ನಿನ್ನೆ ( ಏಪ್ರಿಲ್ 29 ) ಪಶ್ಚಿಮ ಬಂಗಾಳ ವಿಧಾನಸಭೆಯ ಎರಡನೇ ಹಂತದ ಮತದಾನ ಮುಕ್ತಾಯವಾದ ಬೆನ್ನಲ್ಲೇ ವಿವಿಧ ಸಂಸ್ಥೆಗಳು ಪಂಚ ರಾಜ್ಯಗಳ ಚುನಾವಣಾ ಸಮೀಕ್ಷೆಯನ್ನು ಪ್ರಕಟಿಸಿವೆ.
ಈ ಪೈಕಿ ತಮಿಳುನಾಡಿನಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಕುತೂಹಲ ರಾಜ್ಯದ ಮತದಾರರಲ್ಲಿ ಮಾತ್ರವಲ್ಲದೇ ಇತರೆ ಜನರಲ್ಲಿಯೂ ಮೂಡಿತ್ತು. ಕಾರಣ ಈ ಬಾರಿ ಚುನಾವಣೆಗೆ ಸಿನಿಮಾ ನಟ ವಿಜಯ್ ಧುಮುಕಿದ್ದು, ತಮ್ಮ ಟಿವಿಕೆ ಪಕ್ಷವನ್ನು ಎಲ್ಲೆಡೆ ಪೈಪೋಟಿಗೆ ಇಳಿಸಿದ್ದರು.
ಹೀಗೆ ಇದೇ ಮೊದಲ ಬಾರಿಗೆ ಚುನಾವಣೆಗೆ ಧುಮುಕಿದ ಟಿವಿಕೆ ಡಿಎಂಕೆಗೆ ಫೈಟ್ ನೀಡಲಿದೆ ಎಂದು ಟಿವಿಕೆ ಹಾಗೂ ವಿಜಯ್ ಹಿಂಬಾಲಕರು ಅಭಿಪ್ರಾಯ ಮತ್ತು ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಹುತೇಕ ಸಂಸ್ಥೆಗಳು ಡಿಎಂಕೆ ಸ್ಪಷ್ಟ ಬಹುಮತ ಪಡೆದುಕೊಳ್ಳಲಿದೆ ಎಂದು ತಿಳಿಸಿದ್ದರೆ, ಒಂದು ಸಮೀಕ್ಷೆ ಮಾತ್ರ ವಿಜಯ್ ನೇತೃತ್ವದ ಟಿವಿಕೆ ಜಯಭೇರಿ ಬಾರಿಸಲಿದೆ ಎಂದಿದೆ.
ಹೌದು, ಆಕ್ಸಿಸ್ ಮೈ ಇಂಡಿಯಾ ಸಂಸ್ಥೆ 92ರಿಂದ 110 ಸೀಟುಗಳು ಬರಲಿದ್ದು, ಎನ್‌ಡಿಎಗೆ 22ರಿಂದ 32 ಸೀಟುಗಳು ಹಾಗೂ ಟಿವಿಕೆಗೆ ಬರೋಬ್ಬರಿ 98ರಿಂದ 120 ಸೀಟುಗಳು ಸಿಗಲಿವೆ ಎಂದಿದೆ. ಈ ಮೂಲಕ ಒಟ್ಟು 234 ಸೀಟುಗಳ ಪೈಕಿ 118 ಸೀಟು ಗೆಲ್ಲುವ ಪಕ್ಷ ಅಧಿಕಾರಕ್ಕೆ ಬರಲಿದ್ದು, ಟಿವಿಕೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಹೆಚ್ಚಿದೆ ಎಂದಿದೆ.
ಇದೊಂದು ಸಮೀಕ್ಷೆ ಮಾತ್ರ ಈ ರೀತಿಯ ಅಂಕಿಅಂಶವನ್ನು ನೀಡಿದ್ದು, ವಿಜಯ್ ಅಭಿಮಾನಿಗಳು ಇದನ್ನು ಕಂಡು ಸಂಭ್ರಮಿಸಿದ್ದಾರೆ.

