ಬೆಂಗಳೂರು: 158ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿ ಸಭೆಯಲ್ಲಿ, ಕರ್ನಾಟಕದ 13 ಜಿಲ್ಲೆಗಳಲ್ಲಿ 37 ಹೊಸ ಕೈಗಾರಿಕೆಗಳು ಮತ್ತು 2 ವಿಸ್ತರಣಾ ಯೋಜನೆಗಳಿಗೆ ₹4,824 ಕೋಟಿ ಹೂಡಿಕೆಗೆ ಅನುಮೋದನೆ ನೀಡಿದ್ದೇವೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ರಾಜ್ಯದ ಕೈಗಾರಿಕಾ ಬೆಳವಣಿಗೆ -ಉದ್ಯೋಗ ಸೃಷ್ಟಿಯತ್ತ ಮತ್ತೊಂದು ಪೂರಕ ಹೆಜ್ಜೆ ಇಟ್ಟಿದ್ದು, ₹4,824 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಸಮ್ಮತಿಸಲಾಗಿದೆ. 14,525+ ಉದ್ಯೋಗಗಳ ಸೃಷ್ಟಿಯಾಗಲಿದೆ. ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ ಸೇರಿದಂತೆ 13 ಜಿಲ್ಲೆಗಳಲ್ಲಿ ಕೈಗಾರಿಕಾ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಲಾಗಿದೆ.
ಶುಕ್ರವಾರ ನನ್ನ ಅಧ್ಯಕ್ಷತೆಯಲ್ಲಿ ಜರುಗಿದ 158ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ₹4,824 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ ನೀಡಲಾಯಿತು.
ರಾಜ್ಯದ 13 ಜಿಲ್ಲೆಗಳಾದ್ಯಂತ 37 ಹೊಸ ಕೈಗಾರಿಕೆಗಳು ಹಾಗೂ 2 ಹೆಚ್ಚುವರಿ ಯೋಜನೆಗಳಿಗೆ ಹಸಿರು ನಿಶಾನೆ ಸಿಕ್ಕಿದೆ. ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಕೋಲಾರ, ರಾಮನಗರ ಸೇರಿದಂತೆ ಅನೇಕ ಭಾಗಗಳಲ್ಲಿ ಕೈಗಾರಿಕಾ ಚಟುವಟಿಕೆಗಳು ವೇಗ ಪಡೆಯಲಿದ್ದು, ಇದರ ಫಲವಾಗಿ 14,525ಕ್ಕೂ ಹೆಚ್ಚು ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.
ಐಟಿ ಮೂಲಸೌಲಭ್ಯ, ಸಕ್ಕರೆ ಕಾರ್ಖಾನೆ, ಟೆಕ್ನಿಕಲ್ ಟೆಕ್ಸ್ ಟೈಲ್, ಕಂಪ್ರೆಸ್ಡ್ ಗ್ಯಾಸ್, ವೈಮಾಂತರಿಕ್ಷ, ಎಲೆಕ್ಟ್ರಾನಿಕ್ಸ್, ಸಾಫ್ಟ್ವೇರ್, ಚಿನ್ನಾಭರಣ ತಯಾರಿಕೆ ಹಾಗೂ ಪಂಚತಾರಾ ಹೋಟೆಲ್ ನಿರ್ಮಾಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಆಗುತ್ತಿರುವುದು ಕರ್ನಾಟಕವನ್ನು ಮತ್ತಷ್ಟು ಶಕ್ತಿಶಾಲಿ ಕೈಗಾರಿಕಾ ಕೇಂದ್ರವನ್ನಾಗಿಸುತ್ತದೆ.
₹50 ಕೋಟಿಗೂ ಹೆಚ್ಚು ಹೂಡಿಕೆಯ 22 ದೊಡ್ಡ ಹಾಗೂ ಮಧ್ಯಮ ಕೈಗಾರಿಕಾ ಯೋಜನೆಗಳು ಮಾತ್ರವೇ ₹3,908 ಕೋಟಿ ಹೂಡಿಕೆ ತರುತ್ತಿದ್ದು 12,475 ಉದ್ಯೋಗಗಳನ್ನು ಸೃಷ್ಟಿಸಲಿವೆ. ಜೊತೆಗೆ ₹15–₹50 ಕೋಟಿಯ 15 ಹೊಸ ಯೋಜನೆಗಳು ಹಾಗೂ ಹೆಚ್ಚುವರಿ ಹೂಡಿಕೆಯ 2 ಯೋಜನೆಗಳೂ ಸೇರಿ ಅಭಿವೃದ್ಧಿಯ ವೇಗವನ್ನು ಮತ್ತಷ್ಟು ಹೆಚ್ಚಿಸಲಿವೆ.
ಐಟಿ ಮೂಲಸೌಕರ್ಯ, ವಿದ್ಯುತ್ ಪರಿವರ್ತಕಗಳ ಉತ್ಪಾದನೆ, ತಾಂತ್ರಿಕ ಜವಳಿ, ಸಿಬಿಜಿ, ಸಕ್ಕರೆ, ಏರೋಸ್ಪೇಸ್, ಎಲೆಕ್ಟ್ರಾನಿಕ್ಸ್, ಆಭರಣ ಮತ್ತು ಆತಿಥ್ಯವನ್ನು ಒಳಗೊಂಡ ಈ ಯೋಜನೆಗಳು 14,525 ಉದ್ಯೋಗ ಸೃಷ್ಟಿಸಲಿವೆ.
ಪ್ರಮುಖ ಹೂಡಿಕೆಗಳಲ್ಲಿ ಕರ್ನಾಟಕ ಬಂಗಾರು ಶುಗರ್ಸ್, ಕ್ಲೀನ್ ಪ್ಯಾಕ್ಸ್, ತ್ರಿಶೂಲ್ ಬಿಲ್ಡ್‌ಟೆಕ್, ಟ್ರೌಲ್ಟ್ ಗ್ರಾಸ್, ಬಾಗ್ಮನೆ ಕನ್ಸ್ಟ್ರಕ್ಷನ್ಸ್ ಮತ್ತು ಟ್ಸುಯೊ ಮ್ಯಾನುಫ್ಯಾಕ್ಚರಿಂಗ್ ಸೇರಿವೆ. ಕರ್ನಾಟಕವು ಪ್ರಮುಖ ಹೂಡಿಕೆ ತಾಣವಾಗಿ ತನ್ನ ಸ್ಥಾನವನ್ನು ಬಲಪಡಿಸುವುದನ್ನು ಮುಂದುವರೆಸಿದೆ ಎಂದು ಮಾಹಿತಿ ನೀಡಿದ್ದಾರೆ.

