ಅಸ್ಸಾಂ ವಿಧಾನಸಭೆಯ 120 ಸೀಟುಗಳಿಗೆ ಮಾರ್ಚ್ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಈಗಾಗಲೇ ಚುನಾವಣಾ ತಯಾರಿ ಆರಂಭವಾಗಿದ್ದು, ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಲಿದೆ.
ರಾಜ್ಯದ ಆಡಳಿತ ಪಕ್ಷವಾದ ಬಿಜೆಪಿ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ತಂತ್ರವನ್ನು ರೂಪಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ 103 ಸೀಟುಗಳಲ್ಲಿ ಬಿಜೆಪಿ ಪ್ರಬಲವಾಗಿದೆ ಎಂದು ಹೇಳಿದ್ದಾರೆ.
ಈ ಬಾರಿ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸುಮಾರು 40 ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸುಳಿವು ನೀಡಿದ್ದಾರೆ.
ಜೋರ್ಹತ್ನಲ್ಲಿ ನಡೆದ ‘ಮುಖ್ಯಮಂತ್ರಿಯವರ ಆತ್ಮನಿರ್ಭರ್ ಅಸ್ಸಾಂ ಅಭಿಯಾನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ಬಾರಿ ನಮ್ಮ ಬಳಿ 103 ಭಾರೀ ಪ್ರಭಾವ ಹೊಂದಿದ ಸ್ಥಾನಗಳಿವೆ. 40 ಹೊಸ ನಾಯಕರು ಈ ಬಾರಿ ಸ್ಪರ್ಧಿಸಲಿದ್ದಾರೆ. ಅವರು ಖಂಡಿತವಾಗಿಯೂ ಗೆದ್ದು ಬರುತ್ತಾರೆ” ಎಂದು ತಿಳಿಸಿದರು.
ಸೀಟು ಹಂಚಿಕೆ: ವಿಧಾನಸಭೆ ಸೀಟು ಹಂಚಿಕೆ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, “ಅಸ್ಸಾಂ ಗಣ ಪರಿಷತ್ ಜೊತೆ ಚರ್ಚೆಗಳು ನಡೆಯುತ್ತಿವೆ. ರಾಭಾ ಜಂಟಿ ವೇದಿಕೆಯೊಂದಿಗಿನ ಮಾತುಕತೆಗಳು ಬಹುತೇಕ ಅಂತಿಮಗೊಂಡಿವೆ ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಜೊತೆಗಿನ ಚರ್ಚೆಗಳು ಶೀಘ್ರವೇ ನಡೆಯುವ ನಿರೀಕ್ಷೆಯಿದೆ” ಎಂದರು.
ಚುನಾವಣಾ ದಿನಾಂಕದ ಕುರಿತು ಮಾತನಾಡಿ, “ಚುನಾವಣೆಗಳನ್ನು ಬೊಹಾಗ್ ಬಿಹು ಹಬ್ಬಕ್ಕೂ ಮುನ್ನವೇ ನಡೆಸುವಂತೆ ಸರ್ಕಾರವು ಚುನಾವಣಾ ಆಯೋಗವನ್ನು ಕೋರಿದೆ. ಹಬ್ಬದ ನಂತರ ಮತದಾನವನ್ನು ನಿಗದಿಪಡಿಸಿದರೆ ಉಂಟಾಗಬಹುದಾದ ಭದ್ರತಾ ಸಮಸ್ಯೆಗಳನ್ನು ವಿವರಿಸಲಾಗಿದೆ” ಎಂದು ಹೇಳಿದರು.
“ನಾನು ಚುನಾವಣಾ ದಿನಾಂಕ ಘೋಷಿಸಲು ಸಾಧ್ಯವಿಲ್ಲ. ಆದರೆ ಬೊಹಾಗ್ ಬಿಹು ಹಬ್ಬಕ್ಕೂ ಮುನ್ನವೇ ಚುನಾವಣೆಗಳನ್ನು ನಡೆಸುವಂತೆ ನಾವು ಭಾರತೀಯ ಚುನಾವಣಾ ಆಯೋಗವನ್ನು ಕೋರಿದ್ದೇವೆ. ಬೊಹಾಗ್ ಬಿಹು ನಂತರ ಮಳೆಗಾಲ ಆರಂಭವಾಗುತ್ತದೆ, ಆ ಅವಧಿಯಲ್ಲಿ ಚುನಾವಣೆಗಳನ್ನು ನಡೆಸುವುದು ಕಷ್ಟಕರವಾಗಿರುತ್ತದೆ” ಎಂದರು.
“ಒಂದು ವೇಳೆ ಬಿಹು ನಂತರ ಚುನಾವಣೆ ನಡೆದರೆ, ನಾವು ಬಿಹು ಕಾರ್ಯಕ್ರಮಗಳು ಮತ್ತು ಚುನಾವಣಾ ಪ್ರಚಾರ ಎರಡಕ್ಕೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕಾಗುತ್ತದೆ, ಇದು ಸವಾಲಿನ ಕೆಲಸವಾಗಲಿದೆ” ಎಂದು ಅವರು ಹೇಳಿದರು.
ವಿರೋಧ ಪಕ್ಷದ ಮೈತ್ರಿಕೂಟದ ಪಾಲುದಾರರಿಗೆ ಅಲ್ಪಸಂಖ್ಯಾತ ಪ್ರಾಬಲ್ಯವಿರುವ ಹಲವು ಕ್ಷೇತ್ರಗಳನ್ನು ಬಿಟ್ಟುಕೊಡುವುದರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉಂಟಾಗಿರುವ ಅಸಮಾಧಾನದ ವರದಿಗಳಿಗೆ ಪ್ರತಿಕ್ರಿಯಿಸಿದ ಶರ್ಮಾ, “ಅಲ್ಪಸಂಖ್ಯಾತ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಆ ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಒಂದು ವೇಳೆ ಆ ಕ್ಷೇತ್ರಗಳನ್ನು ಬಿಟ್ಟುಕೊಟ್ಟರೆ ಮುಂದಿನ ಬಾರಿ ವಿರೋಧ ಪಕ್ಷದ ಸಾಲಿನಲ್ಲಿ ಕುಳಿತುಕೊಳ್ಳುವ ಅವಕಾಶವನ್ನೂ ಕಾಂಗ್ರೆಸ್ ಕಳೆದುಕೊಳ್ಳಬಹುದು” ಎಂದು ಎಚ್ಚರಿಸಿದರು.
“126 ಸದಸ್ಯ ಬಲದ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಪಡೆಯಲು ಒಂದು ಪಕ್ಷಕ್ಕೆ ಕನಿಷ್ಠ 22 ಸ್ಥಾನಗಳ ಅಗತ್ಯವಿದೆ. ಒಂದು ವೇಳೆ ರೈಜೋರ್ ದಳ 5 ಸ್ಥಾನಗಳನ್ನು ಗಳಿಸಿದರೆ, ಎಜೆಪಿ 1 ಸ್ಥಾನವನ್ನು ಪಡೆದರೆ ಮತ್ತು ಎಐಯುಡಿಎಫ್ 2-3 ಸ್ಥಾನಗಳನ್ನು ಗೆದ್ದರೆ, ಆಗ ಕಾಂಗ್ರೆಸ್ ಖಂಡಿತವಾಗಿಯೂ ವಿರೋಧ ಪಕ್ಷದ ಸ್ಥಾನವನ್ನು ಕಳೆದುಕೊಳ್ಳುತ್ತದೆ” ಎಂದು ಮುಖ್ಯಮಂತ್ರಿಗಳು ಹೇಳಿದರು.

