HomeLatest Newsಸಂಬಳ ಹೆಚ್ಚಾದಂತೆ ಖರ್ಚು ಹೆಚ್ಚಾಗುತ್ತಿದೆಯೇ ? 40 ದಾಟಿದವರು ಈ 6 ಸೂತ್ರಗಳನ್ನು ಪಾಲಿಸಿ.!

ಸಂಬಳ ಹೆಚ್ಚಾದಂತೆ ಖರ್ಚು ಹೆಚ್ಚಾಗುತ್ತಿದೆಯೇ ? 40 ದಾಟಿದವರು ಈ 6 ಸೂತ್ರಗಳನ್ನು ಪಾಲಿಸಿ.!

40ರ ಹರೆಯವು ಆರ್ಥಿಕವಾಗಿ ಅತ್ಯಂತ ನಿರ್ಣಾಯಕ ಘಟ್ಟ. ಈ ವಯಸ್ಸಿನಲ್ಲಿ ನೀವು ಹಿಂದೆಂದಿಗಿಂತಲೂ ಹೆಚ್ಚು ಸಂಪಾದಿಸುತ್ತಿರುತ್ತೀರಿ, ಹಾಗೆಯೇ ನಿಮ್ಮ ಖರ್ಚುಗಳೂ ದುಪ್ಪಟ್ಟಾಗಿರುತ್ತವೆ. ಮಕ್ಕಳ ಶಾಲಾ ಶುಲ್ಕ ಏರಿಕೆ, ವಯಸ್ಸಾಗುತ್ತಿರುವ ಪೋಷಕರ ಜವಾಬ್ದಾರಿ ಮತ್ತು ಮುಗಿಯದ ಗೃಹ ಸಾಲಗಳು ನಿಮ್ಮನ್ನು ಹೈರಾಣಾಗಿಸಬಹುದು. ಅರಿವಿಲ್ಲದೆಯೇ ನಿಮ್ಮ ಜೀವನಶೈಲಿಯೂ ಬದಲಾಗಿರುತ್ತದೆ. ಮುಖ್ಯವಾಗಿ, ‘ನಿವೃತ್ತಿ’ ಎಂಬುದು ಬರಿ ಕಲ್ಪನೆಯಾಗಿ ಉಳಿಯದೆ, ಕಣ್ಣೆದುರಿನ ವಾಸ್ತವವಾಗಿ ಕಾಣಿಸಿಕೊಳ್ಳುವ ದಶಕವಿದು. ಒಂದು ವೇಳೆ ನೀವು 40ರ ಹರೆಯದಲ್ಲಿದ್ದರೆ, ಹಣದ ವಿಷಯದಲ್ಲಿ ಹೀಗೆ ವ್ಯವಹರಿಸಿ.

1) ಆದಾಯದ ಏರಿಕೆಯನ್ನು ಹೂಡಿಕೆಯನ್ನಾಗಿ ಬದಲಿಸಿ
ನಿಮ್ಮ ಸಂಬಳ ಹೆಚ್ಚಾದಂತೆ, ಪ್ರತಿ ಬಾರಿಯ ಇನ್ಕ್ರಿಮೆಂಟ್ನಲ್ಲಿ ಕನಿಷ್ಠ ಅರ್ಧದಷ್ಟನ್ನು ದೀರ್ಘಕಾಲದ ಹೂಡಿಕೆಗಳಿಗೆ ಮೀಸಲಿಡಿ. ನಿಮ್ಮ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಅನುಗುಣವಾಗಿ NPS, EPF, PPF ಅಥವಾ ಮ್ಯೂಚುವಲ್ ಫಂಡ್ಗಳನ್ನು ಆಯ್ಕೆ ಮಾಡಿಕೊಳ್ಳಿ. ಹೂಡಿಕೆ ಮಾಡಲು ‘ಸರಿಯಾದ ಸಮಯ’ಕ್ಕಾಗಿ ಕಾಯಬೇಡಿ; ನಿಮ್ಮ ಆದಾಯ ಹೆಚ್ಚಿರುವ ಈ ಸಮಯವೇ ಹೂಡಿಕೆಗೆ ಅತ್ಯುತ್ತಮ ಸಮಯ.

2) ಸಾಲಗಳಿಂದ ಮುಕ್ತಿ ಪಡೆಯಿರಿ
40ರ ವಯಸ್ಸಿನಲ್ಲೂ ನೀವು ಕ್ರೆಡಿಟ್ ಕಾರ್ಡ್ ಬಾಕಿ ಅಥವಾ ವೈಯಕ್ತಿಕ ಸಾಲಗಳನ್ನು ಹೊಂದಿದ್ದರೆ, ನಿವೃತ್ತಿಯ ಹೊತ್ತಿಗೆ ಅವು ದೊಡ್ಡ ಹೊರೆಯಾಗಲಿವೆ. ಆದ್ದರಿಂದ, ಇಂತಹ ಸಾಲಗಳನ್ನು ಆದಷ್ಟು ಬೇಗ ತೀರಿಸಿ ನಿಶ್ಚಿಂತೆಯಾಗಿರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

3) ತುರ್ತು ನಿಧಿ (Emergency Fund) ಹೆಚ್ಚಿಸಿ
ನಿಮ್ಮ 20ರ ಹರೆಯದಲ್ಲಿ ಮೂರು ತಿಂಗಳ ಖರ್ಚಿಗೆ ಆಗುವಷ್ಟು ಹಣ ಉಳಿತಾಯವಿದ್ದರೆ ಸಾಕಾಗುತ್ತಿತ್ತು. ಆದರೆ 40ನೇ ವಯಸ್ಸಿನಲ್ಲಿ ಕನಿಷ್ಠ 6 ರಿಂದ 12 ತಿಂಗಳ ಖರ್ಚಿಗೆ ಬೇಕಾಗುವಷ್ಟು ತುರ್ತು ನಿಧಿಯನ್ನು ಹೊಂದಿರಲೇಬೇಕು. ಏಕೆಂದರೆ ಈ ಹಂತದಲ್ಲಿ ಕೆಲಸ ಕಳೆದುಕೊಂಡರೆ ಚೇತರಿಸಿಕೊಳ್ಳುವುದು ಕಷ್ಟ.

4) ಆರೋಗ್ಯ ವಿಮೆ ಕೇವಲ ಕಾರ್ಪೊರೇಟ್ ಕವರ್ ನಂಬಬೇಡಿ
ಕಚೇರಿ ನೀಡುವ ಆರೋಗ್ಯ ವಿಮೆ ಮಾತ್ರ ಸಾಕಾಗುವುದಿಲ್ಲ. ಇಂದಿನ ದಿನಗಳಲ್ಲಿ ಆಸ್ಪತ್ರೆಯ ವೆಚ್ಚಗಳು ಗಗನಕ್ಕೇರುತ್ತಿವೆ. ಆದ್ದರಿಂದ, ನಿಮ್ಮ ಕುಟುಂಬಕ್ಕಾಗಿ ಪ್ರತ್ಯೇಕವಾದ ‘ಫ್ಯಾಮಿಲಿ ಫ್ಲೋಟರ್ ಪಾಲಿಸಿ’ ಖರೀದಿಸಿ ಮತ್ತು ಅದಕ್ಕೆ ‘ಸೂಪರ್ ಟಾಪ್ ಅಪ್’ ಸೇರಿಸಿಕೊಳ್ಳಿ. ವೈದ್ಯಕೀಯ ವೆಚ್ಚಗಳು ಏರುತ್ತಿರುವುದರಿಂದ, ಈಗ ವಿಮೆ ನಿರ್ಲಕ್ಷಿಸಿದರೆ ನಿವೃತ್ತಿಯ ಉಳಿತಾಯವೆಲ್ಲಾ ಆಸ್ಪತ್ರೆ ಪಾಲಾಗಬಹುದು.

5) ದೊಡ್ಡ ಮೊತ್ತದ ಟರ್ಮ್ ಇನ್ಶೂರೆನ್ಸ್ ಪ್ಲಾನ್
ನಿಮ್ಮ ಕುಟುಂಬವು ನಿಮ್ಮ ಆದಾಯದ ಮೇಲೆ ಅವಲಂಬಿತವಾಗಿದ್ದರೆ, ನೀವು ಸರಿಯಾದ ಜೀವ ವಿಮೆಯನ್ನು ಹೊಂದಿರಬೇಕು. 50ನೇ ವಯಸ್ಸಿಗೆ ಹೋಲಿಸಿದರೆ 40ರಲ್ಲಿ ದೊಡ್ಡ ಮೊತ್ತದ ‘ಟರ್ಮ್ ಪ್ಲಾನ್’ ಅತ್ಯಂತ ಕಡಿಮೆ ಪ್ರೀಮಿಯಂಗೆ ಸಿಗುತ್ತದೆ. ತಡಮಾಡದೆ ಇಂದೇ ಪಾಲಿಸಿ ಪಡೆಯಿರಿ.

6) ಹೂಡಿಕೆಗಳ ಪೋರ್ಟ್ ಪೋಲಿಯೋ
ಹಲವು ವರ್ಷಗಳಿಂದ ನೀವು ವಿವಿಧ ಮ್ಯೂಚುವಲ್ ಫಂಡ್ಗಳಲ್ಲಿ ಹಣ ಹೂಡಿರಬಹುದು. ಈಗ ಅವುಗಳನ್ನು ಒಮ್ಮೆ ಪರಿಶೀಲಿಸಿ. ಸರಿಯಾದ ಲಾಭ ನೀಡದ ಫಂಡ್ಗಳನ್ನು ತೆಗೆದುಹಾಕಿ, ನಿಮ್ಮ ಗುರಿಗಳಿಗೆ ಅನುಗುಣವಾಗಿ ಎಲ್ಲವನ್ನೂ ವ್ಯವಸ್ಥಿತವಾಗಿ ಜೋಡಿಸಿ

    For Latest News Updates, Join Our Whatsapp Community🚩
    ranjith
    ranjith
    Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
    RELATED ARTICLES

    Most Popular