ಮಂಡ್ಯ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿರುವ ಎ.ಆರ್.ಎ.ಐ ಪರೀಕ್ಷಾ ಕೇಂದ್ರ ಭಾರೀ ಚರ್ಚೆಗೆ ಕಾರಣವಾಗಿತ್ತು. ಯೋಜನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಭೂಮಿ ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು.
ಈಗ ಯೋಜನೆಗಾಗಿ ಬಸರಾಳು ಸಮೀಪದ 110 ಎಕರೆ ಜಾಗದಲ್ಲಿ ಈ ಕೇಂದ್ರ ಸ್ಥಾಪನೆಗೆ ಕೇಂದ್ರ ತಂಡ ಪರಿಶೀಲನೆ ನಡೆಸಿದೆ.ಇದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಕನಸಿನ ಯೋಜನೆಯಾಗಿದ್ದು, ಮಂಡ್ಯದಲ್ಲಿ ಸಂಪೂರ್ಣ ಕೇಂದ್ರ ಸರ್ಕಾರದಿಂದಲೇ ಜಾರಿಯಾಗುತ್ತಿರುವ ಮೊದಲ ಯೋಜನೆಯಾಗಿದೆ.
ಮಂಡ್ಯದಲ್ಲಿ ಸ್ಥಾಪನೆ ಆಗಲಿರುವ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಪರೀಕ್ಷಾ ಕೇಂದ್ರದ ವೈಶಿಷ್ಟ್ಯ ಎಂದರೆ ಇದು ಸಂಪೂರ್ಣ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆ.
ಜೆಡಿಎಸ್ ಪಕ್ಷ ಯೋಜನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಮಂಡ್ಯದ ಸಂಸದರು ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ-ಉಕ್ಕು ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ನಿರ್ವಹಿಸುವ ಬೃಹತ್ ಕೈಗಾರಿಕೆ ಸಚಿವಾಲಯದ ಅಧೀನದ ಸಂಸ್ಥೆ ಎಂದು ಹೇಳಿದೆ.
ಇದರಿಂದಾಗಿ ಕರ್ನಾಟಕದ ಆಟೋಮೊಬೈಲ್ ಕ್ಷೇತ್ರಕ್ಕೆ ಸಹಕಾರಿಯಾಗಲಿದೆ. ಆರಂಭಿಕ ಹಂತದಲ್ಲಿ ರೂ. 500 ಕೋಟಿ, ನಂತರ ರೂ. 500 ಕೋಟಿ ಒಟ್ಟು ರೂ. 1,000 ಕೋಟಿಗೂ ಹೆಚ್ಚು ಹೂಡಿಕೆ.
ಮಂಡ್ಯ ಜಿಲ್ಲೆಗೆ ಬರುತ್ತಿರುವ ಪ್ರಪ್ರಥಮ ಕೇಂದ್ರ ಸರ್ಕಾರಿ ಉದ್ಯಮ ಸಂಸ್ಥೆ ಇದಾಗಿದೆ. ಇದು ಸಂಶೋಧನೆ, ಪರೀಕ್ಷಾ ಕೇಂದ್ರ ಸಕ್ಕರೆನಾಡಿಗೆ ಶ್ರೀ ನರೇಂದ್ರ ಮೋದಿ ಸರ್ಕಾರದ ಅಕ್ಕರೆಯ ಕಾಣಿಕೆ. ವಿಸಿ ಫಾರಂನಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಅಡಿಗಲ್ಲು ಬಿದ್ದ ಎರಡೇ ದಿನದಲ್ಲಿ ಮಂಡ್ಯಕ್ಕೆ ಬಂದ ಕೇಂದ್ರ ತಂಡ, ನುಡಿದಂತೆ ನಡೆಯುವುದು ಎಂದರೆ ಹೀಗೆ ಎಂದು ಜೆಡಿಎಸ್ ಪಕ್ಷ ಹೇಳಿದೆ.

