ಬೆಂಗಳೂರು : ಸಿಲಿಕಾನ್ ಸಿಟಿಯ ಐಷಾರಾಮಿ ಅಪಾರ್ಟ್‌ಮೆಂಟ್‌ಗಳಲ್ಲಿ ಸಾಕುಪ್ರಾಣಿಗಳ ವಿಚಾರಕ್ಕೆ ಶುರುವಾಗುವ ಕಿರಿಕಿರಿ ಈಗ ಬಡಿದಾಟದ ಹಂತಕ್ಕೆ ತಲುಪಿದೆ. ವರ್ತೂರಿನ ಪ್ರತಿಷ್ಠಿತ ಬ್ರಿಗೇಡ್ ಯುಟೊಪಿಯ (Brigade Utopia) ಅಪಾರ್ಟ್‌ಮೆಂಟ್‌ನಲ್ಲಿ ಶ್ವಾನ ಮಾಲೀಕ ಮತ್ತು ಹಿರಿಯ ನಾಗರಿಕರ ನಡುವೆ ನಡೆದ ಗಲಾಟೆ ಈಗ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗುವಂತೆ ಮಾಡಿದೆ.
ಅಪಾರ್ಟ್‌ಮೆಂಟ್ ನಿವಾಸಿ ತರುಣ್ ಅರೋರ ಅವರು ತಮ್ಮ ಸಾಕು ನಾಯಿಯನ್ನು ವಾಕಿಂಗ್ ಮಾಡಿಸಲು ಕರೆತಂದಿದ್ದರು. ಅಪಾರ್ಟ್‌ಮೆಂಟ್‌ನಲ್ಲಿ ಯೋಗ ಮತ್ತು ವ್ಯಾಯಾಮಕ್ಕೆ ಮೀಸಲಿಟ್ಟ ಜಾಗದಲ್ಲಿ ನಾಯಿ ಮೂತ್ರ ವಿಸರ್ಜನೆ ಮಾಡಿದ್ದೇ ಈ ಮಹಾ ಸಮರಕ್ಕೆ ಕಾರಣ. ಇದನ್ನು ಪ್ರಶ್ನಿಸಿದ ಅಲ್ಲಿದ್ದ ಏಳೆಂಟು ಮಂದಿ ಹಿರಿಯ ನಾಗರಿಕರು ಮತ್ತು ತರುಣ್ ನಡುವೆ ವಾಗ್ವಾದ ನಡೆದಿದೆ.
ಮಾತಿಗೆ ಮಾತು ಬೆಳೆದು ಸಂಯಮ ಕಳೆದುಕೊಂಡ ಹಿರಿಯ ನಾಗರಿಕರು, ತರುಣ್ ಅರೋರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ತರುಣ್ ಕೆಳಗೆ ಬಿದ್ದರೂ ಬಿಡದ ವೃದ್ಧರು, ಕಾಲಿನಿಂದ ಒದ್ದು ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಗಲಾಟೆ ತೀವ್ರವಾಗುತ್ತಿದ್ದಂತೆ ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ.ಘಟನೆಯಿಂದ ನೊಂದ ತರುಣ್ ಅರೋರ ಅವರು ವರ್ತೂರು ಠಾಣೆಯಲ್ಲಿ ದೂರು ದಾಖಲಿಸುವುದಲ್ಲದೆ, ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಹಿರಿಯ ನಾಗರಿಕರ ಪರವಾಗಿ ಮಹಿಳೆಯೊಬ್ಬರು ಪ್ರತಿದೂರು ನೀಡಿದ್ದು, ಗಂಭೀರ ಆರೋಪಗಳನ್ನು ಮಾಡಿದ್ದಾರೆ ತರುಣ್ ನಮ್ಮ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.ನಮ್ಮ ಮಕ್ಕಳು ವಿದೇಶದಲ್ಲಿದ್ದಾರೆ ಎಂದು ನಮಗೆ ಧಮ್ಕಿ ಹಾಕಿದ್ದಾರೆ.
ನನ್ನ ಹಿಂದೆ ದೊಡ್ಡ ಗುಂಪಿದೆ, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಿದ್ದಾರೆ.ಸದ್ಯ ವರ್ತೂರು ಪೊಲೀಸರು ಎರಡೂ ಕಡೆಯವರಿಂದ ದೂರು ಹಾಗೂ ಪ್ರತಿದೂರನ್ನು ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಮುಂದುವರಿದಿದ್ದು, ಯಾರು ತಪ್ಪು ಮಾಡಿದ್ದಾರೆ ಎಂಬುದು ಶೀಘ್ರದಲ್ಲೇ ಬಯಲಾಗಲಿದೆ.

