HomeKarnatakaಆನೆಕೊಂಡ ಮರಡಿ ಬಸವೇಶ್ವರ ಕಾರ್ಣಿಕ: ಶುಭಫಲಗಳ ಜೊತೆಗೆ ರೈತರಿಗೆ ಎಚ್ಚರಿಕೆಯ ಸಂದೇಶ: ಗೊರವಯ್ಯ ನುಡಿದ...

ಆನೆಕೊಂಡ ಮರಡಿ ಬಸವೇಶ್ವರ ಕಾರ್ಣಿಕ: ಶುಭಫಲಗಳ ಜೊತೆಗೆ ರೈತರಿಗೆ ಎಚ್ಚರಿಕೆಯ ಸಂದೇಶ: ಗೊರವಯ್ಯ ನುಡಿದ ಭವಿಷ್ಯವಾಣಿಯ ಅರ್ಥವೇನು?

ದಾವಣಗೆರೆ: ದಾವಣಗೆರೆಯ ಆನೆಕೊಂಡದ ಪ್ರಸಿದ್ಧ ಮರಡಿ ಬಸವೇಶ್ವರ ಸ್ವಾಮಿಯ ಕಾರ್ಣಿಕ ನುಡಿ ಹೊರಬಿದ್ದಿದ್ದು, ಶುಭಸುದ್ದಿಯ ಜೊತೆಗೆ ರೈತರಿಗೆ ಎಚ್ಚರಿಕೆ ಕುರಿತ ಭವಿಷ್ಯವಾಣಿಯನ್ನು ಗೊರವಯ್ಯ ನುಡಿದಿದ್ದಾರೆ.

” ಶೃಂಗಾರದ ವನಕೆ ಮುತ್ತೈದೆಯರು ಸೇರಗ ಹೊಡೆದರಲೇ , ಕೆಂಪು ಗೊಂಬಿ ಹಾವಳಿ ಹೆಚ್ಚಾದೀತಲೇ ಎಚ್ಚರ ” ಎಂದು ಗೊರವಯ್ಯ ನುಡಿದಿದ್ದಾರೆ. ನಾಡಿನಲ್ಲಿ ಉತ್ತಮ ಮಳೆ-ಬೆಳೆ, ಮಹಿಳಾ ಪ್ರಾಬಲ್ಯ ಹಾಗೂ ಜನಸಾಮಾನ್ಯರಿಗೆ ಆಡಳಿತಾತ್ಮಕ ಆಸರೆ ದೊರೆಯುವ ಶುಭ ಸೂಚನೆ ನೀಡಿದ್ದಾರೆ. ಆದರೆ, ಕೃಷಿ ಬೆಳೆಗೆ ಕೀಟಬಾಧೆ ಹಾಗೂ ಜನರಿಗೆ ಸಾಂಕ್ರಾಮಿಕ ರೋಗದ ‘ಕೆಂಪು ಗೊಂಡಿ’ ಹಾವಳಿ ಹೆಚ್ಚಾಗುವ ಅಪಾಯವಿದ್ದು, ರೈತರು ಮತ್ತು ಜನಸಾಮಾನ್ಯರು ಎಚ್ಚರ ವಹಿಸಬೇಕೆಂದು ಕಾರ್ಣಿಕದ ವಾಣಿಯಲ್ಲಿ ಹೇಳಲಾಗಿದೆ.

ಪ್ರಸಿದ್ಧ ಧಾರ್ಮಿಕ ಹಾಗೂ ಐತಿಹಾಸಿಕ ತಾಣವಾದ ದಾವಣಗೆರೆ ಹೊರವಲಯದ ಆನೆಕೊಂಡದ ಮರಡಿ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತದೆ. ಇದೇ ಸಂದರ್ಭದಲ್ಲಿ ಕಾರ್ಣಿಕ ಅಥವಾ ದೈವವಾಣಿ ನುಡಿ ಹೊರಬೀಳುತ್ತದೆ. ಇದು ಜನಸಾಮಾನ್ಯರು ಹಾಗೂ ಕೃಷಿಕರಲ್ಲಿ ತೀವ್ರ ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಾರಿಯ ಕಾರ್ಣಿಕ ನುಡಿ:

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರ್ಣಿಕದ ಗೊರವಯ್ಯನವರು ಬಿಲ್ಲನ್ನೇರಿ ದೈವವಾಣಿಯನ್ನು ನುಡಿದಿದ್ದಾರೆ. “ರಾಮ ರಾಮ ಅಂದು ನುಡಿದಿತ್ತಲೆ, ಶೃಂಗಾರದ ವನಕೆ ಮುತ್ತೈದೆಯರು ಸೇರಗ ಹೊಡೆದರಲೇ, ನರಲೋಕದ ಜನಕೆ ಆನೆ ಆಶೀರ್ವಾದ ಮಾಡಿತ್ತಲೆ, ಕೆಂಪು ಗೊಂಡಿಬಿ ಹಾವಳಿ ಹೆಚ್ಚಾದೀತಲೇ ಎಚ್ಚರ, ಎಚ್ಚರ, ಎಚ್ಚರ” ಎಂದಿದ್ದಾರೆ.

ಕಾರ್ಣಿಕ ನುಡಿಯ ಅರ್ಥ:

ಭಕ್ತರು ಹಾಗೂ ಹಿರಿಯರು ಈ ದೈವವಾಣಿಯನ್ನು ವಿವಿಧ ಆಯಾಮಗಳಲ್ಲಿ ವಿಶ್ಲೇಷಿಸುತ್ತಿದ್ದಾರೆ. ‘ಶೃಂಗಾರದ ವನಕೆ ಮುತ್ತೈದೆಯರು ಸೇರಗ ಹೊಡೆದರಲೇ’ ಅಂದರೆ, ‘ಶೃಂಗಾರದ ವನ’ ಅರ್ಥವು ನಳನಳಿಸುವ ಪ್ರಕೃತಿ ಮತ್ತು ಹಸಿರು ಪರಿಸರ ಎಂದಾಗುತ್ತದೆ. ಈ ಬಾರಿ ಉತ್ತಮ ಮಳೆ – ಬೆಳೆಯಾಗುವ ಮೂಲಕ ನಾಡು ಸಮೃದ್ಧವಾಗಲಿದೆ. ಮುತ್ತೈದೆಯರು ಸೆರಗು ಬೀಸಿ ಸಂಭ್ರಮಿಸುವುದು ಮಂಗಳಕರ ಸನ್ನಿವೇಶದ ಸಂಕೇತ ಎನ್ನಲಾಗಿದೆ.

ಮತ್ತೊಂದೆಡೆ, ರಾಜಕೀಯ ಹಿನ್ನೆಲೆಯಲ್ಲಿ, ಸಮಾಜ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಪ್ರಾಬಲ್ಯ ಹೆಚ್ಚಾಗಲಿದೆ. ಮಹಿಳಾ ಪರ ಯೋಜನೆಗಳು ಮತ್ತು ನಾರೀ ಶಕ್ತಿಯ ಪಾತ್ರ ಮುನ್ನೆಲೆಗೆ ಬರಲಿದೆ ಎಂಬುದನ್ನು ಇದು ಸೂಚಿಸುತ್ತದೆ ಎನ್ನಲಾಗಿದೆ.

‘ನರಲೋಕದ ಜನಕೆ ಆನೆ ಆಶೀರ್ವಾದ ಮಾಡಿತ್ತಲೆ’ ಎಂದರೆ, ಆನೆಯು ರಾಜವೈಭವ, ಶಕ್ತಿ ಹಾಗೂ ಅಧಿಕಾರ ಪ್ರಭುತ್ವದ ಸಂಕೇತ. ಆನೆ ಸಾಮಾನ್ಯ ಜನರಿಗೆ (ನರಲೋಕದ ಜನರಿಗೆ) ಆಶೀರ್ವಾದ ಮಾಡಿದೆ ಎಂದರೆ, ಆಡಳಿತಾರೂಢ ಸರ್ಕಾರಗಳಿಂದ ಜನಸಾಮಾನ್ಯರಿಗೆ ಆರ್ಥಿಕ ಮತ್ತು ಸಾಮಾಜಿಕ ಬೆಂಬಲ ಸಿಗಲಿದೆ. ಆಡಳಿತ ವ್ಯವಸ್ಥೆಯು ಜನರ ಕಲ್ಯಾಣಕ್ಕಾಗಿ ಸಕಾರಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವ ಸೂಚನೆಯಾಗಿದೆ.

‘ಕೆಂಪು ಗೊಂಡಿ(ಬಿ) ಹಾವಳಿ ಹೆಚ್ಚಾದೀತಲೇ’ ಎಂದರೆ, ಈ ಸಾಲು ಕೃಷಿ ಹಾಗೂ ಆರೋಗ್ಯ ಕ್ಷೇತ್ರದ ಪಾಲಿಗೆ ಕಳವಳಕಾರಿಯಾಗಿದೆ. ಅಡಿಕೆ, ಹತ್ತಿ, ಭತ್ತ, ಮೆಕ್ಕೆಜೋಳ ಮುಂತಾದ ಪ್ರಮುಖ ಬೆಳೆಗಳಿಗೆ ಕೆಂಪು ನುಸಿ, ಗೊಂಡಿ ಹುಳು ಅಥವಾ ಕೀಟಬಾಧೆ ವ್ಯಾಪಕವಾಗಿ ತಗುಲುವ ಸಾಧ್ಯತೆ ಇದೆ. ಇದರಿಂದ ರೈತರಿಗೆ ಬೆಳೆ ನಷ್ಟದ ಭೀತಿ ಎದುರಾಗಬಹುದು.

ಕಾರ್ಣಿಕದ ಕೊನೆಯಲ್ಲಿ ಮೂರು ಬಾರಿ ‘ಎಚ್ಚರ’ ಎಂದು ಹೇಳಿರುವುದು ಸಮಾಜಕ್ಕೆ ನೀಡಿರುವ ಸ್ಪಷ್ಟ ಎಚ್ಚರಿಕೆಯಾಗಿದೆ. ಸಮೃದ್ಧಿಯ ಹೊಸ್ತಿಲಲ್ಲಿದ್ದರೂ ನಿರ್ಲಕ್ಷ್ಯ ವಹಿಸಿದರೆ ಕೀಟಬಾಧೆ, ಸಾಂಕ್ರಾಮಿಕ ಪಿಡುಗು ಅಥವಾ ಸಾಮಾಜಿಕ ಅಶಾಂತಿ ದೊಡ್ಡ ಹೊಡೆತ ನೀಡಬಹುದು. ಆದ್ದರಿಂದ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಎಂಬ ಸಂದೇಶ ಇದಾಗಿದೆ.

ಕಾರ್ಣಿಕ ನುಡಿಯುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಭಕ್ತರು ಜಯಘೋಷ ಮೊಳಗಿಸಿದರು. ಈ ಬಾರಿಯ ಕಾರ್ಣಿಕವು ಒಟ್ಟಾರೆಯಾಗಿ ನಾಡಿಗೆ ಶುಭದಾಯಕವಾಗಿದ್ದರೂ, ಕೃಷಿ ಹಾಗೂ ಆರೋಗ್ಯ ವಿಚಾರದಲ್ಲಿ ತೀವ್ರ ಮುನ್ನೆಚ್ಚರಿಕೆ ಅಗತ್ಯವಿದೆ ಎಂದು ಭಕ್ತರು ಮತ್ತು ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular