HomeKarnatakaಆಸ್ತಿ ಮಾಲೀಕರಿಗೆ ಗುಡ್‌ ನ್ಯುಸ್: ಸ್ವಯಂ ಚಾಲಿತ ಮ್ಯುಟೇನ್‌ಗೆ ವೇಗ

ಆಸ್ತಿ ಮಾಲೀಕರಿಗೆ ಗುಡ್‌ ನ್ಯುಸ್: ಸ್ವಯಂ ಚಾಲಿತ ಮ್ಯುಟೇನ್‌ಗೆ ವೇಗ

ಭೂದಾಖಲೆಗಳಲ್ಲಿ ಪಾರದರ್ಶಕ, ಪರಿಣಾಮಕಾರಿ ಮತ್ತು ಸಮಯಕ್ಕೆ ಅನುಗುಣವಾಗಿ ನವೀಕರಣವನ್ನು ಖಚಿತಪಡಿಸಿಕೊಳ್ಳಲು ಭೂಮಿ ಮತ್ತು ಕಂದಾಯ ನ್ಯಾಯಾಲಯಗಳ ಪ್ರಕರಣ ನಿರ್ವಹಣಾ ವ್ಯವಸ್ಥೆ, ಡಿಜಿಟಲ್ ಆಡಳಿತ ವ್ಯವಸ್ಥೆಗಳನ್ನು ಸರ್ಕಾರವು ಜಾರಿಗೆ ತಂದಿದೆ.

ಫೆಬ್ರವರಿ 24ರಂದು ಜಾರಿಗೆ ಬಂದ ಸ್ವಯಂ ಚಾಲಿತ ಮ್ಯುಟೇಶನ್ ತಂತ್ರಾಂಶದ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 900ಕ್ಕೂ ಅಧಿಕ ಮ್ಯುಟೇಶನ್‌ಗಳು ಸ್ವಯಂ ಚಾಲಿತವಾಗಿ ಅನುಮೋದನೆಗೊಂಡಿದ್ದು, ಈ ನೂತನ ಪ್ರಕ್ರಿಯೆಗೆ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಈ ಹಿಂದೆ ಮ್ಯುಟೇಶನ್‌ಗಳಿಗೆ ಸಂಬಂಧಪಟ್ಟಂತೆ ಎಲ್ಲಾ 7 ದಿನಗಳ ಹಾಗೂ 15 ದಿನಗಳ ಅವಧಿ ಹೊಂದಿರುವ ಈ ನೋಟಿಸ್ ಅವಧಿಯು ಮುಕ್ತಾಯವಾದ ನಂತರ ಸಂಬಂಧಪಟ್ಟ ರಾಜಸ್ವ ನಿರೀಕ್ಷಕರು ಖುದ್ದಾಗಿ ಡಿಜಿಟಲ್ ಸಹಿ ಮೂಲಕ ಅನುಮೋದನೆ ನೀಡುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ಸಲ್ಲಿಸಿರುವ ಮ್ಯುಟೇಶನ್ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಮಸ್ಯೆಯನ್ನು ಬಗೆಹರಿಸಲು ಸ್ವಯಂಚಾಲಿತ ಮ್ಯುಟೇಶನ್ ತಂತ್ರಾಂಶಕ್ಕೆ ಚಾಲನೆ ನೀಡಿದ್ದು, 7 ದಿನಗಳ ನವೀಕರಣವನ್ನು ನೋಂದಾಯಿತ ಮ್ಯುಟೇಶನ್ ಅಂದರೆ ಕ್ರಯ, ವಿಭಾಗ, ದಾನ ಇತ್ಯಾದಿ ಮ್ಯುಟೇಶನಗಳು ಹಾಗೂ 15 ದಿನಗಳ ನೋಂದಾಯಿತವಲ್ಲದ ಪೌತಿ ಮ್ಯುಟೇಶನ್‌ಗಳ ನೋಟಿಸ್ ಅವಧಿಯು ಮುಕ್ತಾಯವಾದ ನಂತರ ತಂತ್ರಾಂಶದ ಮೂಲಕ ನೋಟೀಸ್ ಅಥವಾ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಸರ್ವರ್ ಸಹಿ ಮೂಲಕ ಸ್ವಯಂಚಾಲಿತವಾಗಿ ಅನುಮೋದನೆಯಾಗುತ್ತಿದೆ.

ಸ್ವಯಂಚಾಲಿತವಾಗಿ ಮ್ಯುಟೇಶನ್ ಪೂರ್ಣಗೊಂಡ ನಂತರ ಸಂಬಂಧಪಟ್ಟವರಿಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ. 7 ಕೆಲಸದ ದಿನಗಳು ಅಥವಾ 15 ಕೆಲಸದ ದಿನಗಳ ನೋಟಿಸ್ ಅವಧಿಯೊಳಗೆ ಕಂದಾಯ ನಿರೀಕ್ಷಕರಿಗೆ (ಸರ್ಕಾರಿ ಆಕ್ಷೇಪ) ಮತ್ತು ಸಾರ್ವಜನಿಕರಿಗೆ ಲಾಗಿನ್ ನೀಡಲಾಗಿದ್ದು, ಸಾರ್ವಜನಿಕರು ಯಾವುದೇ ಸ್ಥಳದಿಂದ ಆಕ್ಷೇಪಣೆಯನ್ನು ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರು ತಮ್ಮ ಆಕ್ಷೇಪಣೆ ಸಲ್ಲಿಸಿದ್ದಲ್ಲಿ ಸದರಿ ಮ್ಯುಟೇಶನ್‌ಅನ್ನು ಪೂರ್ಣಗೊಳಿಸದೆ, ತಂತ್ರಾಂಶದ ತಹಶೀಲ್ದಾರರ ನ್ಯಾಯಾಲಯಕ್ಕೆ ಸದರಿ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ. ಸಾರ್ವಜನಿಕರು ತಮ್ಮ ಪಹಣಿಗಳಿಗೆ ಆಧಾರ ಜೋಡಣೆ ಮಾಡಿಕೊಂಡಿರುವ ಪ್ರಕರಣಗಳಲ್ಲಿ ಪಹಣಿಯಲ್ಲಿ ಏನಾದರೂ ಬದಲಾವಣೆಯಾದಲ್ಲಿ ಮೊಬೈಲ್‌ನಲ್ಲಿ ಎಸ್ಎಂಎಸ್ ಬರುವುದರಿಂದ ಅಮಾಯಕರು ಶೋಷಣೆಗೆ ಒಳಗಾಗುವುದು ತಪ್ಪುತ್ತದೆ.

ಸಬ್‌ರಿಜಿಸ್ಟ್ರಾರ್ ಕಚೇರಿಯಿಂದ ದಸ್ತಾವೇಜು ನೋಂದಣಿಯಾದ ತಕ್ಷಣ, ಭೂಮಿ ತಂತ್ರಾಂಶದ ಮೂಲಕ ಸ್ವಯಂಚಾಲಿತವಾಗಿ ಮ್ಯುಟೇಶನ್ ಪ್ರಕ್ರಿಯೆ ಆರಂಭವಾಗಲಿದ್ದು, ಇದರಿಂದಾಗಿ ಸಾರ್ವಜನಿಕರು ಕಂದಾಯ ಅಧಿಕಾರಿಗಳ ಕಚೇರಿಗೆ ಅಲೆಯುವುದು ತಪ್ಪುತ್ತದೆ ಹಾಗೂ ಮ್ಯುಟೇಶನ್ ಪ್ರಕ್ರಿಯೆಯಲ್ಲಿ ಅನಗತ್ಯವಾದ ವಿಳಂಬ ಕಡಿಮೆಯಾಗುವುದರ ಜೊತೆಗೆ ಮತ್ತು ಭ್ರಷ್ಠಾಚಾರಕ್ಕೆ ಕಡಿವಾಣ ಬೀಳುತ್ತದೆ.

ಈ ಹೊಸ ವ್ಯವಸ್ಥೆಯಿಂದಾಗಿ ಆಸ್ತಿ ಖರೀದಿದಾರರು ಮತ್ತು ರೈತರಿಗೆ ಆರ್‌ಟಿಸಿ ಅಥವಾ ಆಸ್ತಿ ದಾಖಲೆಗಳಲ್ಲಿನ ಹೆಸರನ್ನು ತ್ವರಿತವಾಗಿ ಬದಲಾಯಿಸಿಕೊಳ್ಳಲು ಸಾಧ್ಯವಾಗಲಿದ್ದು, ಬ್ಯಾಂಕ್ ಸಾಲ, ಬೆಳೆ ವಿಮೆ ಮತ್ತು ಸರ್ಕಾರದ ಸಬ್ಸಿಡಿಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗಲಿದೆ.

ಈ ಹೊಸ ವ್ಯವಸ್ಥೆಯಲ್ಲಿನ ಸಂಪೂರ್ಣ ಪ್ರಕ್ರಿಯೆಯು ಡಿಜಿಟಲ್ ಪಾರದರ್ಶಕತೆಯನ್ನು ಹೊಂದಿದ್ದು, ಪ್ರತಿ ಹಂತದ ಮಾಹಿತಿಯು ಅರ್ಜಿದಾರರ ಮೊಬೈಲ್‌ಗೆ ಎಸ್ಎಂಎಸ್ ಮತ್ತು ಇ-ಮೇಲ್ ಮೂಲಕ ತಲುಪುವುದರಿಂದ ರೈತರು ಅಥವಾ ಆಸ್ತಿ ಮಾಲೀಕರು ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೆ ಇದ್ದಲ್ಲಿಯೇ ಆನ್‌ಲೈನ್ ಮೂಲಕ ಪಹಣಿ ಅಥವಾ ಖಾತಾ ಡೌನ್ಲೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ಕೂಡಾ ಕಲ್ಪಿಸಲಾಗಿದೆ.

ಈ ಕುರಿತು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ.ಲಕ್ಷೀಪ್ರಿಯಾ ಮಾತನಾಡಿ, “ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೂ 1,77,450 ಮ್ಯುಟೇಶನ್‌ಗಳನ್ನು ತಂತ್ರಾಶದಲ್ಲಿ ದಾಖಲಿಸಲಾಗಿದ್ದು, ಸ್ವಯಂಚಾಲಿತ ಮ್ಯುಟೇಶನ್ ಪ್ರಕ್ರಿಯೆ ಆರಂಭಗೊಂಡ ನಂತರದಲ್ಲಿ 7 ಕೆಲಸದ ದಿನಗಳಲ್ಲಿ ದಾಖಲಾದ 465 ಮತ್ತು 15 ಕೆಲಸದ ದಿನಗಳಲ್ಲಿ ದಾಖಲಾದ 547 ಪ್ರಕರಣಗಳು ಸ್ವಯಂಚಾಲಿತವಾಗಿ ಇತ್ಯರ್ಥಗೊಂಡಿವೆ” ಎಂದು ಹೇಳಿದ್ದಾರೆ.

“ಸ್ವಯಂಚಾಲಿತ ಮ್ಯುಟೇಶನ್ ಪ್ರಕ್ರಿಯೆಯಲ್ಲಿ, ಪಹಣಿಯಲ್ಲಿ ಏನಾದರೂ ಬದಲಾವಣೆಯಾದಲ್ಲಿ ಮೊಬೈಲ್‌ಗೆ ಎಸ್ಎಂಎಸ್ ಬರುವುದರಿಂದ ಅಮಾಯಕರು ಶೋಷಣೆಗೆ ಒಳಗಾಗುವುದು ತಪ್ಪುತ್ತದೆ. ಆದ್ದರಿಂದ ಜಿಲ್ಲೆಯ ಸಾರ್ವಜನಿಕರು ಈವರೆಗೂ ಪಹಣಿಗೆ ಆಧಾರ್ ಜೋಡಣೆ ಮಾಡಿಕೊಳ್ಳದೇ ಇದ್ದಲ್ಲಿ ಕಡ್ಡಾಯವಾಗಿ ಆಧಾರ್ ಜೋಡಣೆ ಮಾಡಿಕೊಳ್ಳಬೇಕು” ಎಂದು ಕರೆ ನೀಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular