ಬೆಂಗಳೂರು-ತಿನಿತ್ಯ 6 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ನಿರ್ದೇಶನ ನೀಡಿರುವುದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಕರ್ನಾಟಕದ ಕಾವೇರಿ ಕಣಿವೆ ಜಲಾಶಯಗಳ ವಾಸ್ತವ ಸ್ಥಿತಿ, ಕುಡಿಯುವ ನೀರಿನ ಅಗತ್ಯ, ರೈತರ ಪರಿಸ್ಥಿತಿ ಹಾಗೂ ಮುಂದಿನ ದಿನಗಳ ನೀರಿನ ಲಭ್ಯತೆಯನ್ನು ವೈಜ್ಞಾನಿಕ ಅಂಕಿ-ಅಂಶಗಳೊಂದಿಗೆ ಪ್ರಾಧಿಕಾರದ ಮುಂದೆ ಸಮರ್ಥವಾಗಿ ಮಂಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದು ಕೇವಲ ಆಡಳಿತಾತ್ಮಕ ಲೋಪವಲ್ಲ; ಕರ್ನಾಟಕದ ಜಲ ಹಕ್ಕುಗಳನ್ನು ರಕ್ಷಿಸುವಲ್ಲಿ ಸರ್ಕಾರ ತೋರಿದ ಗಂಭೀರ ನಿರ್ಲಕ್ಷ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈಜ್ಞಾನಿಕ ಅಂಕಿ-ಅಂಶಗಳ ಕುರಿತು
15 ದಿನ 6 ಸಾವಿರ ಕ್ಯೂಸೆಕ್ ಎಂದರೆ 7.5 ಟಿಎಂಸಿ ಆಗುತ್ತದೆ, ನಾವು ಸಂಕಷ್ಟದಲ್ಲಿ ಇರುವಾಗ ನೀರು ಬಿಡುಗಡೆ ಅಸಾಧ್ಯ. ತಕ್ಷಣ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿ ವಾಸ್ತವ ಸ್ಥಿತಿ ಮನವರಿಕೆ ಮಾಡಬೇಕು. ಯಾವುದೇ ಕಾರಣಕ್ಕೂ ಈಗ ನೀರು ಬಿಡುಗಡೆ ಮಾಡಬಾರದು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರು ಈ ವೈಫಲ್ಯದ ಹೊಣೆ ಹೊತ್ತು ರಾಜ್ಯದ ಜನರಿಗೆ ಉತ್ತರ ನೀಡಬೇಕು. ಪ್ರಾಧಿಕಾರದ ಮುಂದೆ ಕರ್ನಾಟಕದ ಪರ ಯಾವ ಅಂಶಗಳನ್ನು ಮಂಡಿಸಲಾಯಿತು? ರಾಜ್ಯದ ಜಲಾಶಯಗಳ ನೈಜ ಸ್ಥಿತಿಯ ವರದಿಯನ್ನು ಸಲ್ಲಿಸಲಾಗಿತ್ತೇ? ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದರೆ ಬೆಂಗಳೂರಿನ ಕುಡಿಯುವ ನೀರು ಮತ್ತು ಕರ್ನಾಟಕದ ರೈತರ ಮೇಲೆ ಆಗುವ ಪರಿಣಾಮವನ್ನು ಸಮರ್ಪಕವಾಗಿ ವಿವರಿಸಲಾಗಿತ್ತೇ? ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಹಿತಾಸಕ್ತಿ ಕಾಪಾಡಲು ಪ್ರಾಧಿಕಾರದ ಮುಂದೆ ಸರ್ಕಾರ ಮಂಡಿಸಿದ ದಾಖಲೆಗಳು ಯಾವುವು? ಅವುಗಳನ್ನು ಸಾರ್ವಜನಿಕಗೊಳಿಸಬೇಕು?
ಜಲಾಶಯಗಳ ಲೈವ್ ಸ್ಟೋರೇಜ್, ಒಳಹರಿವು ಮತ್ತು ಮುಂದಿನ ತಿಂಗಳ ನೀರಿನ ಅಗತ್ಯದ ವೈಜ್ಞಾನಿಕ ಲೆಕ್ಕಾಚಾರವನ್ನು ಏಕೆ ಪರಿಣಾಮಕಾರಿಯಾಗಿ ಮಂಡಿಸಲಿಲ್ಲ?
ರಾಜ್ಯ ಸರ್ಕಾರದ ಲೋಪಗಳು
ಬೆಂಗಳೂರಿನ ಕುಡಿಯುವ ನೀರಿನ ಅಗತ್ಯ ಹಾಗೂ ರೈತರ ಬೆಳೆಗಳಿಗೆ ಬೇಕಾದ ನೀರನ್ನು ಪರಿಗಣಿಸಿ ನೀರಿನ ಕೊರತೆಯ ವಾಸ್ತವಾಂಶವನ್ನು ಏಕೆ ಮನವರಿಕೆ ಮಾಡಿಕೊಡಲಿಲ್ಲ?
ರಾಜ್ಯದ ಪರ ವಾದ ಮಂಡಿಸಿದ ತಾಂತ್ರಿಕ ಮತ್ತು ಕಾನೂನು ತಂಡದ ಕಾರ್ಯವೈಖರಿಯ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು?
ಕರ್ನಾಟಕದ ಹಿತಾಸಕ್ತಿಯನ್ನು ಸಮರ್ಪಕವಾಗಿ ಮಂಡಿಸುವಲ್ಲಿ ಯಾರಿಂದ ಲೋಪವಾಗಿದೆ ಎಂಬುದನ್ನು ಗುರುತಿಸಿ ಹೊಣೆಗಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ತಾಂತ್ರಿಕ-ಕಾನೂನು ರೂಪುರೇಷೆ
ಮುಂದಿನ ದಿನಗಳಲ್ಲಿ ಯಾವುದೇ ನೀರು ಬಿಡುಗಡೆ ಆದೇಶ ಬರುವ ಮುನ್ನವೇ ರಾಜ್ಯದ ಪರಿಸ್ಥಿತಿಯನ್ನು ಸಮರ್ಥವಾಗಿ ಮಂಡಿಸಲು ಶಾಶ್ವತ ಕಾವೇರಿ ತಾಂತ್ರಿಕ-ಕಾನೂನು ಕಾರ್ಯತಂತ್ರ ರೂಪಿಸಬೇಕು.
“ನೀರು ಇಲ್ಲದಿದ್ದರೂ ನೀರು ಬಿಡುವುದು, ಆದೇಶ ಬಂದ ನಂತರ ಕಣ್ಣೀರು ಹಾಕುವುದು—ಇದು ರಾಜ್ಯ ಸರ್ಕಾರದ ಕಾವೇರಿ ನೀತಿ ಆಗಬಾರದು” ಎಂದು ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ.
ಕಾವೇರಿ ನೀರು ಕರ್ನಾಟಕದ ರೈತರ ಬದುಕು, ಬೆಂಗಳೂರಿನ ಕುಡಿಯುವ ನೀರು ಮತ್ತು ರಾಜ್ಯದ ಭವಿಷ್ಯದ ಜಲ ಭದ್ರತೆಯ ಪ್ರಶ್ನೆಯಾಗಿದೆ. ರಾಜ್ಯದ ಹಿತಾಸಕ್ತಿಯನ್ನು ಬಲಿಕೊಟ್ಟು ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಬಿಜೆಪಿ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ.
ಸರ್ಕಾರ ಕೂಡಲೇ ಪ್ರಾಧಿಕಾರದ ಮುಂದೆ ಪುನರ್‌ಪರಿಶೀಲನೆಗೆ ಒತ್ತಾಯಿಸಿ, ಅಗತ್ಯವಿದ್ದರೆ ಕಾನೂನು ಹೋರಾಟಕ್ಕೆ ಮುಂದಾಗಬೇಕು. ಕರ್ನಾಟಕದ ನೀರಿನ ಮೇಲೆ ಮೊದಲ ಹಕ್ಕು ಕರ್ನಾಟಕದ ಜನರದು ಎಂಬ ನಿಲುವನ್ನು ಸರ್ಕಾರ ಸ್ಪಷ್ಟವಾಗಿ ಮತ್ತು ನಿರ್ದಾಕ್ಷಿಣ್ಯವಾಗಿ ಪ್ರತಿಪಾದಿಸಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.

