ಪುರುಷ ಪ್ರಧಾನವೆಂದೇ ಬಿಂಬಿತವಾಗಿರುವ ವಿಮಾನಯಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಹಿಳೆ ಕನಿಕಾ ಟೇಕ್ರಿವಾಲ್. ಅಂದು ಪೈಲಟ್ ಆಗಬೇಕೆಂಬ ಆಸೆಗೆ ಪೋಷಕರು “ಡ್ರೈವರ್ ಆಗ್ತೀಯಾ?” ಎಂದು ಪ್ರಶ್ನಿಸಿದಾಗ ಕುಗ್ಗದ ಈಕೆ, ಇಂದು ಭಾರತದ ಅತಿದೊಡ್ಡ ಖಾಸಗಿ ವಿಮಾನಗಳ ಫ್ಲೀಟ್ ಹೊಂದಿರುವ ‘ಜೆಟ್‌ಸೆಟ್‌ಗೋ’ (JetSetGo) ಕಂಪನಿಯ ಸಂಸ್ಥಾಪಕಿ.
ಪೈಲಟ್ ಕನಸಿನಿಂದ ಉದ್ಯಮದವರೆಗೆ: ಮಾರ್ವಾಡಿ ಕುಟುಂಬದಲ್ಲಿ ಬೆಳೆದ ಕನಿಕಾಗೆ ಬಾಲ್ಯದಿಂದಲೂ ವಿಮಾನಗಳೆಂದರೆ ಅತೀವ ವ್ಯಾಮೋಹ. ನಾಲ್ಕು ವರ್ಷದ ಪುಟ್ಟ ಮಗುವಾಗಿದ್ದಾಗಲೇ ಹೆಲಿಕಾಪ್ಟರ್ ಲ್ಯಾಂಡ್ ಆಗುವುದನ್ನು ನೋಡಿ ಮಂತ್ರಮುಗ್ಧರಾಗಿದ್ದರು. ಆದರೆ ಪೈಲಟ್ ಆಗುವ ಕನಸಿಗೆ ಮನೆಯಲ್ಲಿ ವಿರೋಧ ವ್ಯಕ್ತವಾದಾಗ, ವಿಮಾನ ನಡೆಸುವ ಬದಲು ವಿಮಾನಯಾನ ಉದ್ಯಮವನ್ನೇ ನಡೆಸುವ ನಿರ್ಧಾರಕ್ಕೆ ಬಂದರು. ಕೇವಲ 21ನೇ ವಯಸ್ಸಿನಲ್ಲಿ ಅವರು ಕಂಡ ಕನಸು ಇಂದು 420 ಕೋಟಿ ರೂಪಾಯಿಗಳ ಸಾಮ್ರಾಜ್ಯವಾಗಿ ಬೆಳೆದು ನಿಂತಿದೆ.
ಅಪಹಾಸ್ಯವನ್ನೂ ಮೆಟ್ಟಿ ನಿಂತ ದೃಢತೆ: ಕೇವಲ 5,600 ರೂಪಾಯಿ ಹೂಡಿಕೆಯೊಂದಿಗೆ ಉದ್ಯಮ ಆರಂಭಿಸಿದಾಗ ಯಾರು ಇವರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ವಿಮಾನ ನಿಲ್ದಾಣಕ್ಕೆ ಹೋದಾಗ ಇವರನ್ನು ವಿಮಾನದ ಮಾಲೀಕಿ ಎನ್ನುವ ಬದಲು ‘ಕ್ಯಾಬಿನ್ ಕ್ರೂ’ ಎಂದು ತಪ್ಪಾಗಿ ಭಾವಿಸುತ್ತಿದ್ದರು. ಹೂಡಿಕೆಗಾಗಿ ಅಲೆದಾಗ ಮಾರುಕಟ್ಟೆಯ ಗಾತ್ರದ ಬಗ್ಗೆ ಪ್ರಶ್ನಿಸಿ ಎಲ್ಲರೂ ಬಾಗಿಲು ಮುಚ್ಚಿದ್ದರು. ಆದರೆ ಇಂದು ಆಕಾಶದಲ್ಲಿ ‘ಉಬರ್’ ಮಾದರಿಯ ಸೇವೆಯನ್ನು ಯಶಸ್ವಿಯಾಗಿ ನೀಡುತ್ತಿರುವ ಇವರು, 1 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ಸೇವೆ ನೀಡಿದ್ದಾರೆ.
ಶೂನ್ಯದಿಂದ ನೂರಕ್ಕೆ: ಯಾವುದೇ ದೊಡ್ಡ ಮೊತ್ತದ ಫಂಡ್ ರೈಸಿಂಗ್ ಮಾಡದೆ, ಲಾಭದ ಹಣವನ್ನೇ ಮರುಹೂಡಿಕೆ ಮಾಡಿ ಇಂದು 9 ಖಾಸಗಿ ವಿಮಾನಗಳು ಮತ್ತು 2 ಹೆಲಿಕಾಪ್ಟರ್‌ಗಳ ಒಡತಿಯಾಗಿದ್ದಾರೆ. ಹೂರುನ್ ರಿಚ್ ಲಿಸ್ಟ್‌ನಲ್ಲಿ ಅತ್ಯಂತ ಕಿರಿಯ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಇವರ ಹೆಸರಿದೆ. ಜೆಟ್‌ಸೆಟ್‌ಗೋ ಇಂದು ಬರೀ ಚಾರ್ಟರ್ ವಿಮಾನಗಳನ್ನಷ್ಟೇ ನೀಡುತ್ತಿಲ್ಲ, ಬದಲಾಗಿ ಎಲೆಕ್ಟ್ರಿಕ್ ವಿಮಾನಗಳ ಭವಿಷ್ಯದತ್ತಲೂ ದಾಪುಗಾಲು ಹಾಕುತ್ತಿದೆ.
ಕನಿಕಾ ಟೇಕ್ರಿವಾಲ್ ಅವರ ಈ ಯಶೋಗಾಥೆ, ಕನಸು ಕಾಣಲು ಮತ್ತು ಅದನ್ನು ನನಸಾಗಿಸಲು ಬಂಡವಾಳಕ್ಕಿಂತಲೂ ದೃಢ ಸಂಕಲ್ಪ ಮುಖ್ಯ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.

