
ಜಿ 20 ಶೃಂಗಸಭೆಯಲ್ಲಿ ವಿಶ್ವ ನಾಯಕರನ್ನು ಆಹ್ವಾನಿಸುವ ಸಂದರ್ಭದಲ್ಲಿಯೂ ರಾಷ್ಟ್ರಪತಿ ದ್ರೌಪದಿ ಮುರ್ಮು ನೀಡಿದ ಆಹ್ವಾನ ಪತ್ರಿಕೆಯಲ್ಲಿಯೂ ಭಾರತ್ ಎಂದು ಬರೆಯಲಾಗಿತ್ತು. ಇದಾದ ಬಳಿಕವೇ ದೇಶದಲ್ಲಿ ರಾಜಕೀಯ ಗದ್ದಲ ಜೋರಾಗಿತ್ತು.
ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಭಾರತವನ್ನು ಇಂಡಿಯಾ ಬದಲಾಗಿ ಭಾರತ್ ಎಂದು ಮರುನಾಮಕರಣ ಮಾಡುವ ಬಗ್ಗೆ ಚರ್ಚೆ ನಡೆಯಬಹುದು ಎಂಬ ಊಹಾಪೋಹಗಳ ನಡುವೆಯೇ ಪ್ರಧಾನಿ ಮೋದಿಯ ಈ ನಡೆ ಈ ಮಾತಿಗೆ ಇನ್ನಷ್ಟು ಪುಷ್ಠಿ ನೀಡಿದೆ.
ಜಿ 20 ಪುಸ್ತಕದಲ್ಲಿಯೂ ಭಾರತ್ ಎಂಬ ಹೆಸರನ್ನೇ ಬಳಕೆ ಮಾಡಲಾಗಿದೆ. ಭಾರತ – ಪ್ರಜಾಪ್ರಭುತ್ವದ ತಾಯಿ ಎಂಬ ವಿದೇಶಿ ಪ್ರತಿನಿಧಿಗಳಿಗೆ ನೀಡಲಾದ ಪುಸ್ತಕಗಳಲ್ಲಿ ಬಳಕೆ ಮಾಡಲಾಗಿದೆ. ಭಾರತ ಎಂಬುದು ನಮ್ಮ ದೇಶದ ಅಧಿಕೃತ ಹೆಸರು. ಇದನ್ನು ಸಂವಿಧಾನದಲ್ಲಿಯೇ ಉಲ್ಲೇಖಿಸಲಾಗಿದೆ. 1946-48ರಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿತ್ತು ಎಂದು ಕಿರುಪುಸ್ತಕದಲ್ಲಿ ಬರೆಯಲಾಗಿದೆ.
ಆದರೆ ಈ ವಿಚಾರವಾಗಿ ದೇಶದಲ್ಲಿ ಈಗಾಗಲೇ ದೊಡ್ಡ ಮಟ್ಟದ ವಿವಾದ ಏರ್ಪಟ್ಟಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿವೆ. ಮೋದಿ ಸರ್ಕಾರವು ಇತಿಹಾಸವನ್ನು ತಿರುಚಿ ಭಾರತವನ್ನು ವಿಭಜಿಸಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ.

