ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ ರಾಷ್ಟ್ರದ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ (86) ಸಾವನ್ನಪ್ಪಿದ್ದಾರೆ. ಈ ಹತ್ಯೆಯನ್ನು ಖಂಡಿಸಿ ಭಾರತದ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನೂರಾರು ಜನರು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಪ್ರತಿಭಟನೆ ಗಮನಿಸಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಭಾನುವಾರ ಕಾಶ್ಮೀರ ಕಣಿವೆಯಲ್ಲಿ ರಾಜಧಾನಿ ಶ್ರೀನಗರ ಸೇರಿದಂತೆ ಹಲವು ಕಡೆ ಪ್ರತಿಭಟನೆಗಳು ನಡೆದಿದೆ. ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್-ಅಮೆರಿಕದ ದಾಳಿಯಲ್ಲಿ ಮೃತಪಟ್ಟಿರುವ ವಿಷಯ ತಿಳಿದು ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ.
ಶ್ರೀನಗರದ ವಿವಿಧ ಭಾಗಗಳಲ್ಲಿ ಮಹಿಳೆಯರು ಸೇರಿದಂತೆ ನೂರಾರು ಶಿಯಾ ಮುಸ್ಲಿಮರು ರಸ್ತೆಗಿಳಿದರು. ಎದೆ ಬಡಿದುಕೊಂಡು ಶೋಕಿಸುತ್ತಾ ಪ್ರತಿಭಟನಾಕಾರರು ಶ್ರೀನಗರದ ಲಾಲ್ ಚೌಕ್‌ನಲ್ಲಿ ಜಮಾಯಿಸಿದರು.
ಅನೇಕರು ಕೆಂಪು ಮತ್ತು ಕಪ್ಪು ಬಣ್ಣದ ಧ್ವಜಗಳನ್ನು ಹಿಡಿದಿದ್ದರು. ಪ್ರತಿಭಟನಾಕಾರರು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ರಾಯಭಾರ ಕಚೇರಿ ಸಂತಾಪ: ಇರಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಖಮೇನಿ ನಿಧನಕ್ಕೆ ಸಂತಾಪವನ್ನು ಸೂಚಿಸಿದೆ. ಖಮೇನಿ ಅವರು ಹುತಾತ್ಮರಾದ ಬಗ್ಗೆ ತೀವ್ರ ದುಃಖ ಮತ್ತು ಸಂತಾಪವನ್ನು ವ್ಯಕ್ತಪಡಿಸುತ್ತದೆ ಎಂದು ಹೇಳಿದೆ.
ಭಾರತದಲ್ಲಿರುವ ಇರಾನ್ ಗಣರಾಜ್ಯದ ರಾಯಭಾರ ಕಚೇರಿಯು ಈ ಅಪರಾಧವನ್ನು ಬಲವಾಗಿ ಖಂಡಿಸುವಂತೆ ಮತ್ತು ಕಾನೂನುಬಾಹಿರತೆ ಹಾಗೂ ಆಕ್ರಮಣಶೀಲತೆಯ ವಿರುದ್ಧ ಮೌನವಾಗಿರಬಾರದೆಂದು ಕರೆ ನೀಡುತ್ತದೆ ಎಂದು ತಿಳಿಸಿದೆ.

