ಖ್ಯಾತ ಕಿರುತೆರೆ ಧಾರಾವಾಹಿ ‘ಅನುಪಮಾ’ ತನ್ನ ವಿಭಿನ್ನ ಕಥಾಹಂದರದಿಂದ ಸದಾ ಟಿಆರ್ಪಿ ರೇಟಿಂಗ್ನಲ್ಲಿ ಮುಂಚೂಣಿಯಲ್ಲಿರುತ್ತದೆ. ಆದರೆ ಈ ಬಾರಿ ಈ ಸೀರಿಯಲ್ ಸುದ್ದಿಯಾಗಿರುವುದು ಕಥೆಯ ಕಾರಣಕ್ಕಲ್ಲ, ಬದಲಾಗಿ ನಟಿ ರೂಪಾಲಿ ಗಂಗೂಲಿ ಅವರ ಅತಿರೇಕದ ಎನ್ನಬಹುದಾದ ಸಂಭಾಷಣೆಯ ವಿಡಿಯೋದಿಂದಾಗಿ. ನಾಯಕಿ ಅನುಪಮಾ ಅಬ್ಬರದ ದನಿಯಲ್ಲಿ ಎದುರಾಳಿಗೆ ವಾರ್ನಿಂಗ್ ನೀಡುವ ದೃಶ್ಯವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ಗೆ ಗುರಿಯಾಗಿದೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ ಅನುಪಮಾ ಪಾತ್ರಧಾರಿ ರೂಪಾಲಿ ಗಂಗೂಲಿ ಮತ್ತು ರಜನಿ ಪಾತ್ರಧಾರಿ ರಿಂಕು ಧವನ್ ನಡುವೆ ಭೀಕರ ಜಗಳ ನಡೆಯುತ್ತದೆ. ಈ ವೇಳೆ ಆವೇಶಕ್ಕೊಳಗಾಗುವ ಅನುಪಮಾ, “ನಿನ್ನನ್ನು ಕೂದಲಿನಿಂದ ಹಿಡಿದು ಎಳೆದು ತಂದು ಮಾರುಕಟ್ಟೆಯ ಮಧ್ಯೆ ಹಾಕಿ ಹೊಡೆಯುತ್ತೇನೆ. ಸುತ್ತಿಸಿ ಸುತ್ತಿಸಿ ಹೊಡೆಯುತ್ತೇನೆ, ಬೀಳಿಸಿ ಬೀಳಿಸಿ ಹೊಡೆಯುತ್ತೇನೆ, ಓಡಿಸಿ ಓಡಿಸಿ ಹೊಡೆಯುತ್ತೇನೆ. ಕೈ ದಣಿದರೆ ಕಾಲಿನಿಂದ, ಕಾಲು ದಣಿದರೆ ಮಾತುಗಳಿಂದಲೇ ಹೊಡೆಯುತ್ತೇನೆ. ನಿನ್ನ ಮೈಮೇಲಿನ ನೋವಿಗೇ ಗೊಂದಲವಾಗಬೇಕು ಅಷ್ಟು ಹೊಡೆಯುತ್ತೇನೆ” ಎಂಬ ಅರ್ಥ ಬರುವ ವಿಚಿತ್ರ ಅಬ್ಬರದ ಡೈಲಾಗ್ ಹೊಡೆದಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಧಾರಾವಾಹಿಯ ಲೇಖಕರ ಮೇಲೆ ಮುಗಿಬಿದ್ದಿದ್ದಾರೆ. “ಇವರು ಮೀಮ್ಸ್ ಮಾಡಲೆಂದೇ ಇಂತಹ ಸೀರಿಯಲ್ ತಯಾರಿಸುತ್ತಿದ್ದಾರೆ” ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು “ದಯವಿಟ್ಟು ಈ ರೈಟರ್ ಕೈಯಲ್ಲಿದ್ದ ಪೆನ್ನನ್ನು ಯಾರಾದರೂ ಕಿತ್ತುಕೊಳ್ಳಿ” ಎಂದು ಕಿಡಿಕಾರಿದ್ದಾರೆ. ಇನ್ನು ಕೆಲವರು ಖ್ಯಾತ ಮ್ಯೂಸಿಕ್ ಕಂಪೋಸರ್ ಯಶ್ ರಾಜ್ ಮುಖಾತೆ ಅವರನ್ನು ಟ್ಯಾಗ್ ಮಾಡಿ, ಈ ಡೈಲಾಗ್ಗೆ ಒಂದು ಮ್ಯೂಸಿಕ್ ಮಿಕ್ಸ್ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ.
ಧಾರಾವಾಹಿಯ ಗಂಭೀರ ದೃಶ್ಯವೊಂದು ಈಗ ಇಡೀ ಅಂತರ್ಜಾಲದಲ್ಲಿ ಹಾಸ್ಯದ ವಸ್ತುವಾಗಿ ಮಾರ್ಪಟ್ಟಿರುವುದು ಚಿತ್ರತಂಡಕ್ಕೆ ಅಬಾಜೂ ತಂದಿದೆ. ಸದ್ಯ ಈ ಬಗ್ಗೆ ಅನುಪಮಾ ತಂಡದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದರೂ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ‘ಘುಮಾ ಘುಮಾ ಕೆ ಮಾರುಂಗಿ’ ಡೈಲಾಗ್ ಭಾರಿ ಸದ್ದು ಮಾಡುತ್ತಿದೆ.

