ಬೆಂಗಳೂರು: ಪೋಲೀಸ್ ಇಲಾಖೆ ಕೆಲವು ಠಾಣೆಗಳಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಇನ್ನು ಕೆಲವೆಡೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸುಮಾರು 88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲಾಗಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿರುವುದು ಅಕ್ಷಮ್ಯ ಅಪರಾಧ. ರಾಜ್ಯ ಸರ್ಕಾರ ಮಾತ್ರವಲ್ಲದೆ, ಪೋಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವಂಥ ಕೆಲಸವಿದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 2003ರಿಂದ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆ ದೇಶದಲ್ಲಿಯೇ ಉತ್ತಮ ಪೋಲೀಸ್ ಠಾಣೆಗಳ ಸಾಲಿನಲ್ಲಿ ಮೂರನೇ ಸ್ಥಾನ ಪಡೆದಿದೆ ಎಂದರು.
ಪೋಲೀಸ್ ಸಬ್ ಇನ್ಸ್ಪೆಕ್ಟರ್, ಎ ಎಸ್ ಪಿ, ಡಿ ವೈ ಎಸ್ ಪಿ , ಎಸಿಪಿ ಇವರಿಗೆ ಗೊತ್ತಿಲ್ಲದೆ ಯಾವ ಅಪರಾಧವೂ ನಡೆಯಲು ಸಾಧ್ಯವಿಲ್ಲ. ಪೊಲೀಸರು ಜಾಗರೂಕತೆಯಿಂದ ಕೆಲಸ ಮಾಡಬೇಕೆಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ವಿಶೇಷವಾಗಿ ದುರ್ಬಲರಿಗೆ ರಕ್ಷಣೆ ನೀಡಬೇಕು. ಬಲಾಢ್ಯರ ಕೈಗೊಂಬೆಗಳಂತೆ ಕೆಲಸ ಮಾಡಬಾರದು ಎಂದರು.
ಪೊಲೀಸರು ಜಾಗರೂಕತೆಯಿಂದ, ದಕ್ಷತೆಯಿಂದ ಕೆಲಸ ಮಾಡಿದರೆ ರಾಜ್ಯವನ್ನು ಮಾದಕ ವಸ್ತು ಮುಕ್ತವನ್ನಾಗಿಸಬಹುದು. ಕಳ್ಳತನ, ಸುಲಿಗೆ, ದರೋಡೆ, ಕೊಲೆ ಮುಂತಾದ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, ಸೈಬರ್ ಅಪರಾಧ ಹಾಗೂ ಡ್ರಗ್ಸ್ ಅಪರಾಧಗಳು ಕಡಿಮೆಯಾಗುತ್ತಿಲ್ಲ. ಯುವಜನರು ಇದರಿಂದ ಹಾಳಾಗುತ್ತಿದ್ದು, ಕರ್ನಾಟಕವನ್ನು ಮಾದಕ ವಸ್ತು ಮುಕ್ತಾ ರಾಜ್ಯವಾಗಿಸಬೇಕೆಂದು ಸರ್ಕಾರ ಘೋಷಣೆ ಮಾಡಿದೆ. ಪೊಲೀಸರು ಜಾಗರೂಕತೆಯಿಂದ, ದಕ್ಷತೆಯಿಂದ ಕೆಲಸ ಮಾಡಿದರೆ ರಾಜ್ಯವನ್ನು ಮಾದಕ ವಸ್ತು ಮುಕ್ತವನ್ನಾಗಿಸಬಹುದು. ಜೊತೆಗೆ ಯುವಜನರನ್ನೂ ರಕ್ಷಿಸಬಹುದು ಎಂದರು.
ರಾಜ್ಯವನ್ನು ಮಾದಕವಸ್ತು ಮುಕ್ತ ಮಾಡಬೇಕಾದರೆ ಡ್ರಗ್ಸ್ ಮಾರಾಟ ಮಾಡುವವರನ್ನು ವಿಚಾರಣೆ ಮಾಡಿದರೆ ಅಥವಾ ಮಾದಕ ವಸ್ತು ವ್ಯಸನಿಗಳನ್ನು ವಿಚಾರಿಸಿದರೆ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಬಹುದು. ಸರಬರಾಜು ಮಾಡುವವರನ್ನು ವಿಚಾರಣೆಗೆ ಗುರಿ ಪಡಿಸಿದರೆ ಉತ್ಪಾದಕರು ಹಾಗೂ ಸರಬರಾಜುದಾರರು ಯಾರು ಎಂದು ತಿಳಿಯುತ್ತದೆ. ಎಲ್ಲ ಪೊಲೀಸ್ ಠಾಣೆಗಳಲ್ಲಿ ಈ ಕೆಲಸವನ್ನು ತಕ್ಷಣದಿಂದಲೇ ಮಾಡಬೇಕೆಂದು ಸೂಚಿಸಲಾಗಿದೆ. ವಿದೇಶಿಯರು ಜಾಮೀನಿನ ಮೇಲೆ ಬಿಡುಗಡೆಯಾಗಿ ಇಲ್ಲೇ ಉಳಿದರೆ ಪುನಃ ಅದೇ ಅಪರಾಧದಲ್ಲಿ ತೊಡಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ವಿದೇಶಿಯರನ್ನು ಯಾವುದೇ ಮುಲಾಜಿಲ್ಲದೆ ಅವರ ದೇಶಕ್ಕೆ ಕಳುಹಿಸಬೇಕು ಎಂದು ಸೂಚಿಸಲಾಗಿದೆ ಎಂದರು.
ಪೋಲೀಸ್ ಠಾಣೆಗಳಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್, ಡಿ ವೈ ಎಸ್ ಪಿ ಗಳ ಮೇಲೆ ಮೇಲಾಧಿಕಾರಿಗಳು ನಿಗಾ ಇಡಲು ಸೂಚಿಸಲಾಗಿದೆ. ಅಪರಾಧಗಳಲ್ಲಿ ಅವರು ಶಾಮೀಲಾಗಬಾರದು.
ಮಹಾರಾಷ್ಟ್ರದ ಪೊಲೀಸರಿಗೆ ಬೆಂಗಳೂರಿಗೆ ಬಂದು ಡ್ರಗ್ಸ್ ಪತ್ತೆಹಚ್ಚಲು ಸಾಧ್ಯವಾದರೆ, ರಾಜ್ಯದ ಪೊಲೀಸರು ಏಕೆ ಮಾಡಬಾರದು? ರಾಜ್ಯದ ಪೊಲೀಸರು ಇದನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದು, ಸಂಬಂಧಪಟ್ಟ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಸೈಬರ್ ಅಪರಾಧ ಮತ್ತು ಮಾದಕವಸ್ತು ನಿಯಂತ್ರಣಕ್ಕೆ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಬೇಕಾಗುತ್ತದೆ. ಹೊಸ ಕಾನೂನು ಅಥವಾ ತಿದ್ದುಪಡಿಯನ್ನು ಮುಂಬರುವ ದಿನಗಳಲ್ಲಿ ತರಬೇಕಾಗುತ್ತದೆ ಎಂದು ತಿಳಿಸಿದರು.

