HomeKarnatakaಅಧಿಕಾರದ ಮೊದಲ ನೂರು ದಿನಗಳಲ್ಲೇ ‘ಹೊಸ ಕರ್ನಾಟಕ’ದ ಅಜೆಂಡಾ: ಡಿ.ಕೆ. ಶಿವಕುಮಾರ್ ಆಡಳಿತದ ಪ್ರಮುಖ ನಿರ್ಧಾರಗಳ...

ಅಧಿಕಾರದ ಮೊದಲ ನೂರು ದಿನಗಳಲ್ಲೇ ‘ಹೊಸ ಕರ್ನಾಟಕ’ದ ಅಜೆಂಡಾ: ಡಿ.ಕೆ. ಶಿವಕುಮಾರ್ ಆಡಳಿತದ ಪ್ರಮುಖ ನಿರ್ಧಾರಗಳ ಹಿನ್ನೋಟ

ಬೆಂಗಳೂರು- ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು 2026ರ ಜೂನ್ 3ರಂದು ಅಧಿಕಾರ ಸ್ವೀಕರಿಸಿದ ಬಳಿಕ, ಆಡಳಿತದ ಮೊದಲ ಹಂತದಲ್ಲೇ ವಿದ್ಯಾರ್ಥಿಗಳು, ಯುವಜನತೆ, ರೈತರು, ಸರ್ಕಾರಿ ನೌಕರರು, ಉದ್ಯೋಗಾಕಾಂಕ್ಷಿಗಳು ಹಾಗೂ ಬೆಂಗಳೂರಿನ ಮೂಲಸೌಕರ್ಯಕ್ಕೆ ಒತ್ತು ನೀಡುವ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.

ಅಧಿಕಾರ ಸ್ವೀಕರಿಸಿದ ಮೊದಲ ಸಚಿವ ಸಂಪುಟ ಸಭೆಯಲ್ಲೇ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರಿ ನಾನ್-ಲಕ್ಸುರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ಖಾಸಗಿ ವಲಯದ ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ಯೋಗ ವಿನಿಮಯ ವ್ಯವಸ್ಥೆ, ರಾಜ್ಯಾದ್ಯಂತ 10 ಸಾವಿರ ಯುವ ಸಂಘಗಳ ಸ್ಥಾಪನೆ ಹಾಗೂ ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ₹2 ಸಾವಿರ ಕೋಟಿ ಸೇರಿದಂತೆ ಹಲವು ನಿರ್ಧಾರಗಳನ್ನು ಪ್ರಕಟಿಸುವ ಮೂಲಕ ಶಿವಕುಮಾರ್ ಸರ್ಕಾರ ತನ್ನ ಆದ್ಯತೆಗಳನ್ನು ಸ್ಪಷ್ಟಪಡಿಸಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿದ್ಯಾರ್ಥಿ–ಯುವಜನತೆಗೆ ಮೊದಲ ಆದ್ಯತೆ

ವಿದ್ಯಾರ್ಥಿ–ಯುವಜನತೆಗೆ ಮೊದಲ ಆದ್ಯತೆ

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ನಿರ್ಧಾರ ಗಮನ ಸೆಳೆಯಿತು. ಶಾಲೆಯಿಂದ ಸ್ನಾತಕೋತ್ತರ ಹಂತದವರೆಗಿನ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಕಲ್ಪಿಸುವ ಉದ್ದೇಶವನ್ನು ಸರ್ಕಾರ ಪ್ರಕಟಿಸಿತು. ಅದೇ ಸಂದರ್ಭದಲ್ಲಿ ಖಾಸಗಿ ವಲಯದಲ್ಲಿ ಉದ್ಯೋಗ ಹುಡುಕುತ್ತಿರುವ ಯುವಕರಿಗಾಗಿ ಉದ್ಯೋಗ ವಿನಿಮಯ ವ್ಯವಸ್ಥೆ ಹಾಗೂ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡುವ ಯೋಜನೆ ಘೋಷಿಸಲಾಯಿತು.

ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ 10 ಸಾವಿರ ‘ಭಾರತ್ ಜೋಡೋ ಯುವ ಸಂಘ’ಗಳನ್ನು ರಚಿಸಿ, ಪ್ರತಿ ಸಂಘಕ್ಕೆ ₹10 ಲಕ್ಷದವರೆಗೆ ನೆರವು ನೀಡುವ ಪ್ರಸ್ತಾಪವೂ ಸರ್ಕಾರದ ಯುವಕೇಂದ್ರಿತ ಅಜೆಂಡಾದ ಭಾಗವಾಗಿದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ನಾಯಕತ್ವ ಮತ್ತು ಸಾಮಾಜಿಕ ಸಾಮರಸ್ಯವನ್ನು ಬೆಳೆಸುವುದು ಇದರ ಉದ್ದೇಶ ಎಂದು ಸರ್ಕಾರ ತಿಳಿಸಿದೆ.

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಈ ಯುವಕೇಂದ್ರಿತ ನೀತಿಗೆ ಮತ್ತಷ್ಟು ವಿಸ್ತರಣೆ ನೀಡಿದ ಶಿವಕುಮಾರ್, ಮುಂದಿನ ಎರಡು ವರ್ಷಗಳಲ್ಲಿ ಒಂದು ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಗುರಿಯನ್ನು ಪ್ರಕಟಿಸಿದರು. ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲು ‘ಉದ್ಯೋಗ ನಿಧಿ’ ಮತ್ತು ಯುವಕರನ್ನು ಖಾಸಗಿ ಉದ್ಯೋಗಗಳಿಗೆ ಸಂಪರ್ಕಿಸುವ ಡಿಜಿಟಲ್ ವೇದಿಕೆಯನ್ನೂ ಘೋಷಿಸಿದರು. ಪ್ರತಿ ಹೊಸ ಉದ್ಯೋಗಕ್ಕೆ ತಿಂಗಳಿಗೆ ₹2,500ರ ಪ್ರೋತ್ಸಾಹಧನ ನೀಡುವ ಉದ್ದೇಶವನ್ನೂ ಪ್ರಕಟಿಸಲಾಗಿದೆ.

72 ಸಾವಿರ ಸರ್ಕಾರಿ ಹುದ್ದೆಗಳತ್ತ ಸರ್ಕಾರದ ಚಿತ್ತ

72 ಸಾವಿರ ಸರ್ಕಾರಿ ಹುದ್ದೆಗಳತ್ತ ಸರ್ಕಾರದ ಚಿತ್ತ

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಮತ್ತೊಂದು ಪ್ರಮುಖ ಭರವಸೆಯಾಗಿ 72 ಸಾವಿರ ಖಾಲಿ ಹುದ್ದೆಗಳ ಭರ್ತಿಯನ್ನು ಸರ್ಕಾರ ಮುಂದಿಟ್ಟಿದೆ. ಮುಖ್ಯಮಂತ್ರಿಯವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಪ್ರಮುಖ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ ಆರು ತಿಂಗಳಲ್ಲಿ ನೇಮಕಾತಿ ಅಧಿಸೂಚನೆ ಹೊರಬರುವ ಗುರಿ ಹೊಂದಲಾಗಿದೆ ಎಂದು ತಿಳಿಸಲಾಯಿತು.

ಇದರ ಜೊತೆಗೆ ಕೆಪಿಎಸ್‌ಸಿ ಮತ್ತು ಕೆಇಎ ನೇಮಕಾತಿ ಪ್ರಕ್ರಿಯೆಗಳ ಮೇಲ್ವಿಚಾರಣೆ, ನೇಮಕಾತಿ ಸಿದ್ಧತೆಗಳ ಪರಿಶೀಲನೆ ಹಾಗೂ ಅಕ್ರಮಗಳ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವ ವಿಚಾರಗಳೂ ಸರ್ಕಾರದ ಕಾರ್ಯಸೂಚಿಯಲ್ಲಿ ಕಾಣಿಸಿಕೊಂಡಿವೆ. ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಆರೋಪಗಳ ಹಿನ್ನೆಲೆಯಲ್ಲಿ ತನಿಖೆಯಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ ಎಂದು ಶಿವಕುಮಾರ್ ಇತ್ತೀಚೆಗೆ ಸ್ಪಷ್ಟಪಡಿಸಿದ್ದಾರೆ.

ಶಾಲಾ ಶಿಕ್ಷಣ ಕ್ಷೇತ್ರದಲ್ಲೂ 15 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿರುವುದು ಸರ್ಕಾರದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ.

ಎಐ ಶಿಕ್ಷಣದಿಂದ ₹3 ಟ್ರಿಲಿಯನ್ ಆರ್ಥಿಕತೆಯವರೆಗೆ

ಎಐ ಶಿಕ್ಷಣದಿಂದ ₹3 ಟ್ರಿಲಿಯನ್ ಆರ್ಥಿಕತೆಯವರೆಗೆ

ಶಿವಕುಮಾರ್ ಅವರ ಆಡಳಿತದ ಮತ್ತೊಂದು ಪ್ರಮುಖ ಆಯಾಮವೆಂದರೆ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಆಧಾರಿತ ಕರ್ನಾಟಕದ ನಿರ್ಮಾಣ.

2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು 3 ಟ್ರಿಲಿಯನ್ ಡಾಲರ್‌ಗೆ ಕೊಂಡೊಯ್ಯುವ ಗುರಿಯನ್ನು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಇದಕ್ಕಾಗಿ ಆರನೇ ತರಗತಿಯಿಂದಲೇ ಶಾಲೆಗಳಲ್ಲಿ ಎಐ ಶಿಕ್ಷಣ ಪರಿಚಯಿಸುವುದು, ‘ಎಐ ಅಕ್ಷರ ಅಭಿಯಾನ’, ‘ಕೋಡಿಂಗ್ ಗುರುಕುಲ’ ಆರಂಭಿಸುವುದು ಹಾಗೂ ರಾಜ್ಯದ ವಿವಿಧೆಡೆ ಎಐ ಹಬ್‌ಗಳನ್ನು ಸ್ಥಾಪಿಸುವ ಯೋಜನೆಗಳನ್ನು ಮುಂದಿಟ್ಟಿದ್ದಾರೆ. ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರದ ಸ್ವಾಮ್ಯದ ಎಐ ವಿಶ್ವವಿದ್ಯಾಲಯ ಸ್ಥಾಪಿಸುವ ಘೋಷಣೆಯೂ ಇದೇ ದೃಷ್ಟಿಕೋನದ ಭಾಗವಾಗಿದೆ.

ಇತ್ತೀಚಿನ ಬೆಳವಣಿಗೆಯಲ್ಲಿ ಅಮೆರಿಕದೊಂದಿಗೆ ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್, ಏರೋಸ್ಪೇಸ್, ಅಡ್ವಾನ್ಸ್‌ಡ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಪ್ರಯತ್ನಕ್ಕೂ ಶಿವಕುಮಾರ್ ಒತ್ತು ನೀಡಿದ್ದಾರೆ. ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ಅವರೊಂದಿಗೆ ನಡೆದ ಕಾರ್ಯಕ್ರಮದಲ್ಲೂ ಬೆಂಗಳೂರು–ಸಿಲಿಕಾನ್ ವ್ಯಾಲಿ ತಂತ್ರಜ್ಞಾನ ಸಂಪರ್ಕವನ್ನು ಬಲಪಡಿಸುವ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ವಿದ್ಯಾರ್ಥಿಗಳಿಗೆ ಹೊಸ ಅವಕಾಶ

ಗ್ರಾಮೀಣ ವಿದ್ಯಾರ್ಥಿಗಳಿಗೆ ಹೊಸ ಅವಕಾಶ

ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಹೆಚ್ಚಿಸುವ ಉದ್ದೇಶದಿಂದ ‘ವಿದ್ಯಾರ್ಥಿ ಸಹಾಯ ಹಸ್ತ’ ಯೋಜನೆಯನ್ನು ಘೋಷಿಸಲಾಗಿದೆ. ವೃತ್ತಿಪರ ಶಿಕ್ಷಣದಲ್ಲಿ ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 7.5% ಮೀಸಲಾತಿ ನೀಡುವ ಪ್ರಸ್ತಾಪ ಇದರಲ್ಲಿ ಪ್ರಮುಖವಾಗಿದೆ.

ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ರಾಜ್ಯದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಯೋಜನೆಗಳ ಜೊತೆಗೆ ದೆಹಲಿಯಲ್ಲಿ ಕರ್ನಾಟಕ ಭವನ ನಿರ್ಮಾಣದ ಉದ್ದೇಶವೂ ಸರ್ಕಾರದ ವಿದ್ಯಾರ್ಥಿ ಸ್ನೇಹಿ ಕ್ರಮಗಳ ಪಟ್ಟಿಯಲ್ಲಿದೆ.

ಶಿಕ್ಷಕರಿಗೆ ಗೌರವ ಸೂಚಿಸುವ ಉದ್ದೇಶದಿಂದ ಹೆಸರಿನ ಮುಂದೆ ‘Tr.’ ಎಂಬ ಗೌರವಪದ ಬಳಕೆಗೆ ಅವಕಾಶ ನೀಡಿರುವ ನಿರ್ಧಾರವೂ ಇತ್ತೀಚಿನ ಗಮನಾರ್ಹ ಘೋಷಣೆಯಾಗಿದೆ. ರಾಜ್ಯದಲ್ಲಿ ಸುಮಾರು 4.5 ಲಕ್ಷ ಶಿಕ್ಷಕರಿಗೆ ಇದು ವೃತ್ತಿಪರ ಗೌರವದ ಸಂಕೇತವಾಗಿ ಪರಿಚಯಿಸಲಾಗಿದೆ.

ರೈತರತ್ತ ‘ರೈತ ಚೈತನ್ಯ’ದ ಹೆಜ್ಜೆ

ರೈತರತ್ತ ‘ರೈತ ಚೈತನ್ಯ’ದ ಹೆಜ್ಜೆ

ರೈತರ ವಿಚಾರದಲ್ಲಿ ಬೆಳೆ ಸಮೀಕ್ಷೆಗೆ ಡ್ರೋನ್ ಮತ್ತು ಉಪಗ್ರಹ ತಂತ್ರಜ್ಞಾನ ಬಳಕೆ, ನೈಜ ಸಮಯದ ಬೆಳೆ ಮಾಹಿತಿ, ಕೀಟ–ರೋಗದ ಮುನ್ಸೂಚನೆ ಸೇರಿದಂತೆ ‘ಮುಖ್ಯಮಂತ್ರಿ ರೈತ ಚೈತನ್ಯ’ ಯೋಜನೆಯನ್ನು ಸರ್ಕಾರ ಮುಂದಿಟ್ಟಿದೆ.

ಮೂರು ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಶುಲ್ಕದಲ್ಲಿ ಶೇ.50ರ ಸಹಾಯಧನ ನೀಡುವ ‘ರೈತ ಮಿತ್ರ’ ಕಾರ್ಯಕ್ರಮವನ್ನೂ ಘೋಷಿಸಲಾಗಿದೆ. ಬೆಳೆ ವಿಮೆ ಬಾಕಿ ಬಿಡುಗಡೆ, ಬಿತ್ತನೆ ಬೀಜ–ಗೊಬ್ಬರವನ್ನು ಸಕಾಲದಲ್ಲಿ ಪೂರೈಸುವುದು ಮತ್ತು ಕೃಷಿ ಅಧಿಕಾರಿಗಳ ನೇಮಕಾತಿ ಗೊಂದಲ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಆದರೆ ಇದೀಗ ಕರ್ನಾಟಕದ ಆಡಳಿತದ ಮುಂದೆ ಅತ್ಯಂತ ದೊಡ್ಡ ಸವಾಲಾಗಿ ಬರ ಪರಿಸ್ಥಿತಿ ಕಾಣಿಸಿಕೊಂಡಿದೆ. ಸೆಪ್ಟೆಂಬರ್ ಆರಂಭದ ವೇಳೆಗೆ ರಾಜ್ಯದ 30 ಜಿಲ್ಲೆಗಳಲ್ಲಿ ಮಳೆಯ ಕೊರತೆ ದಾಖಲಾಗಿದ್ದು, ಸರ್ಕಾರ 101–102 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇನ್ನಷ್ಟು ತಾಲ್ಲೂಕುಗಳನ್ನು ತಾಂತ್ರಿಕ ಹಾಗೂ ವೈಜ್ಞಾನಿಕ ವರದಿಗಳ ಆಧಾರದ ಮೇಲೆ ಹಂತ ಹಂತವಾಗಿ ಬರಪೀಡಿತ ಪಟ್ಟಿಗೆ ಸೇರಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.

ಇತ್ತೀಚೆಗೆ ಬಾಗಲಕೋಟೆ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಬರ ಪರಿಸ್ಥಿತಿಯನ್ನು ವೈಮಾನಿಕವಾಗಿ ಪರಿಶೀಲಿಸಿದ ಶಿವಕುಮಾರ್, ರೈತರೊಂದಿಗೆ ನೇರ ಸಂವಾದ ನಡೆಸಿ ಬೆಳೆ ನಷ್ಟದ ಮಾಹಿತಿ ಪಡೆದಿದ್ದಾರೆ. ಬೆಳೆ ವಿಮೆಯಲ್ಲಿ ಅಕ್ರಮ ನಡೆದಿರುವ ಆರೋಪಗಳ ಬಗ್ಗೆಯೂ ತನಿಖೆಗೆ ಸೂಚಿಸಲಾಗಿದೆ.

ನೀರಾವರಿ ಯೋಜನೆಗಳ ಮೇಲೆ ಒತ್ತು

ನೀರಾವರಿ ಯೋಜನೆಗಳ ಮೇಲೆ ಒತ್ತು

ಮೇಕೆದಾಟು ಯೋಜನೆ, ತುಂಗಭದ್ರಾ ಸೇರಿದಂತೆ ಪ್ರಮುಖ ಜಲಸಂಪನ್ಮೂಲ ಯೋಜನೆಗಳನ್ನು ಮುಂದಕ್ಕೆ ಕೊಂಡೊಯ್ಯುವ ಪ್ರಯತ್ನವನ್ನು ಸರ್ಕಾರ ಮುಂದುವರಿಸಿದೆ. 112 ಪ್ರಮುಖ ಜಲಸಂಪನ್ಮೂಲ ಯೋಜನೆಗಳಿಗೆ ₹16 ಸಾವಿರ ಕೋಟಿ ಅನುಮೋದನೆ ನೀಡುವ ಗುರಿಯನ್ನೂ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮೇಲ್ಭದ್ರಾ ಯೋಜನೆಯಡಿ ಚಿಕ್ಕಮಗಳೂರು–ಚಿತ್ರದುರ್ಗ ಭಾಗಕ್ಕೆ ನೀರು ಹರಿಸುವ ಪ್ರಾಯೋಗಿಕ ಹಂತದ ಕಾರ್ಯವೂ ಇತ್ತೀಚೆಗೆ ನಡೆದಿದೆ. ಯೋಜನೆಯಿಂದ ಬರಪೀಡಿತ ಪ್ರದೇಶಗಳ ನೀರಾವರಿ ಹಾಗೂ ಕೆರೆ ತುಂಬಿಸುವ ಕಾರ್ಯಕ್ಕೆ ನೆರವಾಗುವ ನಿರೀಕ್ಷೆ ವ್ಯಕ್ತವಾಗಿದೆ.

ತುಂಗಭದ್ರಾ ಜಲಾಶಯದ ಸುರಕ್ಷತೆ, ಹೊಸ ಸ್ಪಿಲ್‌ವೇ ಗೇಟ್‌ಗಳು, ಹೂಳು ತೆಗೆಯುವ ಯೋಜನೆ ಹಾಗೂ ಕರ್ನಾಟಕ–ಆಂಧ್ರಪ್ರದೇಶ–ತೆಲಂಗಾಣ ನಡುವೆ ಸಮನ್ವಯ ಸಾಧಿಸುವ ಪ್ರಯತ್ನಗಳೂ ಸರ್ಕಾರದ ನೀರಾವರಿ ಅಜೆಂಡಾದಲ್ಲಿವೆ.

ಬೆಂಗಳೂರು–ಮೂಲಸೌಕರ್ಯ ಸುಧಾರಣೆ

ಬೆಂಗಳೂರಿಗೆ ಭಾರೀ ಮೂಲಸೌಕರ್ಯ ಪ್ಯಾಕೇಜ್

ರಾಜ್ಯದ ರಾಜಧಾನಿ ಬೆಂಗಳೂರಿನ ಮೂಲಸೌಕರ್ಯ ಸುಧಾರಣೆಗೆ ಶಿವಕುಮಾರ್ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಮೊದಲ ಸಚಿವ ಸಂಪುಟದಲ್ಲೇ ₹2 ಸಾವಿರ ಕೋಟಿ ರಸ್ತೆ ಅಭಿವೃದ್ಧಿ ಯೋಜನೆ ಘೋಷಿಸಲಾಯಿತು. ನಂತರದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಬೆಂಗಳೂರಿನ ಮೂಲಸೌಕರ್ಯಕ್ಕೆ ಸುಮಾರು ₹1.5 ಲಕ್ಷ ಕೋಟಿ ಮೌಲ್ಯದ ಯೋಜನೆಗಳ ದೃಷ್ಟಿಕೋನವನ್ನು ಮುಖ್ಯಮಂತ್ರಿ ವಿವರಿಸಿದರು.

117 ಕಿ.ಮೀ. ಬೆಂಗಳೂರು ಬಿಸಿನೆಸ್ ಕಾರಿಡಾರ್, ನಗರ–ಪಟ್ಟಣಗಳಲ್ಲಿ ರಿಂಗ್ ರಸ್ತೆ ಮತ್ತು ಮೊಬಿಲಿಟಿ ಗ್ರಿಡ್, ಹೊಸ ಕಮಿಷನರೇಟ್‌ಗಳು, ಸುರಂಗ ರಸ್ತೆ, ಕೆರೆಗಳ ಅಭಿವೃದ್ಧಿ ಮತ್ತು ದೊಡ್ಡ ಪ್ರಮಾಣದ ವೃಕ್ಷೋದ್ಯಾನಗಳ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳು ಘೋಷಣೆಯ ಹಂತದಿಂದ ಅನುಷ್ಠಾನದ ಹಂತಕ್ಕೆ ಸಾಗಬೇಕಿದೆ.

ಆದರೆ ಬೆಂಗಳೂರಿನ ಮೂಲಸೌಕರ್ಯ ನೀತಿಗೆ ವಿರೋಧದ ಧ್ವನಿಯೂ ಕೇಳಿಬರುತ್ತಿದೆ. 11 ಎಲಿವೇಟೆಡ್ ಕಾರಿಡಾರ್‌ಗಳಿಗೆ ₹13 ಸಾವಿರ ಕೋಟಿಗೂ ಅಧಿಕ ವೆಚ್ಚದ ಯೋಜನೆಗೆ ನಾಗರಿಕರಿಂದ ಆಕ್ಷೇಪ ವ್ಯಕ್ತವಾಗಿದ್ದು, ಯೋಜನೆಯ ಆದ್ಯತೆ ಹಾಗೂ ಸಂಚಾರ ಪರಿಹಾರದ ಪರಿಣಾಮಕಾರಿತ್ವದ ಬಗ್ಗೆ ಚರ್ಚೆ ನಡೆಯುತ್ತಿದೆ.

‘ಬಿಯಾಂಡ್ ಬೆಂಗಳೂರು’ ಮೂಲಕ ಕೈಗಾರಿಕಾ ವಿಸ್ತರಣೆ

‘ಬಿಯಾಂಡ್ ಬೆಂಗಳೂರು’ ಮೂಲಕ ಕೈಗಾರಿಕಾ ವಿಸ್ತರಣೆ

ಬೆಂಗಳೂರು ಹೊರತಾಗಿ ರಾಜ್ಯದ ಇತರ ನಗರಗಳನ್ನು ಕೈಗಾರಿಕಾ ಹಾಗೂ ತಂತ್ರಜ್ಞಾನ ಕೇಂದ್ರಗಳಾಗಿ ಬೆಳೆಸುವ ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಗೆ ಸರ್ಕಾರ ಒತ್ತು ನೀಡಿದೆ.

ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ಮಂಗಳೂರು ಮತ್ತು ಮೈಸೂರು ನಗರಗಳಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ, ದ್ವಿತೀಯ ಮತ್ತು ತೃತೀಯ ಹಂತದ ನಗರಗಳಲ್ಲಿ ಹೆಚ್ಚುವರಿ ಎಫ್‌ಎಆರ್‌ ಮೂಲಕ ನಗರಾಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶವನ್ನು ಪ್ರಕಟಿಸಲಾಗಿದೆ. ದೊಡ್ಡಬಳ್ಳಾಪುರದಲ್ಲಿ ಅಡ್ವಾನ್ಸ್‌ಡ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ಮೂಲಕ ₹20 ಸಾವಿರ ಕೋಟಿ ಹೂಡಿಕೆ ಮತ್ತು ಸುಮಾರು ಒಂದು ಲಕ್ಷ ಉದ್ಯೋಗ ಸೃಷ್ಟಿಯ ಗುರಿಯನ್ನೂ ಘೋಷಿಸಲಾಗಿದೆ.

ಇದರ ಮುಂದುವರಿದ ಭಾಗವಾಗಿ ಸೆಪ್ಟೆಂಬರ್ 2ರಂದು ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ₹29,679.20 ಕೋಟಿ ಮೊತ್ತದ 17 ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದ್ದು, ಸುಮಾರು 66,360 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಆಸ್ತಿ–ಭೂ ದಾಖಲೆಗಳ ಗೊಂದಲಕ್ಕೆ ಪರಿಹಾರದ ಪ್ರಯತ್ನ

ಆಸ್ತಿ–ಭೂ ದಾಖಲೆಗಳ ಗೊಂದಲಕ್ಕೆ ಪರಿಹಾರದ ಪ್ರಯತ್ನ

ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ, ಇ-ಖಾತಾ ಮೂಲಕ ಆಸ್ತಿ ದಾಖಲೆಗಳ ಡಿಜಿಟಲೀಕರಣ ಹಾಗೂ ‘ಭೂ ಗ್ಯಾರಂಟಿ’ ಮೂಲಕ ಆಸ್ತಿ ಮಾಲೀಕತ್ವದ ಗೊಂದಲ ನಿವಾರಿಸುವ ಪ್ರಸ್ತಾಪಗಳು ಸರ್ಕಾರದ ಮತ್ತೊಂದು ಪ್ರಮುಖ ಅಜೆಂಡಾ.

ಆದರೆ ಕಾನೂನುಬದ್ಧ ದಾಖಲೆಗಳಿರುವ ಆಸ್ತಿಗಳಿಗೆ ಮಾತ್ರ ಇಂತಹ ಸೌಲಭ್ಯ ಅನ್ವಯವಾಗಲಿದೆ ಎಂದು ಮುಖ್ಯಮಂತ್ರಿ ಇತ್ತೀಚೆಗೆ ಸ್ಪಷ್ಟಪಡಿಸಿದ್ದಾರೆ. ಸರ್ಕಾರಿ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡವರ ಹಕ್ಕು ಮತ್ತು ಪರಿಹಾರವನ್ನು ದಾಖಲಿಸುವ ಅಗತ್ಯವನ್ನೂ ಅವರು ಒತ್ತಿಹೇಳಿದ್ದಾರೆ.

2500 ಚದರ ಅಡಿವರೆಗಿನ ಹೊಸ ವಸತಿ ಕಟ್ಟಡಗಳಿಗೆ ಒಸಿ ವಿನಾಯಿತಿ, ನಿವೇಶನ ಪಡೆದವರು ಐದು ವರ್ಷಗಳಲ್ಲಿ ಮನೆ ನಿರ್ಮಿಸದಿದ್ದರೆ ನಿವೇಶನ ಹಿಂಪಡೆಯುವುದು ಹಾಗೂ ನಿವೇಶನದ ಬದಲು ಬಡವರಿಗೆ ಮನೆ ನಿರ್ಮಿಸಿ ಕೊಡುವಂತಹ ಕ್ರಮಗಳೂ ಸರ್ಕಾರದ ವಸತಿ ನೀತಿಯ ಭಾಗವಾಗಿ ಮುಂದಿಡಲಾಗಿದೆ.

‘ಪ್ರಜಾಸೇವೆ’ಯಿಂದ ಆಡಳಿತವನ್ನು ಜನರ ಬಳಿಗೆ

‘ಪ್ರಜಾಸೇವೆ’ಯಿಂದ ಆಡಳಿತವನ್ನು ಜನರ ಬಳಿಗೆ

ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಲು ‘ಪ್ರಜಾಸೇವೆ’ ಎಂಬ ಪ್ರತ್ಯೇಕ ವ್ಯವಸ್ಥೆ/ಇಲಾಖೆ ರೂಪಿಸುವ ಘೋಷಣೆ ಮಾಡಲಾಗಿದೆ. ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ನಿಯಮಿತವಾಗಿ ಅಹವಾಲು ಸಭೆ ನಡೆಸಬೇಕು, ಶಾಸಕರು ಪಂಚಾಯಿತಿ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಆಲಿಸಬೇಕು ಎಂಬ ಉದ್ದೇಶವನ್ನೂ ಸರ್ಕಾರ ಪ್ರಕಟಿಸಿದೆ.

ಸರ್ಕಾರಿ ಕಚೇರಿಗಳಲ್ಲಿ ಸಮಯಪಾಲನೆ, ಜಿಪಿಎಸ್ ಆಧಾರಿತ ಸಿಬ್ಬಂದಿ ಹಾಜರಾತಿ, ಭ್ರಷ್ಟಾಚಾರದ ವಿರುದ್ಧ ದೂರು ವ್ಯವಸ್ಥೆ, ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಗೂ ತೆರಿಗೆ ವಂಚನೆ ತಡೆ ಸೇರಿದಂತೆ ಆಡಳಿತ ಸುಧಾರಣೆಗೆ ಹಲವು ನಿರ್ದೇಶನಗಳನ್ನು ನೀಡಲಾಗಿದೆ.

‘ಶಾಸಕರು–ಮಂತ್ರಿಗಳ ಒತ್ತಡಕ್ಕೆ ಮಣಿಯದೆ ಕಾನೂನು ಚೌಕಟ್ಟಿನೊಳಗೆ ಅಧಿಕಾರಿಗಳು ಕೆಲಸ ಮಾಡಬೇಕು’ ಎಂಬ ಸಂದೇಶವನ್ನು ನೀಡಿರುವುದು ಆಡಳಿತ ವ್ಯವಸ್ಥೆಗೆ ಮುಖ್ಯಮಂತ್ರಿ ನೀಡಿರುವ ಮತ್ತೊಂದು ಪ್ರಮುಖ ಸೂಚನೆಯಾಗಿದೆ.

ಕಾನೂನು ಸುವ್ಯಸ್ಥೆ: ರೌಡಿ ನಿಗ್ರಹದಿಂದ ಡ್ರಗ್ಸ್ ವಿರುದ್ಧ ಸಮರ

ಕಾನೂನು ಸುವ್ಯವಸ್ಥೆ: ರೌಡಿ ನಿಗ್ರಹದಿಂದ ಡ್ರಗ್ಸ್ ವಿರುದ್ಧ ಸಮರ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸಲು ಐದು ಹೊಸ ಪೊಲೀಸ್ ಕಮಿಷನರೇಟ್‌ಗಳ ಸ್ಥಾಪನೆ, ರೌಡಿ ನಿಗ್ರಹ ಪಡೆ, ಡ್ರಗ್ಸ್ ಜಾಲದ ವಿರುದ್ಧ ಕಠಿಣ ಕ್ರಮ ಮತ್ತು ಮಾಹಿತಿ ನೀಡುವವರಿಗೆ ಬಹುಮಾನ ನೀಡುವ ಕ್ರಮಗಳನ್ನು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.

2028ರ ವೇಳೆಗೆ ‘ನಶೆ ಮುಕ್ತ ಕರ್ನಾಟಕ’ ನಿರ್ಮಿಸುವ ಗುರಿಯನ್ನೂ ಘೋಷಿಸಲಾಗಿದೆ. ಅಮಲು ಬೆರೆಸುವ ಪಾನ್‌ಮಸಾಲಾ ಮತ್ತು ಗುಟ್ಕಾ ವಿರುದ್ಧ ಕ್ರಮದ ಎಚ್ಚರಿಕೆಯ ಜೊತೆಗೆ ಮಾದಕರಾಜ್ಯದ ನೀರಾವರಿ, ಮೆಟ್ರೋ, RRTS, ಪೊಲೀಸ್ ಯೋಜನೆಗಳು ಹಾಗೂ ವಿಶೇಷ ಅನುದಾನಗಳ ವಸ್ತುಗಳ ಜಾಲವನ್ನು ನಿಗ್ರಹಿಸುವುದಕ್ಕೆ ಸರ್ಕಾರ ಒತ್ತು ನೀಡಿದೆ.

ಕೇಂದ್ರದೊಂದಿಗೆ ಹಕ್ಕಿನ ಪಾಲಿಗಾಗಿ ರಾಜಕೀಯ ಹೋರಾಟ

ಕೇಂದ್ರದೊಂದಿಗೆ ಹಕ್ಕಿನ ಪಾಲಿಗಾಗಿ ರಾಜಕೀಯ ಹೋರಾಟ

ರಾಜ್ಯದ ನೀರಾವರಿ, ಮೆಟ್ರೋ, RRTS, ಪೊಲೀಸ್ ಯೋಜನೆಗಳು ಹಾಗೂ ವಿಶೇಷ ಅನುದಾನಗಳಿಗಾಗಿ ಮುಖ್ಯಮಂತ್ರಿ ಕೇಂದ್ರದ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದನ್ನು ತಮ್ಮ ಆಡಳಿತದ ಪ್ರಮುಖ ಭಾಗವನ್ನಾಗಿ ಮಾಡಿದ್ದಾರೆ.

ನೀತಿ ಆಯೋಗದ ಸಭೆಗಳಲ್ಲಿ ರಾಜ್ಯದ ಅನುದಾನ ಪಾಲು, ಸಂಪನ್ಮೂಲ ಹಂಚಿಕೆ ಹಾಗೂ ದಕ್ಷಿಣ ರಾಜ್ಯಗಳ ಹಕ್ಕುಗಳ ವಿಚಾರವನ್ನು ಮುಂದಿಟ್ಟಿದ್ದಾರೆ. 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲೂ ಜನಸಂಖ್ಯೆ ಆಧಾರಿತ ಕ್ಷೇತ್ರ ಮರುವಿಂಗಡಣೆ, ಮಹಿಳಾ ಮೀಸಲಾತಿ ಜಾರಿಯ ವೇಳೆ ಲೋಕಸಭಾ ಸ್ಥಾನಗಳ ಸಮತೋಲನ, ನ್ಯಾಯಯುತ ಅನುದಾನ ಹಾಗೂ ಸಂಪನ್ಮೂಲ ಹಂಚಿಕೆಯ ಕುರಿತು ಕರ್ನಾಟಕದ ನಿಲುವನ್ನು ಮಂಡಿಸಲಾಗಿದೆ.

ಕಾವೇರಿ, ಕೃಷ್ಣಾ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್ ನದಿಗಳ ವಿಚಾರದಲ್ಲಿ ದಕ್ಷಿಣ ರಾಜ್ಯಗಳ ನಡುವೆ ಸಹಕಾರ ಅಗತ್ಯ ಎಂಬ ಸಂದೇಶವನ್ನೂ ಸರ್ಕಾರ ನೀಡಿದೆ.

ರೈತರ ಸಂಕಷ್ಟ ಈಗ ಸರ್ಕಾರದ ಮುಂದಿನ ದೊಡ್ಡ ಪರೀಕ್ಷೆ

ರೈತರ ಸಂಕಷ್ಟ ಈಗ ಸರ್ಕಾರದ ಮುಂದಿನ ದೊಡ್ಡ ಪರೀಕ್ಷೆ

ಆಡಳಿತದ ಆರಂಭದಲ್ಲಿ ಅಭಿವೃದ್ಧಿ ಮತ್ತು ಉದ್ಯೋಗದ ದೊಡ್ಡ ಗುರಿಗಳನ್ನು ಮುಂದಿಟ್ಟಿದ್ದ ಶಿವಕುಮಾರ್ ಸರ್ಕಾರಕ್ಕೆ ಇದೀಗ ಬರ ಪರಿಸ್ಥಿತಿ ಪ್ರಮುಖ ಪರೀಕ್ಷೆಯಾಗಿದೆ.

ಸೆಪ್ಟೆಂಬರ್ 2026ರ ಆರಂಭದ ವೇಳೆಗೆ ಬಹುತೇಕ ರಾಜ್ಯದಲ್ಲಿ ಮಳೆಯ ಕೊರತೆ ಕಾಣಿಸಿಕೊಂಡಿದ್ದು, ಇನ್ನಷ್ಟು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಪ್ರಕ್ರಿಯೆ ಮುಂದುವರಿದಿದೆ. ರೈತರ ಸಮಸ್ಯೆಗಳ ಕುರಿತು ಸೆಪ್ಟೆಂಬರ್‌ನಲ್ಲಿ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸುವ ಉದ್ದೇಶವನ್ನೂ ಮುಖ್ಯಮಂತ್ರಿ ತಿಳಿಸಿದ್ದಾರೆ.

ಕೇಂದ್ರದ ಬರ ಪರಿಹಾರಕ್ಕಾಗಿ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯುವುದಾಗಿ ಹಾಗೂ ರೈತರ ಸಾಲಮನ್ನಾ ಸೇರಿದಂತೆ ರಾಜ್ಯದ ಬೇಡಿಕೆಗಳನ್ನು ಕೇಂದ್ರದ ಮುಂದೆ ಮಂಡಿಸುವುದಾಗಿ ಅವರು ಹೇಳಿದ್ದಾರೆ.

ess

ರಾಜಕೀಯಕ್ಕಿಂತ ‘ಟೀಮ್ ಕರ್ನಾಟಕ’ಕ್ಕೆ ಕರೆ

ರಾಜಕೀಯಕ್ಕಿಂತ ‘ಟೀಮ್ ಕರ್ನಾಟಕ’ಕ್ಕೆ ಕರೆ

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿಧಾನಸಭೆಯ ಮೊದಲ ಅಧಿವೇಶನದಲ್ಲೇ ಶಿವಕುಮಾರ್ ಅವರು ಆಡಳಿತದಲ್ಲಿ ವಿರೋಧ ಪಕ್ಷಗಳ ಸಹಕಾರ ಕೋರಿದ್ದರು. “ಸದನದ ಹೊರಗೆ ರಾಜಕೀಯ ಮಾಡೋಣ; ಸದನದ ಒಳಗೆ ಜನರಿಗಾಗಿ ಒಟ್ಟಾಗಿ ಕೆಲಸ ಮಾಡೋಣ” ಎಂಬ ಸಂದೇಶದ ಮೂಲಕ 224 ಶಾಸಕರನ್ನೂ ಸಮಾನವಾಗಿ ನೋಡುವುದಾಗಿ ಅವರು ಹೇಳಿದ್ದರು.

ಇದು ಕೇವಲ ರಾಜಕೀಯ ಹೇಳಿಕೆಯಾಗಿಯೇ ಉಳಿಯುತ್ತದೆಯೇ ಅಥವಾ ಆಡಳಿತಾತ್ಮಕ ಸಹಕಾರವಾಗಿ ರೂಪುಗೊಳ್ಳುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ.

ಘೋಷಣೆಗಳಿಗಿಂತ ಅನುಷ್ಠಾನವೇ ಮುಂದಿನ ಸವಾಲು

ಘೋಷಣೆಗಳಿಗಿಂತ ಅನುಷ್ಠಾನವೇ ಮುಂದಿನ ಸವಾಲು

ಒಟ್ಟಾರೆ, ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿತ್ವದ ಆರಂಭಿಕ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ, ಸರ್ಕಾರಿ ನೇಮಕಾತಿ, ಯುವಕರಿಗೆ ಉದ್ಯೋಗ, ಎಐ ಶಿಕ್ಷಣ, ರೈತರಿಗೆ ತಂತ್ರಜ್ಞಾನ ಆಧಾರಿತ ಸೇವೆ, ಬೆಂಗಳೂರಿನ ಬೃಹತ್ ಮೂಲಸೌಕರ್ಯ, ‘ಬಿಯಾಂಡ್ ಬೆಂಗಳೂರು’, ಆಸ್ತಿ ದಾಖಲೆ ಸುಧಾರಣೆ, ಜನಸ್ಪಂದನಾ ಆಡಳಿತ ಮತ್ತು ಕಾನೂನು ಸುವ್ಯವಸ್ಥೆ ಪ್ರಮುಖ ಆದ್ಯತೆಗಳಾಗಿ ಹೊರಹೊಮ್ಮಿವೆ.

ಆದರೆ ಈ ಅವಧಿಯನ್ನು ಕೇವಲ ಘೋಷಣೆಗಳ ಆಧಾರದ ಮೇಲೆ ಅಳೆಯಲು ಸಾಧ್ಯವಿಲ್ಲ. 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ, ಒಂದು ಲಕ್ಷ ಹೊಸ ಉದ್ಯೋಗಗಳ ಸೃಷ್ಟಿ, ಎಐ ವಿಶ್ವವಿದ್ಯಾಲಯ, ಬೆಂಗಳೂರು ಬಿಸಿನೆಸ್ ಕಾರಿಡಾರ್, ನೀರಾವರಿ ಯೋಜನೆಗಳು, ಬಿ–ಎ ಖಾತಾ ಪರಿವರ್ತನೆ ಮತ್ತು ಪ್ರಜಾಸೇವೆ ವ್ಯವಸ್ಥೆಯಂತಹ ಯೋಜನೆಗಳು ಎಷ್ಟು ವೇಗವಾಗಿ ನೆಲಮಟ್ಟಕ್ಕೆ ಇಳಿಯುತ್ತವೆ ಎಂಬುದೇ ಸರ್ಕಾರದ ಕಾರ್ಯಕ್ಷಮತೆಯ ನಿಜವಾದ ಮಾನದಂಡವಾಗಲಿದೆ.

ಇದರ ಜೊತೆಗೆ 2026ರ ಸೆಪ್ಟೆಂಬರ್‌ನಲ್ಲಿ ಎದುರಾಗಿರುವ ಬರ ಪರಿಸ್ಥಿತಿ, ರೈತರ ಬೆಳೆ ನಷ್ಟ ಮತ್ತು ಕೇಂದ್ರದಿಂದ ಪರಿಹಾರ ಪಡೆಯುವ ಸವಾಲು ತಕ್ಷಣದ ಆದ್ಯತೆಯಾಗಿದೆ. ಈಗಾಗಲೇ 101–102 ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರಿದ್ದು, ಮಳೆಯ ಕೊರತೆ ಮುಂದುವರಿದರೆ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಹೀಗಾಗಿ, ಶಿವಕುಮಾರ್ ಸರ್ಕಾರದ ಮೊದಲ ಹಂತದ ಆಡಳಿತವನ್ನು “ಯುವ ಕರ್ನಾಟಕ–ತಂತ್ರಜ್ಞಾನ ಕರ್ನಾಟಕ–ಕೈಗಾರಿಕಾ ಕರ್ನಾಟಕ”ದ ದೀರ್ಘಕಾಲದ ದೃಷ್ಟಿಕೋನ ಮತ್ತು “ರೈತ–ಜನಸಾಮಾನ್ಯರ ಸಂಕಷ್ಟ ಪರಿಹಾರ”ದ ತಕ್ಷಣದ ಸವಾಲುಗಳ ನಡುವಿನ ಸಮತೋಲನದ ಆಡಳಿತ ಎಂದು ವಿಶ್ಲೇಷಿಸಬಹುದಾಗಿದೆ.

ಮುಂದಿನ ಹಂತದಲ್ಲಿ ಈ ಘೋಷಣೆಗಳ ಅನುಷ್ಠಾನ, ಹಣಕಾಸಿನ ಲಭ್ಯತೆ, ಕೇಂದ್ರ–ರಾಜ್ಯ ಸಂಬಂಧ, ವಿರೋಧ ಪಕ್ಷಗಳ ಸಹಕಾರ ಮತ್ತು 2026ರ ಬರ ನಿರ್ವಹಣೆ—ಇವೇ ಡಿ.ಕೆ. ಶಿವಕುಮಾರ್ ಅವರ ಆಡಳಿತದ ಯಶಸ್ಸನ್ನು ಅಳೆಯುವ ಪ್ರಮುಖ ಅಂಶಗಳಾಗಲಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular