ಕೇಂದ್ರದ ಮಾಜಿ ಸಚಿವ, ಹಿಂದೂ ಫೈರ್ ಬ್ರಾಂಡ್ ಅನಂತ್ ಕುಮಾರ್ ಹೆಗಡೆ ಹೆಸರು ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರು ರಾಜ್ಯ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಸುದ್ದಿಗಳು ವೈರಲ್ ಆಗುತ್ತಿವೆ.
ಈ ನಡುವೆ ಭಟ್ಕಳದಲ್ಲಿ ನಡೆಯುವ ‘ಹಿಂದೂ ಸಂಗಮ’ ಕಾರ್ಯಕ್ರಮ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕಾರ್ಯಕ್ರಮ ಉದ್ದೇಶಿಸಿ ಅನಂತ್ ಕುಮಾರ್ ಹೆಗಡೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಭಟ್ಕಳದಲ್ಲಿ ಮಾರ್ಚ್ 8ರಂದು ‘ಹಿಂದೂ ಸಂಗಮ’ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಅನಂತ್ ಕುಮಾರ್ ಹೆಗಡೆ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮದ ಮೂಲಕ ಅವರು ರಾಜ್ಯ ರಾಜಕೀಯಕ್ಕೆ ಬರುತ್ತಾರೆ ಎಂಬುದು ಸದ್ಯದ ಸುದ್ದಿ.
ಭಟ್ಕಳದಿಂದ ಸಂಘಟನೆಯಲ್ಲಿ ತೊಡಗಿಕೊಳ್ಳುವ ಮೂಲಕ ಅನಂತ್ ಕುಮಾರ್ ಹೆಗಡೆ ರಾಜ್ಯ ರಾಜಕೀಯಕ್ಕೆ ಬರಲು ವೇದಿಕೆ ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ ಎಂಬುದು ನಿರೀಕ್ಷೆಯಾಗಿದೆ. ಆದರೆ ಅನಂತ್ ಕುಮಾರ್ ಹೆಗಡೆ ರಾಜ್ಯ ರಾಜಕೀಯದ ಕುರಿತು ಯಾವುದೇ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿಲ್ಲ.
2024ರ ಲೋಕಸಭೆ ಚುನಾವಣೆಯಲ್ಲಿ ಅನಂತ್ ಕುಮಾರ್ ಹೆಗಡೆ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ನೀಡಲಿಲ್ಲ. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರ ಕನ್ನಡದಿಂದ ಅಭ್ಯರ್ಥಿಯಾದರು. ಚುನಾವಣೆಯಲ್ಲಿ ಗೆದ್ದು ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಟ್ಟರು.
ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅನಂತ್ ಕುಮಾರ್ ಹೆಗಡೆ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದಾರೆ. ಆದರೆ ಈಗ ಕೆಲವು ದಿನಗಳಿಂದ ಅವರ ಹೆಸರು ಭಾರೀ ವೈರಲ್ ಆಗುತ್ತಿದೆ.
ಹಿಂದೂ ಸಂಗಮ ಕಾರ್ಯಕ್ರಮ ಆಯೋಜಕರು ಮತ್ತು ಸಂಘ ಪರಿವಾರದ ಕೆಲವು ನಾಯಕರು ಅನಂತ್ ಕುಮಾರ್ ಹೆಗಡೆ ಅವರನ್ನು ರಾಜಕೀಯವಾಗಿ ಸಕ್ರಿಯವಾಗಿಸುವ ಉದ್ದೇಶದಿಂದಲೇ ಈ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಭಟ್ಕಳಕ್ಕೆ ಅನಂತ್ ಕುಮಾರ್ ಹೆಗಡೆ ಸ್ವಾಗತಿಸಲು ಯೋಜನೆ ರೂಪಿಸಲಾಗಿದೆ. ಭಟ್ಕಳ ಆಗಮನಕ್ಕೂ ಮುನ್ನ ರೋಡ್ ಶೋ ನಡೆಸುವ ಚಿಂತನೆ ಸಹ ಇದೆ. ಅನಂತ್ ಕುಮಾರ್ ಹೆಗಡೆ ಕಾರಣಕ್ಕಾಗಿಯೇ ಭಟ್ಕಳದ ಹಿಂದೂ ಸಂಗಮ ಕಾರ್ಯಕ್ರಮ ಈಗ ಕುತೂಹಲಕ್ಕೆ ಕಾರಣವಾಗಿದೆ.

