ನವದೆಹಲಿ: ಹರಿಯಾಣವಿ ಗಾಯಕ ಹಾಗೂ ಯೂಟ್ಯೂಬರ್ ಅಂಕಿತ್ ಬಲ್ಯಾನ್ ಮೇಲೆ ಗುಂಡಿನ ದಾಳಿ ನಡೆಸಿದ್ದರೆಂದು ಶಂಕಿಸಲಾದ ಇಬ್ಬರು ಆರೋಪಿಗಳನ್ನು ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ.
ಮೃತ ಶಂಕಿತರನ್ನು 24 ವರ್ಷದ ಸುಮಿತ್ ಮತ್ತು 22 ವರ್ಷದ ಮೋಹಿತ್ ಎಂದು ಗುರುತಿಸಲಾಗಿದೆ. ಇಬ್ಬರೂ ಹರಿಯಾಣದ ಸೋನಿಪತ್ ನಿವಾಸಿಗಳಾಗಿದ್ದು, ಗೋಗಿ ಗ್ಯಾಂಗ್‌ನ ಸದಸ್ಯರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಮೇಲೂ ತಲಾ ₹50 ಸಾವಿರ ಬಹುಮಾನ ಘೋಷಿಸಲಾಗಿತ್ತು. ಮೋಹಿತ್ ವಿರುದ್ಧ ಹರಿಯಾಣದಲ್ಲಿ ಸುಮಾರು 14 ಪ್ರಕರಣಗಳು ದಾಖಲಾಗಿದ್ದರೆ, ಸುಮಿತ್ ವಿರುದ್ಧ ಒಂದು ಪ್ರಕರಣವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 26ರಂದು ಶಾಮ್ಲಿಯಲ್ಲಿರುವ ಜಿಮ್‌ನಿಂದ ಹೊರಬರುತ್ತಿದ್ದ ಅಂಕಿತ್ ಬಲ್ಯಾನ್ ಮೇಲೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಅವರು ಮೃತಪಟ್ಟಿದ್ದರು. ಘಟನೆಯ ದೃಶ್ಯಗಳು ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಸಿಸಿಟಿವಿ ದೃಶ್ಯಗಳಲ್ಲಿ ಅಂಕಿತ್ ಜಿಮ್‌ನಿಂದ ಹೊರಬಂದು ಕಾರಿನತ್ತ ತೆರಳುತ್ತಿದ್ದಾಗ ದುಷ್ಕರ್ಮಿಗಳು ಸಮೀಪಿಸಿ ಕನಿಷ್ಠ 16 ಸುತ್ತು ಗುಂಡು ಹಾರಿಸಿರುವುದು ಕಂಡುಬಂದಿತ್ತು.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನುಳಿದ ಇಬ್ಬರು ಶಂಕಿತರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಹತ್ಯೆಯ ಹೊಣೆ ಹೊತ್ತಿದ್ದ ಗೋಗಿ ಗ್ಯಾಂಗ್
ಅಂಕಿತ್ ಬಲ್ಯಾನ್ ಹತ್ಯೆಯ ಒಂದು ದಿನದ ಬಳಿಕ, ತಾನು ಗೋಗಿ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಹತ್ಯೆಯ ಹೊಣೆ ಹೊತ್ತಿದ್ದ.
ಇನ್ನು, ಆರೋಪಿಗಳನ್ನು ನಾಲ್ಕು ದಿನಗಳಲ್ಲಿ ಬಂಧಿಸದಿದ್ದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ನಿವಾಸದ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಂಕಿತ್ ಬಲ್ಯಾನ್ ಅವರ ಪತ್ನಿ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಶನಿವಾರ ಹಿರಿಯ ಪೊಲೀಸ್ ಅಧಿಕಾರಿಗಳು ಅವರ ಕುಟುಂಬವನ್ನು ಭೇಟಿ ಮಾಡಿದ್ದರು.
ಈ ಹತ್ಯೆ ಪ್ರಕರಣದ ಕುರಿತು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ಕಾನೂನು ಸುವ್ಯವಸ್ಥೆ ಬಗ್ಗೆ ಟೀಕೆ ಮಾಡಿವೆ.
ಹತ್ಯೆಗೆ ಕೆಲವೇ ಗಂಟೆಗಳ ಮುನ್ನ ಹಾಡಿದ್ದ ಅಂಕಿತ್
ಅಂಕಿತ್ ಬಲ್ಯಾನ್ ಹತ್ಯೆಯಾಗುವ ಕೆಲವೇ ಗಂಟೆಗಳ ಮುನ್ನ ತಮ್ಮ ಹೊಸ ಹಾಡಿನ ಕೆಲವು ಸಾಲುಗಳನ್ನು ಹಾಡಿರುವ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.ಅವರು ಕಾರಿನಲ್ಲಿ ಕುಳಿತು ‘ಬೇಬಿ ಬದ್ಮಾಶ್’ ಹಾಡಿನ ಸಾಲುಗಳನ್ನು ಹಾಡಿದ್ದರು. ಈ ಹಾಡು ಕಳೆದ ತಿಂಗಳಷ್ಟೇ ಬಿಡುಗಡೆಯಾಗಿತ್ತು.ಶಾಮ್ಲಿ ನಿವಾಸಿಯಾಗಿದ್ದ ಅಂಕಿತ್ ಬಲ್ಯಾನ್ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 5 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳು ಮತ್ತು ಯೂಟ್ಯೂಬ್‌ನಲ್ಲಿ 3 ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳು ಇದ್ದರು.
‘ಭಾರಿ ಕೋರ್ಟ್ ಮೇಂ ಗೋಲಿ ಮಾರೆಂಗೆ’, ‘ಬಾಡಿ ಬಿಲ್ಡರ್’, ‘PTI’ ಮತ್ತು ‘ಏಕ್ ಖಟೋಲಾ ಜೈಲ್ ಕೆ ಭೀತರ್’ ಸೇರಿದಂತೆ ಹಲವು ಹಾಡುಗಳು ಜನಪ್ರಿಯವಾಗಿದ್ದವು.ಅವರ ಹಾಡುಗಳಲ್ಲಿ ಗನ್‌ಗಳು, ಹೊಡೆದಾಟ, ಎಸ್‌ಯುವಿ ವಾಹನಗಳು ಹಾಗೂ ಹಿಂಸೆ, ಪೈಪೋಟಿ ಮತ್ತು ಸವಾಲಿನಂತಹ ವಿಷಯಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದವು.
ಅಂಕಿತ್ ಬಲ್ಯಾನ್ ಮಾಜಿ ಕಬಡ್ಡಿ ಆಟಗಾರ
ಅಂಕಿತ್ ಬಲ್ಯಾನ್ ಅವರ ಸಹೋದರ ಮಾಧ್ಯಮಗಳಿಗೆ ನೀಡಿದ ಮಾಹಿತಿ ಪ್ರಕಾರ, ಅವರು 2013-14ರವರೆಗೆ ರಾಜ್ಯಮಟ್ಟದ ಕಬಡ್ಡಿ ಆಡಿದ್ದರು. ದೆಹಲಿ, ಭೋಪಾಲ್ ಸೇರಿದಂತೆ ಹಲವು ಕಡೆ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.ಕಾಲಿನ ಮೂಳೆ ಮುರಿತಕ್ಕೆ ಒಳಗಾದ ಬಳಿಕ ಕಬಡ್ಡಿ ತೊರೆದು ನಂತರ ಜಿಮ್‌ಗೆ ಸೇರಿದ್ದರು. ಸುಮಾರು 2022ರಿಂದ ಹರಿಯಾಣವಿ ಸಂಗೀತ ಕ್ಷೇತ್ರದಲ್ಲಿ ತಮ್ಮ ಆಸಕ್ತಿಯನ್ನು ಬೆಳೆಸಿಕೊಂಡರು. ಮುಂದಿನ ವರ್ಷಗಳಲ್ಲಿ ಗಾಯಕ, ಗೀತರಚನೆಕಾರ ಹಾಗೂ ಸಂಗೀತ ಸಂಯೋಜಕರಾಗಿ 50ಕ್ಕೂ ಹೆಚ್ಚು ಹಾಡುಗಳಲ್ಲಿ ಕೆಲಸ ಮಾಡಿದ್ದರು.

