HomeLatest Newsಏಷ್ಯನ್ ಗೇಮ್ಸ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ ಭಾರತ ತಂಡದ ಕ್ವಾರ್ಟರ್ ಫೈನಲ್ ಪಂದ್ಯ ಯಾವಾಗ,...

ಏಷ್ಯನ್ ಗೇಮ್ಸ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ ಭಾರತ ತಂಡದ ಕ್ವಾರ್ಟರ್ ಫೈನಲ್ ಪಂದ್ಯ ಯಾವಾಗ, ಎದುರಾಳಿ ಯಾರು?

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ಗೆ ಸಿದ್ಧತೆಗಳು ನಡೆಯುತ್ತಿವೆ. ಸೆಪ್ಟೆಂಬರ್ 19ರಿಂದ ಕ್ರೀಡಾಕೂಟ ಆರಂಭವಾಗಲಿದ್ದು, ಈ ಬಾರಿ ಕ್ರಿಕೆಟ್‌ಗೂ ಸ್ಥಾನ ನೀಡಲಾಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ ಸೆಪ್ಟೆಂಬರ್ 7ರಂದು ಕ್ರಿಕೆಟ್ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.2022ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲೂ ಕ್ರಿಕೆಟ್‌ ಆಡಿಸಲಾಗಿತ್ತು. ಆಗ ಭಾರತ ಪುರುಷರ ಮತ್ತು ಮಹಿಳಾ ತಂಡಗಳು ಚಿನ್ನದ ಪದಕ ಗೆದ್ದಿದ್ದವು. ಈ ಬಾರಿ ಕೂಡ ಎರಡೂ ತಂಡಗಳು ಪ್ರಶಸ್ತಿ ಉಳಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿವೆ.

ಸೆ.17ರಿಂದ ಮಹಿಳಾ ಕ್ರಿಕೆಟ್

ಏಷ್ಯನ್ ಗೇಮ್ಸ್‌ ಅಧಿಕೃತವಾಗಿ ಸೆಪ್ಟೆಂಬರ್ 19ರಂದು ಆರಂಭವಾದರೂ ಕ್ರಿಕೆಟ್‌ ಪಂದ್ಯಗಳು ಸೆಪ್ಟೆಂಬರ್ 17ರಿಂದಲೇ ಶುರುವಾಗಲಿವೆ.ಮಹಿಳಾ ಕ್ರಿಕೆಟ್‌ ಪಂದ್ಯಗಳು ಸೆಪ್ಟೆಂಬರ್ 17ರಿಂದ 22ರವರೆಗೆ ನಡೆಯಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತ ಮಹಿಳಾ ತಂಡ ಸೆಪ್ಟೆಂಬರ್ 18ರಂದು ನಾಲ್ಕನೇ ಕ್ವಾರ್ಟರ್ ಫೈನಲ್‌ನಲ್ಲಿ ಆತಿಥೇಯ ಜಪಾನ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಸಂಜೆ 5.30ಕ್ಕೆ ಆರಂಭವಾಗಲಿದೆ.

ಸೆಮಿಫೈನಲ್ ಪಂದ್ಯಗಳು ಸೆಪ್ಟೆಂಬರ್ 20ರಂದು ನಡೆಯಲಿವೆ. ಸೆಪ್ಟೆಂಬರ್ 22ರಂದು ಕಂಚಿನ ಪದಕದ ಪಂದ್ಯ ಹಾಗೂ ಚಿನ್ನದ ಪದಕಕ್ಕಾಗಿ ಫೈನಲ್ ಪಂದ್ಯ ನಡೆಯಲಿದೆ.

ಪುರುಷರ ಕ್ರಿಕೆಟ್‌ ಪಂದ್ಯಗಳು ಸೆಪ್ಟೆಂಬರ್ 24ರಿಂದ ಆರಂಭವಾಗಲಿವೆ. ಅಫ್ಘಾನಿಸ್ತಾನ, ನೇಪಾಳ, ಜಪಾನ್, ಹಾಂಗ್ ಕಾಂಗ್, ಮಲೇಷ್ಯಾ ಮತ್ತು ಓಮನ್ ತಂಡಗಳು ಆರಂಭಿಕ ಹಂತದಲ್ಲಿ ಆಡಲಿವೆ.ಗುಂಪು ಹಂತದ ಪಂದ್ಯಗಳು ಸೆಪ್ಟೆಂಬರ್ 24ರಿಂದ 26ರವರೆಗೆ ನಡೆಯಲಿವೆ. ಬಳಿಕ ಸೆಪ್ಟೆಂಬರ್ 28ರಿಂದ ಕ್ವಾರ್ಟರ್ ಫೈನಲ್ ಪಂದ್ಯಗಳು ಆರಂಭವಾಗಲಿವೆ.

https://x.com/ACCMedia1/status/2096842486253818254

ಭಾರತ ತಂಡ ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಸೆಪ್ಟೆಂಬರ್ 28ರಂದು ನಡೆಯುವ ಎರಡನೇ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡ ಗ್ರೂಪ್ ಎನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವನ್ನು ಎದುರಿಸಲಿದೆ.

ಏಷ್ಯನ್ ಗೇಮ್ಸ್ 2026ರ ಕೂಟದ ಟಿವಿ ಪ್ರಸಾರದ ಅಧಿಕೃತ ಹಕ್ಕನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳು ಪಡೆದುಕೊಂಡಿವೆ. ಹೀಗಾಗಿ ಎಲ್ಲಾ ಪಂದ್ಯಗಳು ಸೋನಿ ಸ್ಪೋರ್ಟ್ಸ್ ಟೆನ್ 1, ಟೆನ್ 3, ಟೆನ್ 5, ಮತ್ತು ಎಚ್ ಡಿ ಚಾನಲ್ ಗಳಲ್ಲಿ ಸೇರ ಪ್ರಸಾರವಾಗಲಿವೆ.

ಭಾರತಕ್ಕೆ ಎದುರಾಗುವ ತಂಡ ಯಾವುದು?

ಗ್ರೂಪ್ ಎನಲ್ಲಿ ಅಫ್ಘಾನಿಸ್ತಾನ, ನೇಪಾಳ ಮತ್ತು ಜಪಾನ್ ತಂಡಗಳಿವೆ. ಹೀಗಾಗಿ ಈ ಮೂರು ತಂಡಗಳಲ್ಲಿ ಒಂದು ತಂಡ ಭಾರತಕ್ಕೆ ಕ್ವಾರ್ಟರ್ ಫೈನಲ್‌ನಲ್ಲಿ ಎದುರಾಗಲಿದೆ.

ಭಾರತದ ಕ್ವಾರ್ಟರ್ ಫೈನಲ್ ಪಂದ್ಯ ಸೆಪ್ಟೆಂಬರ್ 28ರಂದು ಸಂಜೆ 5.30ಕ್ಕೆ ನಡೆಯಲಿದೆ.ಸೆಮಿಫೈನಲ್ ಪಂದ್ಯಗಳು ಅಕ್ಟೋಬರ್ 1ರಂದು ನಡೆಯಲಿವೆ. ಚಿನ್ನ ಮತ್ತು ಕಂಚಿನ ಪದಕಕ್ಕಾಗಿ ಪಂದ್ಯಗಳು ಅಕ್ಟೋಬರ್ 3ರಂದು ನಡೆಯಲಿವೆ.

ಒಂದೇ ದಿನ ಎರಡು ದೇಶಗಳಲ್ಲಿ ಭಾರತದ ಪಂದ್ಯ?

ಅಕ್ಟೋಬರ್ 3ರಂದು ಮತ್ತೊಂದು ಪ್ರಮುಖ ಪಂದ್ಯವೂ ನಿಗದಿಯಾಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಏಕದಿನ ಪಂದ್ಯ ಇದೇ ದಿನ ನ್ಯೂ ಚಂಡೀಗಢದಲ್ಲಿ ನಡೆಯಲಿದೆ.ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ತಂಡ ಫೈನಲ್‌ಗೆ ತಲುಪಿದರೆ, ಅಕ್ಟೋಬರ್ 3ರಂದು ಭಾರತದ ಎರಡು ಕ್ರಿಕೆಟ್ ತಂಡಗಳು ಎರಡು ವಿಭಿನ್ನ ದೇಶಗಳಲ್ಲಿ ಪಂದ್ಯ ಆಡಿದಂತಾಗಲಿದೆ. ಒಂದು ತಂಡ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನಕ್ಕಾಗಿ ಆಡಿದರೆ, ಮತ್ತೊಂದು ತಂಡ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯ ಆಡಲಿದೆ.

ಪುರುಷರ ತಂಡಕ್ಕೆ VVS ಲಕ್ಷ್ಮಣ್ ಕೋಚ್

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಜವಾಬ್ದಾರಿಯನ್ನು VVS ಲಕ್ಷ್ಮಣ್ ವಹಿಸಲಿದ್ದಾರೆ.ಕೇಂದ್ರ ಕ್ರೀಡಾ ಸಚಿವಾಲಯ ಪ್ರಕಟಿಸಿರುವ 768 ಸದಸ್ಯರ ಭಾರತೀಯ ತಂಡದಲ್ಲಿ 503 ಕ್ರೀಡಾಪಟುಗಳು, 246 ತಂಡದ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ಹಾಗೂ 19 ಕಾಂಟಿಂಜೆಂಟ್ ಸಿಬ್ಬಂದಿ ಇದ್ದಾರೆ.

ನಿಯಮಿತ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಸೆಪ್ಟೆಂಬರ್ 27ರಿಂದ ವೆಸ್ಟ್ ಇಂಡೀಸ್ ವಿರುದ್ಧ ವೈಟ್-ಬಾಲ್ ಸರಣಿ ಆರಂಭವಾಗಲಿದ್ದು, ಅದಕ್ಕೂ ಮುನ್ನ ಗಂಭೀರ್ ವಿಶ್ರಾಂತಿ ಪಡೆಯಲಿದ್ದಾರೆ.ಲಕ್ಷ್ಮಣ್ ಅವರೊಂದಿಗೆ ಸುನಿಲ್ ಜೋಶಿ, ಹೃಷಿಕೇಶ್ ಕಣಿತ್ಕರ್ ಮತ್ತು ಸುಭದೀಪ್ ಘೋಷ್ ಸಹಾಯಕ ಸಿಬ್ಬಂದಿಯಾಗಿ ತಂಡದೊಂದಿಗೆ ಇರಲಿದ್ದಾರೆ. ಮಹಿಳಾ ತಂಡದ ಕೋಚ್ ಆಗಿ ಅಮೋಲ್ ಮುಜುಮ್ದಾರ್ ಕಾರ್ಯನಿರ್ವಹಿಸಲಿದ್ದಾರೆ.ಇತ್ತೀಚೆಗೆ ಜಿಂಬಾಬ್ವೆ ವಿರುದ್ಧ ನಡೆದ ಟಿ20 ಸರಣಿಯಲ್ಲೂ ಲಕ್ಷ್ಮಣ್ ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

2022ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ಮತ್ತು ಮಹಿಳಾ ತಂಡಗಳು ಚಿನ್ನದ ಪದಕ ಗೆದ್ದಿದ್ದವು.ಪುರುಷರ ವಿಭಾಗದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ತಂಡ ಚಿನ್ನ ಗೆದ್ದಿತ್ತು. ಮಹಿಳಾ ವಿಭಾಗದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡ ಚಾಂಪಿಯನ್ ಆಗಿತ್ತು.ಈ ಬಾರಿ ಕೂಡ ಎರಡೂ ತಂಡಗಳು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲಿವೆ. ಕ್ವಾರ್ಟರ್ ಫೈನಲ್‌ನಿಂದಲೇ ನಾಕೌಟ್ ಹಂತ ಆರಂಭವಾಗುವುದರಿಂದ ಭಾರತದ ಪಂದ್ಯಗಳ ಮೇಲೆ ಅಭಿಮಾನಿಗಳ ಗಮನ ಇರಲಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular