ಕೊಪ್ಪಳ: ಸಿದ್ದರಾಮಯ್ಯ ಅಲ್ಲದೇ ಬೇರೆ ಯಾರೇ ಮುಖ್ಯಮಂತ್ರಿಯಾದರೂ ಸರ್ಕಾರ ನಡೆಸುವುದು ಕಷ್ಟ ಇದೆ ಎಂದು ಸಿಎಂ ಆಪ್ತ ಶಾಸಕ ಅಶೋಕ್ ಪಟ್ಟಣ್ ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಪಟ್ಟಣ್, ಮುಖ್ಯಮಂತ್ರಿ ಬದಲಾವಣೆಯಾಗುವುದಿಲ್ಲ ಎಂದು ಎಲ್ಲರೂ ಹೇಳಿದ್ದಾರೆ. ಸಿಎಂ ಸಹ ಹೈಕಮಾಂಡ್ ಹೇಳಿದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಹೈಕಮಾಂಡ್ ಹೇಳುತ್ತಿಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಚೆನ್ನಾಗಿದ್ದಾರೆ. ಜಗಳ ಆಗ್ತಾ ಇದೆ ಅಂತ ಸೃಷ್ಟಿ ಮಾಡಲಾಗುತ್ತಿದೆ ಅಷ್ಟೇ. ಯಾವುದೇ ಜಗಳವೂ ಇಲ್ಲ. ಕಿತ್ತಾಟವೂ ಇಲ್ಲ ಎಂದು ಹೇಳಿದರು.
ಇನ್ನು ಇಕ್ಬಾಲ್ ಹುಸೇನ್ ಮೊದಲ ಬಾರಿ ಶಾಸಕರಾಗಿದ್ದಾರೆ. ಅವರಿಗೆ ಸ್ವಲ್ಪ ಮೆಚ್ಯುರಿಟಿ ಕಡಿಮೆ. ಅವರು ಡಿ.ಕೆ.ಶಿವಕುಮಾರ್ ಅವರಿಗೆ ಬಹಳ ಆತ್ಮೀಯರು. ಹೀಗಾಗಿ ಹೇಳುತ್ತಾರೆ. ಡಿ.ಕೆ.ಶಿವಕುಮಾರ್ ನಮಗೂ ಆತ್ಮೀಯರು. ಅವರು ಸಿಎಂ ಆದರೆ ನಮಗೂ ಸಂತೋಷ. ಆದರೆ ರಾಹುಲ್ ಗಾಂಧಿ ಹಾಗೂ ಎಲ್ಲಾ ಶಾಸಕರ ಭಾವನೆ ಸಿದ್ದರಾಮಯ್ಯ ಅವರೇ ಇರಲಿ ಎಂಬುದಾಗಿದೆ ಎಂದು ಹೇಳಿದರು.
ಎರಡೂವರೆ ವರ್ಷ ಸಿಎಂ ಸಿದದ್ರಾಮಯ್ಯ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಹಾಗಾಗಿ ಅವರೇ ಇರಲಿ ಅನ್ನುವ ಭಾವನೆ ಇದೆ. 2028ಕ್ಕೆ ಡಿ.ಕೆ.ಶಿವಕುಮಾರ್ ಕ್ಲೇಮ್ ಮಾಡಲಿ ಎಂದು ಹೇಳಿದರು.

