ಬೆಂಗಳೂರು: ನ್ಯಾಯಾಲಯ ನೀಡುವ ಬಲವಂತದ ಕ್ರಮ ಜರುಗಿಸಬಾರದು ಎನ್ನುವ ಮಧ್ಯಂತರ ಆದೇಶ ಕೇವಲ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಬಂಧನದಿಂದ ರಕ್ಷಣೆ ನೀಡುತ್ತದೆಯೇ ಹೊರತು ಶಾಸನಬದ್ಧ ತನಿಖೆಯ ಪ್ರಕ್ರಿಯೆಯನ್ನು ನಿರ್ಬಂಧಿಸುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಸಾರ್ವಜನಿಕರಿಂದ 7.9 ಕೋಟಿ ರೂ.ಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಆರೋಪದಡಿ ಖಾಸಗಿ ಕಂಪನಿ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಕಂಪನಿಯ ನಿರ್ದೇಶಕರ ಆಸ್ತಿ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯದ ಕ್ರಮ ಪ್ರಶ್ನಿಸಿ ಮಹಿಳಾ ನಿರ್ದೇಶಕಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ಈ ಸ್ಪಷ್ಟನೆ ನೀಡಿದೆ.
ಪ್ರಕರಣದಲ್ಲಿ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಕೋರ್ಟ್ ಆದೇಶ ನೀಡಿದ್ದರೂ ಜಾರಿ ನಿರ್ದೇಶನಾಲಯ(ಇ.ಡಿ.) ನಿಯಮ ಮೀರಿ ವರ್ತಿಸಿದೆ ಎಂದು ಅರ್ಜಿದಾರರು ವಾದಿಸಿದ್ದರು. ಆದರೆ ಈ ವಾದವನ್ನು ನಿರಾಕರಿಸಿದ ನ್ಯಾಯಪೀಠ, ನ್ಯಾಯಾಲಯಗಳು ಬಳಸುವ ಪ್ರತಿಯೊಂದು ಪದವೂ ನಿರ್ದಿಷ್ಟ ಕಾನೂನು ಅರ್ಥ ಹೊಂದಿರುತ್ತದೆ ಎಂದು ಹೇಳಿದೆ.
ಬಲವಂತದ ಕ್ರಮದಿಂದ ರಕ್ಷಣೆ ಎಂದರೆ ಬಂಧನದಿಂದ ಮಾತ್ರ ರಕ್ಷಣೆ. ನ್ಯಾಯಾಲಯವು ಸ್ಪಷ್ಟವಾಗಿ ತನ್ನ ಆದೇಶದಲ್ಲಿ ಮುಂದಿನ ಕ್ರಮ ಕೈಗೊಳ್ಳಬಾರದು ಎಂದು ಉಲ್ಲೇಖಿಸಿದ್ದರೆ ಮಾತ್ರ ತನಿಖೆಗೆ ತಡೆ ಸಿಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

