ಬೆಂಗಳೂರು : ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳನ್ನು ನೀಡುವ ‘ಪಂಚಮಿತ್ರ’ ಪೋರ್ಟಲ್ ಮತ್ತು ವಾಟ್ಸಪ್ ಚಾಟ್ ಮೂಲಕ ಜನರು ತಮ್ಮ ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸುವ ವಿನೂತನ ಯೋಜನೆ ಪ್ರಾರಂಭಿಸಲಾಗಿತ್ತು. ಜನರು ಮನೆಯಲ್ಲಿಯೇ ಕುಳಿತು ವಾಟ್ಸಪ್ ಮೂಲಕ ಅಹವಾಲು ಸಲ್ಲಿಸಲು ಸಹಾಯವಾಣಿ ಸಂಖ್ಯೆ 8277506000 ಪ್ರಾರಂಭಿಸಲಾಗಿತ್ತು. ಇದು ದೇಶದಲ್ಲೇ ಈ ರೀತಿಯ ಪ್ರಥಮ ಪ್ರಯತ್ನವಾಗಿದ್ದು, ಇದೀಗ ಅತ್ಯಂತ ಯಶಸ್ವಿ ಯೋಜನೆಯಾಗಿ ಹೊರಹೊಮ್ಮಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ..
ಗ್ರಾಮೀಣ ಪ್ರದೇಶಗಳ ಜನರು ವಿವಿಧ ಕೆಲಸಗಳಿಗಾಗಿ ತಾಲೂಕು ಕೇಂದ್ರಗಳಲ್ಲಿನ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದಕ್ಕಾಗಿ ಗ್ರಾಮ ಪಂಚಾಯತಿಗಳಲ್ಲಿಯೇ ಅಗತ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರೊಂದಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ಯೋಜನೆ ಸಹಕಾರಿಯಾಗಿದೆ.
ರಾಜ್ಯದಲ್ಲಿ ಈವರೆಗಿನ ಪಂಚಮಿತ್ರ ವಾಟ್ಸಪ್ ಚಾಟ್ ಬಾಟ್ ಬಳಕೆದಾರರ ವರದಿ ಹೀಗಿದೆ
➧ ರಾಜ್ಯದ ಒಟ್ಟು ಬಳಕೆದಾರರು : 1,21,535
➧ ಎಲ್ಲಾ ಜಿಲ್ಲೆಗಳಿಂದ ಅಹವಾಲು ಸ್ವೀಕಾರ : 12,771
➧ ಅಹವಾಲುಗಳ ವಿಲೇವಾರಿ : 12,708
ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಮಾಹಿತಿ, ಸೇವೆಗಳು ಮತ್ತು ಕುಂದುಕೊರತೆಗಳ ಅಹವಾಲು ಸಲ್ಲಿಸಲು ಸುಲಭ ಮಾರ್ಗ ಇದಾಗಿದೆ. ಗ್ರಾಮೀಣ ಜನರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ..

