ಬೆಂಗಳೂರು: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆ 1ರ ತೃತೀಯ ಭಾಷೆ ಮೌಲ್ಯಮಾಪನ ಮಾಡಲು ಮೌಲ್ಯಮಾಪಕರು ನಿರ್ಧಾರ ಕೈಗೊಂಡಿದ್ದಾರೆ.
ಕರ್ನಾಟಕ ರಾಜ್ಯ ಪ್ರೌಢಶಾಲಾ ತೃತೀಯ ಭಾಷೆಗಳ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಧರ್ ಸಿ.ಎಂ. ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸರ್ಕಾರ ಏಕಾಏಕಿ ಎಸ್‌ಎಸ್ಎಲ್‌ಸಿ ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್ ನೀಡುವುದಾಗಿ ಪ್ರಕಟಿಸಿದೆ. ಇದು ಭಾಷೆ ಕಲಿಕೆಯ ಮಹತ್ವ ತಗ್ಗಿಸಿ ತೃತೀಯ ಭಾಷೆ ಬೋಧಕರ ವೃತ್ತಿಗೂ ಪೆಟ್ಟು ತರುತ್ತದೆ ಎಂದು ಭಾವಿಸಿ ಮೌಲ್ಯಮಾಪನ ಬಹಿಷ್ಕಾರಕ್ಕೆ ನಿರ್ಧರಿಸಲಾಗಿತ್ತು. ಆದರೆ, ಸರ್ಕಾರ ತೃತೀಯ ಭಾಷೆ ಬೋಧನೆ, ಪರೀಕ್ಷೆ ಇರುತ್ತದೆ. ಫಲಿತಾಂಶಕ್ಕೆ ಮಾತ್ರ ಅಂಕ ಆಧರಿತವಾಗಿ ಪರಿಗಣಿಸುವುದಿಲ್ಲ ಎಂದು ತಿಳಿಸಿದೆ.
ಸರ್ಕಾರ ಏನೇ ನಿರ್ಧಾರ ಮಾಡಿದರೂ ಆ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಈಗ ಮಕ್ಕಳ ಹಿತದೃಷ್ಟಿಯಿಂದ ಮೌಲ್ಯಮಾಪನ ಬಹಿಷ್ಕರಿಸುವ ನಿರ್ಧಾರ ಹಿಂಪಡೆಯಲಾಗಿದೆ ಎಂದು ಶಶಿಧರ್ ಅವರು ಮಾಹಿತಿ ನೀಡಿದ್ದಾರೆ.

