ಭಾರತ ತಂಡದ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಸದ್ಯ ಐಪಿಎಲ್ 2026ರ ಮೈದಾನದ ಪ್ರದರ್ಶನಕ್ಕಿಂತ ಹೆಚ್ಚಾಗಿ ತಮ್ಮ ಸಾಮಾಜಿಕ ಜಾಲತಾಣಗಳ ಚಟುವಟಿಕೆಯಿಂದಾಗಿ ಭಾರಿ ಸುದ್ದಿಯಲ್ಲಿದ್ದಾರೆ. ಸಹ ಆಟಗಾರ ತಿಲಕ್ ವರ್ಮಾ ವಿರುದ್ಧದ ವರ್ಣಭೇದದ ಕಾಮೆಂಟ್, ಪ್ರಿಯಾಂಶ್ ಆರ್ಯ ಅವರ ಕಾಲೆಳೆದಿದ್ದು ಹಾಗೂ ಆನ್‌ಲೈನ್‌ನಲ್ಲಿ ಅಭಿಮಾನಿಗಳ ಜೊತೆಗಿನ ವಾಗ್ವಾದ ಹೀಗೆ ಸಾಲು ಸಾಲು ವಿವಾದಗಳ ಕೇಂದ್ರಬಿಂದುವಾಗಿದ್ದ ಅರ್ಶ್‌ದೀಪ್, ಈಗ ಇದ್ದಕ್ಕಿದ್ದಂತೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಬಹುತೇಕ ಪೋಸ್ಟ್‌ಗಳನ್ನು ಡಿಲೀಟ್ ಅಥವಾ ಅರ್ಕೈವ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಅರ್ಶ್‌ದೀಪ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ 200ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ತೆಗೆದುಹಾಕಿದ್ದು, ಪ್ರಸ್ತುತ ಕೇವಲ 44 ಪೋಸ್ಟ್‌ಗಳು ಮಾತ್ರ ಕಾಣಿಸುತ್ತಿವೆ. ಜೊತೆಗೆ ತಮ್ಮ ಪ್ರೊಫೈಲ್ ಚಿತ್ರವನ್ನು (DP) ಸಹ ಬದಲಾಯಿಸಿದ್ದಾರೆ. ಸಾರ್ವಜನಿಕ ವ್ಯಕ್ತಿಗಳು ತಮ್ಮ ಸೋಶಿಯಲ್ ಮೀಡಿಯಾ ಕ್ಲೀನ್ ಮಾಡುವುದು ಸಾಮಾನ್ಯವಾದರೂ, ಇತ್ತೀಚಿನ ವಿವಾದಗಳ ಬೆನ್ನಲ್ಲೇ ಅರ್ಶ್‌ದೀಪ್ ಈ ಹೆಜ್ಜೆ ಇಟ್ಟಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ. ಈ ಬಗ್ಗೆ ಅವರ ಕಡೆಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.
https://www.instagram.com/p/DYw9MqeNJV1/?utm_source=ig_web_copy_link&igsh=NTc4MTIwNjQ2YQ==
ವಿರಾಟ್ ಕೊಹ್ಲಿ ಜೊತೆಗಿನ ವೈರಲ್ ವಿಡಿಯೋ ಡಿಲೀಟ್
ಅರ್ಶ್‌ದೀಪ್ ಇನ್‌ಸ್ಟಾಗ್ರಾಮ್‌ನಿಂದ ಡಿಲೀಟ್ ಆಗಿರುವ ಪೋಸ್ಟ್‌ಗಳಲ್ಲಿ ಕಳೆದ ವರ್ಷದ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಜೊತೆ ಜಂಟಿಯಾಗಿ ಮಾಡಿದ್ದ ವೈರಲ್ ರೀಲ್ ಕೂಡ ಸೇರಿದೆ. ಬರೋಬ್ಬರಿ 150 ಮಿಲಿಯನ್‌ಗಿಂತಲೂ (15 ಕೋಟಿ) ಹೆಚ್ಚು ವೀಕ್ಷಣೆ ಪಡೆದಿದ್ದ ಈ ವಿಡಿಯೋ ಈಗ ಅವರ ಖಾತೆಯಲ್ಲಿ ಲಭ್ಯವಿಲ್ಲ. ಪ್ರಸ್ತುತ ಅವರ ಹ್ಯಾಂಡಲ್‌ನಲ್ಲಿ ಕೇವಲ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ಗಳು ಮತ್ತು ಪ್ರಚಾರದ ವಿಡಿಯೋಗಳು ಮಾತ್ರ ಹೆಚ್ಚಾಗಿ ಕಾಣಿಸುತ್ತಿವೆ. ಸದ್ಯ ಪಂಜಾಬ್ ಕಿಂಗ್ಸ್ ಕುರಿತಾದ ಸಬರ್. ಶುಕರ್. ಪಂಜಾಬ್ (ತಾಳ್ಮೆ. ಕೃತಜ್ಞತೆ. ಪಂಜಾಬ್) ಎಂಬ ಕ್ಯಾಪ್ಶನ್ ಇರುವ ಪೋಸ್ಟ್ ಮಾತ್ರ ಹೈಲೈಟ್ ಆಗಿದೆ.
ಅರ್ಶ್‌ದೀಪ್ ಸುತ್ತುವರೆದಿರುವ ವಿವಾದಗಳೇನು?
ತಿಲಕ್ ವರ್ಮಾ ವಿವಾದ: ಮೇ ತಿಂಗಳ ಆರಂಭದಲ್ಲಿ ಅರ್ಶ್‌ದೀಪ್ ಹಂಚಿಕೊಂಡಿದ್ದ ವಿಡಿಯೋವೊಂದರಲ್ಲಿ, ಸಹ ಆಟಗಾರ ತಿಲಕ್ ವರ್ಮಾ ಅವರನ್ನು ತಮಾಷೆಯಾಗಿ ಓಯ್ ಅಂಧೇರೆ (ಕತ್ತಲೆಯೇ), ಸನ್‌ಸ್ಕ್ರೀನ್ ಹಚ್ಚಿದ್ದೀಯಾ? ಎಂದು ಕೇಳಿದ್ದರು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ಸಹ ಈ ವರ್ಣಭೇದದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, “ಅರ್ಶ್‌ದೀಪ್‌ಗೆ ಈ ಸೀಸನ್‌ನಲ್ಲಿ ನಿಷೇಧ ಹೇರಬೇಕು” ಎಂದು ಬಿಸಿಸಿಐಗೆ ಒತ್ತಾಯಿಸಿದ್ದಾರೆ.
ಚಹಾಲ್ ಇ-ಸಿಗರೇಟ್ ವಿವಾದ: ಅರ್ಶ್‌ದೀಪ್ ಅವರ ಮತ್ತೊಂದು ವ್ಲಾಗ್ ವಿಡಿಯೋದಲ್ಲಿ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಇ-ಸಿಗರೇಟ್ ಸೇದುತ್ತಿರುವ ದೃಶ್ಯ ವೈರಲ್ ಆಗಿದ್ದು ಸಹ ವಿವಾದಕ್ಕೆ ತುಪ್ಪ ಸುರಿದಿತ್ತು.
ಐಪಿಎಲ್ 2026: ಪಂಜಾಬ್ ಕಿಂಗ್ಸ್‌ಗೆ ನಿರಾಸೆ, ಅರ್ಶ್‌ದೀಪ್ ಸಾಧಾರಣ ಪ್ರದರ್ಶನ
ಕಳೆದ ಸೀಸನ್‌ನಲ್ಲಿ (IPL 2025) ರನ್ನರ್-ಅಪ್ ಆಗಿದ್ದ ಪಂಜಾಬ್ ಕಿಂಗ್ಸ್ ಈ ಬಾರಿ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ ಟೂರ್ನಿಯ ಮೊದಲಾರ್ಧದಲ್ಲಿ ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಭರ್ಜರಿ ಫಾರ್ಮ್‌ನಲ್ಲಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಸತತ 6 ಪಂದ್ಯಗಳನ್ನು ಸೋತು ಮುಖಭಂಗ ಅನುಭವಿಸಿತು. ಕೊನೆಯ ಪಂದ್ಯದಲ್ಲಿ ಲಕ್ನೋ ವಿರುದ್ಧ ಗೆದ್ದರೂ, ರಾಜಸ್ಥಾನ್ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು 16 ಪಾಯಿಂಟ್‌ಗಳೊಂದಿಗೆ ಪ್ಲೇಆಫ್ ತಲುಪಿತು. ಪಂಜಾಬ್ 15 ಪಾಯಿಂಟ್‌ಗಳೊಂದಿಗೆ 5ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ತಂಡದ ಪ್ರಮುಖ ಬೌಲರ್ ಅರ್ಶ್‌ದೀಪ್ ಸಿಂಗ್ 14 ಪಂದ್ಯಗಳಿಂದ 14 ವಿಕೆಟ್ ಪಡೆದು ಪಂಜಾಬ್ ಪರ ಗರಿಷ್ಠ ವಿಕೆಟ್ ಟೇಕರ್ ಎನಿಸಿಕೊಂಡರೂ, ಅವರ ಪ್ರದರ್ಶನ ಸ್ಥಿರವಾಗಿರಲಿಲ್ಲ. 10.20ರ ದುಬಾರಿ ಎಕಾನಮಿ ರೇಟ್‌ನಲ್ಲಿ ರನ್ ಬಿಟ್ಟುಕೊಟ್ಟ ಅವರು ಈ ಸೀಸನ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡಿದರು. 2025ರ ಐಪಿಎಲ್‌ನಲ್ಲಿ 17 ಪಂದ್ಯಗಳಿಂದ 21 ವಿಕೆಟ್ ಪಡೆದಿದ್ದ ಅವರ ಗ್ರಾಫ್ ಈ ಬಾರಿ ಕುಸಿದಿದೆ. ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಒಮ್ಮೆಯೂ ಟ್ರೋಫಿ ಗೆಲ್ಲದ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಸಾಲಿಗೆ ಸೇರಿದೆ.

