ಸಿನಿಮಾ ಹಾಗೂ ಕ್ರೀಡಾ ಜಗತ್ತಿನ ಜೋಡಿಯೊಂದು ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ಪರಸ್ಪರ ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳಿಗೆ ಈಗ ಹೊಸ ತಿರುವು ಸಿಕ್ಕಿದೆ. ಅನಿರುದ್ಧ್ ಅವರ ಮಾವ, ಹಿರಿಯ ನಟ ವೈ ಜಿ ಮಹೇಂದ್ರನ್ ನೀಡಿರುವ ಹೇಳಿಕೆ ಈ ಮದುವೆ ಸುದ್ದಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ವೈ ಜಿ ಮಹೇಂದ್ರನ್, ಅನಿರುದ್ಧ್ ಅತ್ಯಂತ ಮೃದು ಸ್ವಭಾವದ ಹುಡುಗ ಎಂದು ಹೊಗಳಿದ್ದಾರೆ. ಕುಟುಂಬದ ಮೂಲಗಳಿಂದ ತಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಈ ಮದುವೆ ಬಹುತೇಕ ಖಚಿತವಾಗಿದೆ ಎಂದು ಅವರು ತಿಳಿಸಿದ್ದಾರೆ. ಇದು ಅತ್ಯಂತ ದೊಡ್ಡ ಮಟ್ಟದಲ್ಲಿ ನಡೆಯಲಿರುವ ವಿವಾಹವಾಗಲಿದ್ದು, ಈ ಶುಭ ಸಂದರ್ಭದಲ್ಲಿ ನಾನು ಅನಿರುದ್ಧ್ ಅವರಿಗೆ ಮುಂಚಿತವಾಗಿಯೇ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಹೇಂದ್ರನ್ ಹೇಳಿದ್ದಾರೆ.
ಇದೇ ವೇಳೆ ಕಾವ್ಯಾ ಮಾರನ್ ಅವರ ವ್ಯಕ್ತಿತ್ವವನ್ನು ಶ್ಲಾಘಿಸಿರುವ ಅವರು, ಕಾವ್ಯಾ ಕೇವಲ ಸಾಮಾನ್ಯ ಹುಡುಗಿಯಲ್ಲ. ಸನ್‌ರೈಸರ್ಸ್ ಹೈದರಾಬಾದ್‌ನಂತಹ ದೊಡ್ಡ ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಸಾಮರ್ಥ್ಯ ಅವರಲ್ಲಿದೆ. ತಂದೆಯ ಉದ್ಯಮದ ಗುಣಗಳು ಅವರಿಗೂ ಬಂದಿವೆ. ಅನಿರುದ್ಧ್ ಮತ್ತು ಕಾವ್ಯಾ ಇಬ್ಬರೂ ಅತ್ಯುತ್ತಮ ಜೋಡಿಯಾಗಲಿದ್ದು, ಮದುವೆಯ ನಂತರ ಇಬ್ಬರೂ ಸೇರಿ ಸಂಗೀತ ಮತ್ತು ಉದ್ಯಮದ ಕ್ಷೇತ್ರದಲ್ಲಿ ಹೊಸ ಎತ್ತರವನ್ನು ತಲುಪಲಿ ಎಂದು ಅವರು ಹಾರೈಸಿದ್ದಾರೆ.
ಕಳೆದ ವರ್ಷದಿಂದಲೇ ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ನಟ ರಜನಿಕಾಂತ್ ಅವರು ಕಾವ್ಯಾ ತಂದೆ ಕಲಾನಿಧಿ ಮಾರನ್ ಅವರನ್ನು ಭೇಟಿಯಾಗಿ ಈ ಮದುವೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬ ಚರ್ಚೆಯೂ ನಡೆದಿತ್ತು. ಈ ಹಿಂದೆ ಅನಿರುದ್ಧ್ ಅವರು ಮದುವೆಯ ಸುದ್ದಿಗಳನ್ನು ವದಂತಿ ಎಂದು ಸಾಮಾಜಿಕ ಜಾಲತಾಣದಲ್ಲಿ ತಳ್ಳಿಹಾಕಿದ್ದರೂ, ಸದ್ಯ ಮಾವ ವೈ ಜಿ ಮಹೇಂದ್ರನ್ ನೀಡಿರುವ ಈ ಹೇಳಿಕೆ ಸಿನಿರಂಗದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಆದರೆ ಈ ಬಗ್ಗೆ ಅನಿರುದ್ಧ್ ಅಥವಾ ಕಾವ್ಯಾ ಮಾರನ್ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

