ಹೊಸ ಹಣಕಾಸು ವರ್ಷದ ಆರಂಭದೊಂದಿಗೆ ಅಂದರೆ ಏಪ್ರಿಲ್ 1, 2026 ರಿಂದ ಆದಾಯ ತೆರಿಗೆ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ಈ ಹೊಸ ನಿಯಮಗಳು ನೇರವಾಗಿ ನಿಮ್ಮ ಕೈಗೆ ಬರುವ ಸಂಬಳ (Take-home salary) ಮತ್ತು ಕಂಪನಿ ನೀಡುವ ಸವಲತ್ತುಗಳ ಮೇಲೆ ಪ್ರಭಾವ ಬೀರಲಿವೆ. ಇದುವರೆಗೆ ಕೇವಲ ಮೂಲ ವೇತನಕ್ಕೆ ಸೀಮಿತವಾಗಿದ್ದ ತೆರಿಗೆ ಲೆಕ್ಕಾಚಾರ, ಇನ್ಮುಂದೆ ಕಂಪನಿ ನೀಡುವ ಮನೆ, ಕಾರು ಮತ್ತು ಉಡುಗೊರೆಗಳನ್ನೂ ಒಳಗೊಳ್ಳಲಿದೆ.
ಸೌಲಭ್ಯಗಳೂ ಇನ್ಮುಂದೆ ತೆರಿಗೆ ವ್ಯಾಪ್ತಿಗೆ ಇದುವರೆಗೆ ಅನೇಕ ನೌಕರರು ಕೇವಲ ತಮ್ಮ ಬೇಸಿಕ್ ಸ್ಯಾಲರಿ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುತ್ತಿದ್ದರು. ಆದರೆ ಹೊಸ ನಿಯಮದ ಪ್ರಕಾರ, ಕಂಪನಿಯು ನಿಮಗೆ ನೀಡುವ ಪೂರ್ಣ ಪ್ಯಾಕೇಜ್ (CTC) ಅನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅಂದರೆ ಕಂಪನಿ ನೀಡುವ ಬಾಡಿಗೆ ರಹಿತ ಮನೆ, ಅಧಿಕೃತ ಕಾರು ಮತ್ತು ವಿವಿಧ ಭತ್ಯೆಗಳು ಇನ್ಮುಂದೆ ‘ಉಚಿತ’ವಾಗಿ ಉಳಿಯುವುದಿಲ್ಲ, ಅವುಗಳ ಮೌಲ್ಯದ ಮೇಲೂ ನೀವು ತೆರಿಗೆ ಪಾವತಿಸಬೇಕಾಗುತ್ತದೆ.
ನಿವೃತ್ತಿ ನಿಧಿ ಮತ್ತು ಮನೆ ಸೌಲಭ್ಯದ ಮೇಲಿನ ಬದಲಾವಣೆ
- ಪಿಎಫ್ ಮತ್ತು ಎನ್‌ಪಿಎಸ್: ನಿಮ್ಮ ಕಂಪನಿಯು ಪಿಎಫ್ (PF) ಅಥವಾ ಎನ್‌ಪಿಎಸ್ (NPS) ಗೆ ವಾರ್ಷಿಕವಾಗಿ 7.5 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಪಾವತಿಸುತ್ತಿದ್ದರೆ, ಆ ಹೆಚ್ಚುವರಿ ಮೊತ್ತದ ಮೇಲೆ ತೆರಿಗೆ ವಿಧಿಸಲಾಗುತ್ತದೆ.
- ಕಂಪನಿ ನೀಡುವ ಮನೆ: ಕಂಪನಿಯು ನಿಮಗೆ ವಸತಿ ಸೌಲಭ್ಯ ನೀಡಿದ್ದರೆ, ಅದರ ಮೌಲ್ಯವನ್ನು ನಗರದ ಗಾತ್ರಕ್ಕೆ ಅನುಗುಣವಾಗಿ (ಶೇ. 5 ರಿಂದ ಶೇ. 10 ರವರೆಗೆ) ಲೆಕ್ಕ ಹಾಕಿ ನಿಮ್ಮ ಒಟ್ಟು ಆದಾಯಕ್ಕೆ ಸೇರಿಸಲಾಗುತ್ತದೆ.
ಕಾರು ಮತ್ತು ಉಡುಗೊರೆಗಳ ಮೇಲೂ ತೆರಿಗೆ ಕಂಪನಿಯ ಕಾರನ್ನು ವೈಯಕ್ತಿಕ ಕೆಲಸಕ್ಕೆ ಬಳಸುತ್ತಿದ್ದರೆ, ಸಣ್ಣ ಕಾರಿಗೆ ತಿಂಗಳಿಗೆ 5,000 ರೂ. ಮತ್ತು ದೊಡ್ಡ ಕಾರಿಗೆ 7,000 ರೂ. ಮೌಲ್ಯವನ್ನು ನಿಮ್ಮ ಸಂಬಳಕ್ಕೆ ಸೇರಿಸಿ ತೆರಿಗೆ ಲೆಕ್ಕ ಹಾಕಲಾಗುತ್ತದೆ. ಡ್ರೈವರ್ ಸೌಲಭ್ಯವಿದ್ದರೆ ಹೆಚ್ಚುವರಿ 3,000 ರೂ. ಸೇರ್ಪಡೆಯಾಗಲಿದೆ. ಇನ್ನು ಕಂಪನಿಯಿಂದ ಪಡೆಯುವ 15,000 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಉಡುಗೊರೆಗಳು ಸಂಪೂರ್ಣವಾಗಿ ತೆರಿಗೆಗೆ ಒಳಪಡಲಿವೆ.
ಇತರ ಪ್ರಮುಖ ಬದಲಾವಣೆಗಳು
- ಕಡಿಮೆ ಬಡ್ಡಿಯ ಸಾಲ: ಕಂಪನಿಯಿಂದ ಕಡಿಮೆ ಬಡ್ಡಿಗೆ ಸಾಲ ಪಡೆದಿದ್ದರೆ, ಎಸ್‌ಬಿಐ ಬಡ್ಡಿ ದರಕ್ಕಿಂತ ಇರುವ ವ್ಯತ್ಯಾಸದ ಮೊತ್ತಕ್ಕೆ ತೆರಿಗೆ ಅನ್ವಯಿಸುತ್ತದೆ. ಆದರೆ 2 ಲಕ್ಷದವರೆಗಿನ ಸಾಲಕ್ಕೆ ವಿನಾಯಿತಿ ಇದೆ.
- ಕಚೇರಿ ಊಟ: 200 ರೂಪಾಯಿವರೆಗಿನ ಕಚೇರಿ ಊಟಕ್ಕೆ ತೆರಿಗೆ ಇಲ್ಲ, ಅದಕ್ಕಿಂತ ಹೆಚ್ಚಿನ ಮೊತ್ತ ತೆರಿಗೆ ವ್ಯಾಪ್ತಿಗೆ ಬರುತ್ತದೆ.
- ಡಿಜಿಟಲ್ ಕಂಪನಿಗಳಿಗೆ ಬಿಸಿ: ಭಾರತದಲ್ಲಿ 2 ಕೋಟಿಗಿಂತ ಹೆಚ್ಚು ಆದಾಯ ಅಥವಾ 3 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಿದೇಶಿ ಡಿಜಿಟಲ್ ಕಂಪನಿಗಳು ಇನ್ಮುಂದೆ ಭಾರತದಲ್ಲೇ ತೆರಿಗೆ ಪಾವತಿಸುವುದು ಕಡ್ಡಾಯ.
ಈ ಬದಲಾವಣೆಗಳಿಂದಾಗಿ ನಿಮ್ಮ ಸ್ಯಾಲರಿ ಸ್ಲಿಪ್ ಮತ್ತು ಫಾರ್ಮ್ 16 ನಲ್ಲಿ ಹೊಸ ಕಾಲಂಗಳು ಕಾಣಿಸಿಕೊಳ್ಳಲಿವೆ. ತೆರಿಗೆ ಹೊರೆ ತಪ್ಪಿಸಲು ನಿಮ್ಮ ಸಂಬಳದ ರಚನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಹಣಕಾಸು ತಜ್ಞರು ಅಥವಾ ನಿಮ್ಮ ಕಂಪನಿಯ ಹೆಚ್‌ಆರ್ ವಿಭಾಗವನ್ನು ಸಂಪರ್ಕಿಸುವುದು ಉತ್ತಮ.

