲ್ಲಾ ಮಸೂದೆ ಮಂಡನೆಗೆ ಅವರ ಬೆಂಬಲ್ಲ ಪಡೆದು ಈಗ ಟಿಕೆಟ್ ನೀಡದೇ ಈರೀತಿ ಮೋಸ ಮಾಡುತ್ತಿರುವುದು ಕರ್ನಾಟಕದ ಜನತೆಗೆ ಬಿಜೆಪಿಯವರು ಮಾಡಿರುವ ಅಪಮಾನ ಎಂದರು. ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರಿಗೆ ಕರ್ನಾಟಕದ ಜನತೆ ತಕ್ಕ ಶಿಕ್ಷೆ ನೀಡಲಿದ್ದಾರೆ ಎಂದು ಗುಡುಗಿದರು.
2020ರಲ್ಲಿ ಸೋನಿಯಾ ಗಾಂಧಿ ಅವರು ದೇವೇಗೌಡರಿಗೆ ಬೆಂಬಲಿಸಿದ್ದರು. ಆದರೆ ಈಗ ಬಿಜೆಪಿಯವರು ಜೆಡಿಎಸ್ ಹಾಗೂ ದೇವೇಗೌಡರ ಬೆಂಬಲವನ್ನು ಪಡೆದು ಅವರಿಗೆ ಅನ್ಯಾಯ ಮಾಡುತ್ತಿರುವುದು ಖಂಡನೀಯ ಎಂದರು.

