ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಗೂ ಮುನ್ನವೇ ಸಾಲು ಸಾಲು ವಿವಾದಗಳಿಗೆ ಗುರಿಯಾಗುತ್ತಿದೆ. ಇದೀಗ ಚಿತ್ರದ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪ ಕೇಳಿಬಂದಿದೆ.
ಚಿತ್ರದ ಕೆಲವು ದೃಶ್ಯಗಳು ಕ್ರೈಸ್ತ ಧರ್ಮಕ್ಕೆ ಮತ್ತು ದೇವದೂತರಿಗೆ ಅಪಮಾನ ಮಾಡುವಂತಿವೆ ಎಂದು ಆರೋಪಿಸಿ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ಈಗ ಕಾನೂನು ಹೋರಾಟಕ್ಕೆ ಇಳಿದಿದೆ. ಒಕ್ಕೂಟದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಅವರು ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗೃಹ ಸಚಿವರು, ಸೆನ್ಸಾರ್ ಬೋರ್ಡ್ ಮತ್ತು ಫಿಲ್ಮ್ ಚೇಂಬರ್ ಸೇರಿದಂತೆ ವಿವಿಧ ಇಲಾಖೆಗಳಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ ಏನಿದೆ
ಚಿತ್ರದ ದೃಶ್ಯಗಳಲ್ಲಿ ಕ್ರೈಸ್ತ ಧರ್ಮದ ಪವಿತ್ರ ದೇವದೂತ ಸಂತ ಮಿಕಯೇಲ್ (Saint Michael) ಅವರಿಗೆ ಅಪಮಾನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ದೇವದೂತರ ಪ್ರತಿಮೆ ಅಥವಾ ಚಿತ್ರಗಳ ಮುಂದೆ ಅಶ್ಲೀಲವಾಗಿ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇದು ಕ್ರೈಸ್ತ ಸಮುದಾಯಕ್ಕೆ ತೀವ್ರ ಮುಜುಗರ ಉಂಟುಮಾಡಿದೆ ಎಂದು ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.
ದೃಶ್ಯಗಳ ಕತ್ತರಿ ಹಾಗೂ ಕ್ಷಮೆಗೆ ಆಗ್ರಹ: ಕೂಡಲೇ ಚಿತ್ರದಲ್ಲಿರುವ ಇಂತಹ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಬೇಕು ಮತ್ತು ಚಿತ್ರತಂಡವು ಬಹಿರಂಗವಾಗಿ ಕ್ರೈಸ್ತ ಸಮುದಾಯದ ಕ್ಷಮೆಯಾಚಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಸಂಕಷ್ಟದಲ್ಲಿ ‘ಟಾಕ್ಸಿಕ್’ ಚಿತ್ರ ತಂಡ
ಈಗಾಗಲೇ ಚಿತ್ರೀಕರಣದ ಸೆಟ್ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯಲಾಗಿದೆ ಎಂಬ ಆರೋಪದ ಮೇಲೆ ಅರಣ್ಯ ಇಲಾಖೆಯಿಂದ ತನಿಖೆ ಎದುರಿಸುತ್ತಿರುವ ಚಿತ್ರತಂಡಕ್ಕೆ, ಈಗ ಈ ಧಾರ್ಮಿಕ ವಿವಾದ ಹೊಸ ತಲೆನೋವಾಗಿ ಪರಿಣಮಿಸಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದ ಬಗ್ಗೆ ಚಿತ್ರತಂಡ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಈಗಾಗಲೇ ಈ ಚಿತ್ರದ ಟೀಸರ್ನಲ್ಲಿನ ಕೆಲವು ದೃಶ್ಯಗಳು ‘ಅಶ್ಲೀಲ’ವಾಗಿವೆ ಎಂದು ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆಯಾಗಿತ್ತು. ಮಾರ್ಚ್ 19, 2026 ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಈ ವಿವಾದಗಳು ಚಿತ್ರದ ಮೇಲೆ ಯಾವ ರೀತಿ ಪ್ರಭಾವ ಬೀರಲಿವೆ ಎಂಬುದನ್ನು ಕಾದುನೋಡಬೇಕಿದೆ.

