ವಿಜಯಪುರ : ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಪಾನ್ ಶಾಪ್ ಒಂದರಲ್ಲಿ ಸಂಭವಿಸಿದ ನಿಗೂಢ ಸ್ಫೋಟದಲ್ಲಿ ಮೂವರು ಗಾಯಗೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ.ರವಿಕಿರಣ ಎಂಬುವವರಿಗೆ ಸೇರಿದ ಶೆಡ್ ಮಾದರಿಯ ಪಾನ್ ಶಾಪ್‌ನಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ.ಅಂಗಡಿ ಮಾಲೀಕ ರವಿಕಿರಣ ಸೇರಿದಂತೆ ಮೂವರು ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಬಬಲೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ, ಶ್ವಾನದಳ ಮತ್ತು ತಜ್ಞರ ತಂಡ (ಸೊಕೋ ತಂಡ) ಪರಿಶೀಲನೆ ನಡೆಸಿದರೂ, ಸ್ಥಳದಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ.
ಸ್ಪೋಟಕ್ಕೆ ಕಾರಣ : ಪಾನ್ ಶಾಪ್ ಒಳಗಿದ್ದ ಫ್ರಿಡ್ಜ್‌ಗೆ ಯಾವುದೇ ಹಾನಿಯಾಗಿಲ್ಲ, ಹೀಗಾಗಿ ಸ್ಫೋಟ ಹೊರಗಿನಿಂದ ಆಗಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರ ತನಿಖೆಯ ನಂತರವೇ ಸ್ಫೋಟಕ್ಕೆ ನಿಖರ ಕಾರಣ ತಿಳಿಯಬೇಕಿದೆ.

